ಲಂಡನ್:ದಿ ಓವಲ್ ಕ್ರೀಡಾಂಗಣದಲ್ಲಿಶನಿವಾರ ನಡೆದ ಪಂದ್ಯದಲ್ಲಿಆಸ್ಟ್ರೇಲಿಯಾ 87 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಕಾಂಗರೂ ಪಡೆ ನೀಡಿದ 334 ರನ್‌ಗಳ ಗುರಿ ಬೆನ್ನೇರಿದ ಶ್ರೀಲಂಕಾ ತಂಡ 45.5 ಓವರ್‌ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 247 ಗಳಿಸಿತು.
ಆಟ ಆರಂಭಿಸಿದ ನಾಯಕ ದಿಮುತ ಕರುಣಾರತ್ನೆ ಮತ್ತು ಕುಶಾಲ ಪೆರೆರಾ ಭರ್ಜರಿ ಹೊಡೆತಗಳ ಮೂಲಕ ಉತ್ತಮ ಜತೆಯಾಟ ನೀಡಿದರು. ಶತಕದ ಜತೆಯಾಟವನ್ನು ಕಂಡ ಅಭಿಮಾನಿಗಳು ಜಯದ ನಿರೀಕ್ಷೆಯನ್ನು ಗಟ್ಟಿಗೊಳಿಸಿಕೊಂಡರು.
ಕ್ಷಣಕ್ಷಣದ ಸ್ಕೋರ್:https://bit.ly/2wV7cnQ
36 ಎಸೆತಗಳಲ್ಲಿ 52ರನ್ ಗಳಿಸಿದ್ದ ಕುಶಾಲ ಪೆರೆರಾ, ಮಿಷೆಲ್ ಸ್ಟಾರ್ಕ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ನಂತರದಲ್ಲಿ ಕಣಕ್ಕಿಳಿದ ಲಾಹಿರು ತಿರಿಮನ್ನೆ(16) ಮತ್ತು ಕುಶಾಲ ಮೆಂಡಿಸ್ (30) ತಂಡಕ್ಕೆ ಆಸರೆಯಾಗುವ ಪ್ರಯತ್ನಿಸಿದರೂ ಹೆಚ್ಚು ಸಮಯ ಕ್ರೀಸ್‌ನಲ್ಲಿ ಉಳಿಯಲಿಲ್ಲ.
ತಾಳ್ಮೆಯುತ ಆಟವಾಡಿದ ಕರುಣಾರತ್ನೆ 97 ರನ್ ಗಳಿಸಿ ಹೊರ ನಡೆದರು.
ಆಸ್ಟ್ರೇಲಿಯಾ ಪರ ಮಿಷೆಲ್ ಸ್ಟಾರ್ಕ್ 4 ವಿಕೆಟ್, ಕೇನ್ ರಿಚರ್ಡ್ಸನ್ 3, ಪ್ಯಾಟ್ ಕಮಿನ್ಸ್ 2 ಹಾಗೂ ಜೇಸನ್ ಬೆಹ್ರನ್‌ಡ್ರಾಫ್ 1 ವಿಕೆಟ್ ಪಡೆದರು.
ಮೊದಲ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾಶ್ರೀಲಂಕಾ ಬೌಲರ್‌ಗಳಿಗೆ ದಿಟ್ಟ ಉತ್ತರ ನೀಡುವ ಮೂಲಕ ಸವಾಲಿನ ಮೊತ್ತ ಪೇರಿಸಿದರು. ಕಾಂಗರೂ ಪಡೆ ನಾಯಕ ಆ್ಯರನ್ ಫಿಂಚ್ ಭರ್ಜರಿ ಶತಕ ಕ್ರಿಕೆಟ್ ಪ್ರಿಯರನ್ನು ಸೆಳೆಯಿತು.
ನಿಗದಿತ 50 ಓವರ್‌ಗಳಲ್ಲಿ ಆಸ್ಟ್ರೇಲಿಯಾ 7ವಿಕೆಟ್ ನಷ್ಟಕ್ಕೆ 334ರನ್ ದಾಖಲಿಸಿತು.
ಕ್ಷಣಕ್ಷಣದ ಸ್ಕೋರ್:https://bit.ly/2wV7cnQ
97 ಎಸೆತಗಳಲ್ಲಿ 100ರನ್ ಪೂರೈಸಿದಫಿಂಚ್‌ಬಿರುಸಿನ ಆಟ ಆಡಿದರು.ಸ್ಟೀವ್ ಸ್ಮಿತ್ ಮತ್ತು ಫಿಂಚ್ ಜೋಡಿ 150ಕ್ಕೂ ಅಧಿಕ ರನ್‌ಗಳಜತೆಯಾಟದಿಂದಾಗಿ ತಂಡ ಬಹುಬೇಗ 250ರ ಗಡಿ ದಾಟಿತು. ಏಕದಿನ ಪಂದ್ಯಗಳಲ್ಲಿ ಫಿಂಚ್ ಎರಡನೇ ಬಾರಿಗೆ ವೈಯಕ್ತಿಕ ದಾಖಲೆ 150 ರನ್ ದಾಖಲಿಸಿದರು. 132 ಎಸೆತಗಳಲ್ಲಿ 15 ಬೌಂಡರಿ ಹಾಗೂ 5 ಸಿಕ್ಸರ್‌ಗಳ ಸಹಿತ 153 ರನ್ ಗಳಿಸಿದರು. ಈ ಮೂಲಕ ವಿಶ್ವಕಪ್ ಟೂರ್ನಿಯ ಈವರೆಗಿನ ಪಂದ್ಯಗಳಲ್ಲಿ ಫಿಂಚ್ ಅತಿ ಹೆಚ್ಚು ಗಳಿಸಿದವರಾಗಿದ್ದಾರೆ. ಇದೇ ಟೂರ್ನಿಯಲ್ಲಿ ಇಂಗ್ಲೆಂಡ್‌ನಜೇಸನ್ ರಾಯ್ ವೈಯಕ್ತಿಕ ಗರಿಷ್ಠ ರನ್(153) ದಾಖಲೆಯನ್ನು ಸರಿಗಟ್ಟಿದ್ದಾರೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಶ್ರೀಲಂಕಾ ಆರಂಭದಲ್ಲಿಯೇ ವಿಕೆಟ್ ಕಬಳಿಸುವ ತಂತ್ರ ಫಲ ನೀಡಲಿಲ್ಲ. ಆ್ಯರನ್ ಫಿಂಚ್ ಮತ್ತು ಡೇವಿಡ್ ವಾರ್ನರ್ ಜೋಡಿ 80 ರನ್‌ಗಳ ಜತೆಯಾಟ ದಾಖಲಿಸಿತು. ತಾಳ್ಮೆಯ ಆಟ ಪ್ರದರ್ಶಿಸುತ್ತಿದ್ದ ವಾರ್ನರ್(26) ಧನಂಜಯ ಡಿಸಿಲ್ವಾ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ನಂತರ ಕಣಕ್ಕಿಳಿದ ಉಸ್ಮಾನ್ ಖ್ವಾಜಾ(10) ಹೆಚ್ಚು ಸಮಯ ನಿಲ್ಲಲಿಲ್ಲ. ನಾಲ್ಕನೇ ಕ್ರಮಾಂಕದಲ್ಲಿ ಆಡಿದ ಸ್ಟೀವ್ ಸ್ಮಿತ್ ಭರ್ಜರಿ ಹೊಡೆತಗಳ ಮೂಲಕ ಲಂಕಾ ಬೌಲರ್‌ಗಳನ್ನು ಕಾಡಿದರು. 59 ಎಸೆತಗಳಲ್ಲಿ 7 ಬೌಂಡರಿ, ಒಂದು ಸಿಕ್ಸರ್ ಸಹಿತ 73 ರನ್ ಗಳಿಸಿ ಲಸಿತ್ ಮಾಲಿಂಗ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಸ್ಮಿತ್ ಆಟ ಮುಗಿಸುವುದಕ್ಕೂ ಮುನ್ನ ಇಸುರು ಉಡಾನ ಬೌಲಿಂಗ್‌ನಲ್ಲಿ ಫಿಂಚ್ ಹೊರನಡೆದಿದ್ದರು.
ಐದನೇ ಕ್ರಮಾಂಕದಲ್ಲಿ ಗ್ಲೆನ್ ಮ್ಯಾಕ್ಸವೆಲ್ ಸಹ ಅಬ್ಬರಿಸಿದರು. 25ಎಸೆತಗಳಲ್ಲಿ 46ರನ್ ಗಳಿಸುವ ಮೂಲಕ ತಂಡ 300ರನ್ ಗಡಿ ದಾಟಲು ನೆರವಾದರು.
ಕೊನೆಯ ಓವರ್‌ಗಳಲ್ಲಿ ಕಾಂಗರೂ ಪಡೆ ರನ್ ಹರಿಸುವುದಕ್ಕೆಇಸುರು ಉಡಾನ ತಡೆಯಾದರು. 48ನೇ ಓವರ್‌ನಲ್ಲಿ ಅಲೆಕ್ಸ್ ಕ್ಯಾರಿ ಮತ್ತು ಪ್ಯಾಟ್ ಕಮ್ಮಿನ್ಸ್ ರನ್ ಔಟ್ ಮಾಡುವಮೂಲಕ ಗಮನ ಸೆಳೆದರು.ಇಸುರು ಉಡಾನ ಮತ್ತು ಧನಂಜಯ ಡಿಸಿಲ್ವಾ ತಲಾ 2 ವಿಕೆಟ್ ಕಬಳಿಸಿದರು. ಲಸಿತ್ ಮಾಲಿಂಗ 1 ವಿಕೆಟ್ ಪಡೆದರು.
ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಆಡಿರುವ ನಾಲ್ಕು ಪಂದ್ಯಗಳ ಪೈಕಿ ಭಾರತದ ಎದುರು ಮಾತ್ರ ಸೋತಿದೆ.
ಟೂರ್ನಿಯಲ್ಲಿ ಶ್ರೀಲಂಕಾ ತಂಡದ ನಾಲ್ಕು ಪಂದ್ಯಗಳ ಪೈಕಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಎದುರಿನ ಪಂದ್ಯಗಳು ಮಳೆಯಲ್ಲಿ ಕೊಚ್ಚಿಹೋಗಿದ್ದವು. ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು 10 ವಿಕೆಟ್‌ಗಳಿಂದ ಸೋತಿತ್ತು. ನಂತರದ ಪಂದ್ಯದಲ್ಲಿ ಅಫ್ಗಾನಿಸ್ತಾನದ ಎದುರು ಗೆಲುವು ಸಾಧಿಸಿತ್ತು. ಒಟ್ಟು ನಾಲ್ಕು ಪಾಯಿಂಟ್‌ಗಳೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.