ADVERTISEMENT

ಟ್ವೆಂಟಿ–20 ಸರಣಿ: ಜ.12ಕ್ಕೆ ಮಹಿಳಾ ತಂಡದ ಆಯ್ಕೆ

ಪಿಟಿಐ
Published 7 ಜನವರಿ 2020, 16:29 IST
Last Updated 7 ಜನವರಿ 2020, 16:29 IST
ಮಹಿಳಾ ಕ್ರಿಕೆಟ್
ಮಹಿಳಾ ಕ್ರಿಕೆಟ್   

ಇಂದೋರ್‌: ಆಸ್ಟ್ರೇಲಿಯಾದಲ್ಲಿ ನಡೆಯುವ ತ್ರಿಕೋನ ಏಕದಿನ ಟ್ವೆಂಟಿ–20 ಸರಣಿಗೆ ಇದೇ ತಿಂಗಳ 12ರಂದು ಭಾರತ ಮಹಿಳಾ ತಂಡದ ಆಯ್ಕೆ ನಡೆಯಲಿದೆ.

ಅದೇ ದಿನ ವಿಶ್ವ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಗೆ ಸಂಭಾವ್ಯ ತಂಡವನ್ನೂ ಆಯ್ಕೆ ಮಾಡಲಾಗುತ್ತದೆ.

ಹರ್ಮನ್‌ಪ್ರೀತ್‌ ಕೌರ್‌ ಬಳಗವು ತ್ರಿಕೋನ ಸರಣಿಯಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ಎದುರು ಸೆಣಸಲಿದೆ. ಇದೇ ತಿಂಗಳ 31ರಂದು ಕ್ಯಾನ್‌ಬೆರಾದಲ್ಲಿ ನಡೆಯುವ ಮೊದಲ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್‌ ಮುಖಾಮುಖಿಯಾಗಲಿವೆ. ಮೂರೂ ತಂಡಗಳು ಪರಸ್ಪರ ಎರಡು ಸಲ ಎದುರಾಗಲಿದ್ದು, ಅಗ್ರ ಎರಡು ಸ್ಥಾನ ಪಡೆದವರು ಫೆಬ್ರುವರಿ 12ರಂದು ನಡೆಯುವ ಫೈನಲ್‌ನಲ್ಲಿ ಪೈಪೋಟಿ ನಡೆಸಲಿದ್ದಾರೆ.

ADVERTISEMENT

ವಿಶ್ವ ಟ್ವೆಂಟಿ–20 ಟೂರ್ನಿ ಫೆಬ್ರುವರಿ 21ರಂದು ಆರಂಭವಾಗಲಿದೆ.

ಹೋದ ತಿಂಗಳು ನಡೆದಿದ್ದ ಆಸ್ಟ್ರೇಲಿಯಾ ‘ಎ’ ಎದುರಿನ ಸರಣಿಯಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದ ಆಟಗಾರ್ತಿಯರನ್ನು ತಂಡಕ್ಕೆ ಆಯ್ಕೆಮಾಡುವ ನಿರೀಕ್ಷೆ ಇದೆ.

‘ಭಾರತ ತಂಡದ ಪಾಲಿಗೆ ತ್ರಿಕೋನ ಸರಣಿ ತುಂಬಾ ಮಹತ್ವದ್ದು. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ತಂಡಗಳನ್ನು ಮಣಿಸುವ ಸಾಮರ್ಥ್ಯ ನಮ್ಮವರಿಗೆ ಇದೆಯೇ ಎಂಬುದನ್ನು ಅರಿತುಕೊಳ್ಳಲು ಸರಣಿ ನೆರವಾಗಲಿದೆ. ಈ ಸರಣಿಯಲ್ಲಿ ಉತ್ತಮವಾಗಿ ಆಡಿದವರನ್ನು ವಿಶ್ವ ಟ್ವೆಂಟಿ–20 ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ’ ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.