ಆಸ್ಟ್ರೇಲಿಯಾ ತಂಡದ ನಾಯಕಿ ಅಲಿಸಾ ಹೀಲಿ ಬ್ಯಾಟಿಂಗ್
ವಿಶಾಖಪಟ್ಟಣಂ: ನಾಯಕಿ ಅಲಿಸಾ ಹೀಲಿ ಅವರ ಅಜೇಯ ಶತಕದ ಬಲದಿಂದ ಆಸ್ಟ್ರೇಲಿಯಾ ತಂಡವು ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು ಸುಲಭ ಜಯಸಾಧಿಸಿತು. ಇದರೊಂದಿಗೆ ಸೆಮಿಫೈನಲ್ ಪ್ರವೇಶಿಸಿತು.
ಎಸಿಎ–ವಿಡಿಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ 199 ರನ್‌ಗಳ ಗೆಲುವಿನ ಗುರಿಯನ್ನು ಆಸ್ಟ್ರೇಲಿಯಾ 24.5 ಓವರ್‌ಗಳಲ್ಲಿ ತಲುಪಿತು. 10 ವಿಕೆಟ್‌ಗಳ ಜಯಸಾಧಿಸಿತು. ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವು 5 ಪಂದ್ಯಗಳಲ್ಲಿ 4ರಲ್ಲಿ ಜಯಿಸಿದೆ. ಒಂದು ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ಒಟ್ಟು 9 ಅಂಕ ಗಳಿಸಿರುವ ತಂಡವು ನಾಲ್ಕರ ಘಟ್ಟಕ್ಕೆ ಲಗ್ಗೆ ಹಾಕಿತು. ಬಾಂಗ್ಲಾ ತಂಡವು ಸತತ ನಾಲ್ಕನೇ ಪಂದ್ಯದಲ್ಲಿ ಸೋತಿತು.
ಟಾಸ್ ಗೆದ್ದ ಬಾಂಗ್ಲಾ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಶೋಭನಾ ಮೊಸ್ತಾರೆ (ಔಟಾಗದೇ 66; 80ಎ, 4X9) ಅವರ ಏಕಾಂಗಿ ಹೋರಾಟದಿಂದ 50 ಓವರ್‌ಗಳಲ್ಲಿ 9ಕ್ಕೆ 198 ರನ್ ಗಳಿಸಿದರು. ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾದ ನಾಯಕಿ ಅಲಿಸಾ (ಔಟಾಗದೇ 113; 77ಎ, 4X20) ವಿಶ್ವಕಪ್ ಇತಿಹಾಸದಲ್ಲಿಯೇ ಎರಡನೇ ಅತಿ ವೇಗದ ಶತಕ ದಾಖಲಿಸಿದರು. ಅವರಿಗೆ ಫೋಬಿ ಲಿಚ್‌ಫೀಲ್ಡ್ (ಔಟಾಗದೇ 84; 72ಎ, 4X12, 6X1) ಉತ್ತಮ ಜೊತೆ ನೀಡಿದರು. ಇದರಿಂದಾಗಿ ತಂಡವು 24.5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 202 ರನ್ ಗಳಿಸಿತು.
ಅಲಿಸಾ ಅವರಿಗೆ ಇದು ಸತತ ಎರಡನೇ ಶತಕ. ಕಳೆದ ಪಂದ್ಯದಲ್ಲಿ ಭಾರತದ ಎದುರಿನ ಪಂದ್ಯದಲ್ಲಿ ಅಬ್ಬರದ ಶತಕ ದಾಖಲಿಸಿದ್ದರು. ಅಲಿಸಾ ಮತ್ತು ಲಿಚ್‌ಫೀಲ್ಡ್ ಅವರನ್ನು ಕಟ್ಟಿಹಾಕುವ ಬಾಂಗ್ಲಾ ಬೌಲರ್‌ಗಳ ಪ್ರಯತ್ನಗಳು ಫಲ ಕೊಡಲಿಲ್ಲ. ಇಬ್ಬರೂ ಬ್ಯಾಟರ್‌ಗಳು ನಿರಾಯಾಸವಾಗಿ ರನ್ ಗಳಿಸಿದರು.
ಸಂಕ್ಷಿಪ್ತ ಸ್ಕೋರು: ಬಾಂಗ್ಲಾದೇಶ: 50 ಓವರ್‌ಗಳಲ್ಲಿ 9ಕ್ಕೆ198 (ರುಬಿಯಾ ಹೈದರ್ 44, ಶರ್ಮಿನ್ ಅಕ್ತರ್ 19, ಶೋಭನಾ ಮೊಸ್ತಾರೆ ಔಟಾಗದೇ 66, ಆ್ಯಷ್ಲೆ ಗಾರ್ಡನರ್ 48ಕ್ಕೆ2, ಅನಾಬೆಲ್ ಸದರ್ಲೆಂಡ್ 41ಕ್ಕೆ2, ಅಲನಾ ಕಿಂಗ್ 18ಕ್ಕೆ2, ಜಾರ್ಜಿಯಾ ವೇರ್ಹಾಮ್ 22ಕ್ಕೆ2) ಆಸ್ಟ್ರೇಲಿಯಾ: 24.5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 202 (ಅಲಿಸಾ ಹೀಲಿ ಔಟಾಗದೇ 113, ಫೋಬಿ ಲಿಚ್‌ಫೀಲ್ಡ್ ಔಟಾಗದೇ 84) ಫಲಿತಾಂಶ: ಆಸ್ಟ್ರೇಲಿಯಾ ತಂಡಕ್ಕೆ 10 ವಿಕೆಟ್‌ಗಳ ಜಯ.
ಪಂದ್ಯಶ್ರೇಷ್ಠ: ಅಲನಾ ಕಿಂಗ್.
ಇಂದಿನ ಪಂದ್ಯ
ಶ್ರೀಲಂಕಾ–ದಕ್ಷಿಣ ಆಫ್ರಿಕಾ
ಪಂದ್ಯ ಆರಂಭ: ಮಧ್ಯಾಹ್ನ 3
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೊಸ್ಟಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.