ADVERTISEMENT

womens world cup: ಆಸೀಸ್‌ ಬೌಲಿಂಗ್‌ ದಾಳಿಗೆ ಸುಲಭ ತುತ್ತಾದ ದಕ್ಷಿಣ ಆಫ್ರಿಕಾ

ಪಿಟಿಐ
Published 25 ಅಕ್ಟೋಬರ್ 2025, 9:20 IST
Last Updated 25 ಅಕ್ಟೋಬರ್ 2025, 9:20 IST
   

ಇಂದೋರ್‌: ಅಲನಾ ಕಿಂಗ್ (7–2–18–7) ಅವರ ಲೆಗ್‌ಸ್ಪಿನ್ ಮೋಡಿಗೆ ಸಿಲುಕಿದ ದಕ್ಷಿಣ ಆಫ್ರಿಕಾ ತಂಡ, ಶನಿವಾರ ನಡೆದ ಮಹಿಳಾ ಏಕದಿನ ವಿಶ್ವಕಪ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡದ ಕೈಲಿ ಏಳು ವಿಕೆಟ್‌ಗಳ ಸೋಲನುಭವಿಸಿತು. ಈ ಗೆಲುವಿನಿಂದ ಆಸ್ಟ್ರೇಲಿಯಾ ಲೀಗ್‌ ಹಂತದಲ್ಲಿ ಅಗ್ರಸ್ಥಾನ ಪಡೆಯಿತು.

ಆಸ್ಟ್ರೇಲಿಯಾ ತಂಡವು ಇದೇ 30ರಂದು ನವಿ ಮುಂಬೈನಲ್ಲಿ ನಡೆಯಲಿರುವ ಸೆಮಿಫೈನಲ್‌ ಪಂದ್ಯದಲ್ಲಿ ಆತಿಥೇಯ ಭಾರತ ತಂಡವನ್ನು ಎದುರಿಸಲಿದೆ.

ಭಾರತ ತಂಡವು, ಭಾನುವಾರ ಬಾಂಗ್ಲಾದೇಶ ವಿರುದ್ಧ ಅಂತಿಮ ಲೀಗ್ ಪಂದ್ಯ ಗೆದ್ದರೂ ನಾಲ್ಕನೇ ಸ್ಥಾನಕ್ಕಿಂತ ಮೇಲೆರಲು ಸಾಧ್ಯವಾಗದ ಕಾರಣ ಮುಖಾಮುಖಿ ಪಕ್ಕಾ ಆಗಿದೆ. ದಕ್ಷಿಣ ಆಫ್ರಿಕಾ ಇನ್ನೊಂದು ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಆಡಲಿದೆ.

ADVERTISEMENT

ಹೋಳ್ಕರ್ ಕ್ರೀಡಾಂಗಣದಲ್ಲಿ ಅಲನಾ ಕಿಂಗ್ ಅವರ ಚಮತ್ಕಾರಿಕ ಬೌಲಿಂಗ್ ಎದುರು ದಕ್ಷಿಣ ಆಫ್ರಿಕಾ ಬ್ಯಾಟಿಂಗ್‌ ಮುಗ್ಗರಿಸಿತು. 6 ಓವರುಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ 32 ರನ್ ಗಳಿಸಿದ್ದ ದಕ್ಷಿಣ ಆಫ್ರಿಕಾ 24 ಓವರುಗಳಲ್ಲಿ 97 ರನ್ನಿಗೆ ಪತನಗೊಂಡಿತು. ಆಸ್ಟ್ರೇಲಿಯಾ 16.6 ಓವರುಗಳಲ್ಲೇ 3 ವಿಕೆಟ್‌ ಕಳೆದುಕೊಂಡು 98 ರನ್ ಬಾರಿಸಿತು. ತಾಹ್ಲಿಯಾ ಮೆಕ್‌ಗ್ರಾ ಪಡೆ ಗುರಿತಲುಪಿದಾಗ ಇನ್ನೂ 199 ಎಸೆತಗಳು ಉಳಿದಿದ್ದವು.

ಕಿಂಗ್‌, ಮಹಿಳಾ ಕ್ರಿಕೆಟ್‌ನ ಅತ್ಯಂತ ಕೌಶಲದ ಸ್ಪಿನ್ನರ್ ತಾವೆಂಬುದನ್ನು ಸಾಬೀತುಪಡಿಸಿದರು. ಇದು ಅವರ ಜೀವನಶ್ರೇಷ್ಠ ಸಾಧನೆಯೂ ಆಯಿತು. ಇದು ಮಹಿಳಾ ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ಪರ ಬೌಲರ್ ಒಬ್ಬರ ಶ್ರೇಷ್ಠ ಸಾಧನೆ ಮಾತ್ರವಲ್ಲ, ಯಾವುದೇ ತಂಡದ ಬೌಲರ್ ಒಬ್ಬರ ಶ್ರೇಷ್ಠ ಪ್ರದರ್ಶನವೆನಿಸಿತು.

ಕಿಂಗ್ ಅವರು ಅನುಭವಿಗಳಾದ ಸುನೆ ಲಸ್‌, ಅನೆರಿ ಡೆರ್ಕ್‌ಸನ್‌, ಮರೈಝನ್ ಕಾಪ್‌, ಕ್ಲೊಯೆ ಟ್ರಯಾನ್, ನದೀನ್ ಡಿ ಕ್ಲರ್ಕ್ ಅವರ ವಿಕೆಟ್‌ಗಳನ್ನು ಪಡೆದು ಹರಿಣ ಪಡೆಯ ಬೆನ್ನೆಲುಬು ಮುರಿದರು.

ಆಸ್ಟ್ರೇಲಿಯಾ ತಂಡವು ಆರಂಭ ಆಟಗಾರ್ತಿ ಫೋಬಿ ಲಿಚ್‌ಫೀಲ್ಡ್‌ ಮತ್ತು ಅನುಭವಿ ಎಲಿಸ್ ಪೆರಿ ಅವರನ್ನು ಬೇಗನೇ ಕಳೆದುಕೊಂಡಿತು. ಆದರೆ ಜಾರ್ಜಿಯಾ ವೋಲ್ (ಔಟಾಗದೇ 38) ಅವರು ಬೆತ್‌ ಮೂನಿ (42) ಜೊತೆ 76 ರನ್ ಜೊತೆಯಾಟವಾಡಿ ತಂಡದ ಗೆಲುವು ಖಚಿತಪಡಿಸಿದರು.

ಸಂಕ್ಷಿಪ್ತ ಸ್ಕೋರು:

ದಕ್ಷಿಣ ಆಫ್ರಿಕಾ: 24 ಓವರುಗಳಲ್ಲಿ 97 (ಲಾರಾ ವೋಲ್ವಾರ್ಟ್‌ 31, ಸಿನಲೊ ಜಾಫ್ತಾ 29, ಅಲನಾ ಕಿಂಗ್ 18ಕ್ಕೆ7)

ಆಸ್ಟ್ರೇಲಿಯಾ: 16.5 ಓವರುಗಳಲ್ಲಿ 3 ವಿಕೆಟ್‌ಗೆ 93 (ಜಾರ್ಜಿಯಾ ವೋಲ್‌ ಔಟಾಗದೇ 38, ಬೆತ್‌ ಮೂನಿ 42, ಅನ್ನಾಬೆಲ್‌ ಸದರ್‌ಲ್ಯಾಂಡ್‌ ಔಟಾಗದೇ 10)

ಪಂದ್ಯ ಶ್ರೇಷ್ಠ ಆಟಗಾರ್ತಿ: ಅಲನಾ ಕಿಂಗ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.