ADVERTISEMENT

ಆ ಎರಡು ಸೋಲುಗಳ ಸುತ್ತ

​ಪ್ರಜಾವಾಣಿ ವಾರ್ತೆ
Published 8 ಮೇ 2019, 16:34 IST
Last Updated 8 ಮೇ 2019, 16:34 IST
ಕ‍ಪಿಲ್‌ ದೇವ್–ಪ್ರಜಾವಾಣಿ ಸಂಗ್ರಹ ಚಿತ್ರ
ಕ‍ಪಿಲ್‌ ದೇವ್–ಪ್ರಜಾವಾಣಿ ಸಂಗ್ರಹ ಚಿತ್ರ   

ರೌಂಡ್‌ ರಾಬಿನ್‌ ಹಂತದ ಹಾದಿಯಲ್ಲಿ ಸತತ ಎರಡು ಪಂದ್ಯಗಳನ್ನು ಗೆದ್ದು ವಿಶ್ವಾಸದಿಂದ ಮುನ್ನುಗ್ಗುತ್ತಿದ್ದ ಭಾರತಕ್ಕೆ ನಂತರ ಕಾಡಿದ್ದು ಸತತ ಎರಡು ಸೋಲು. ಜೂನ್ 13ರಂದು ಟ್ರೆಂಟ್‌ಬ್ರಿಡ್ಜ್‌ನಲ್ಲಿ ನಡೆದಿದ್ದ ಆಸ್ಟ್ರೇಲಿಯಾ ಎದುರಿನ ಪೈಪೋಟಿ ಹಾಗೂ ಜೂನ್‌ 15ರಂದು ದಿ ಓವಲ್‌ನಲ್ಲಿ ಆಯೋಜನೆಯಾಗಿದ್ದ ವೆಸ್ಟ್‌ ಇಂಡೀಸ್‌ ವಿರುದ್ಧದ ಹೋರಾಟದಲ್ಲಿ ‘ಕಪಿಲ್‌ ಡೆವಿಲ್ಸ್‌’ ಬಳಗ ಮುಗ್ಗರಿಸಿತ್ತು. ಈ ಎರಡೂ ಪಂದ್ಯಗಳಲ್ಲೂ ತಂಡ ಗುರಿ ಬೆನ್ನಟ್ಟಿತ್ತು.

*ಓವಲ್‌ ಅಂಗಳದಲ್ಲಿ ಟ್ರೆವರ್‌ ಚಾಪೆಲ್‌, ಭಾರತದ ಬೌಲರ್‌ಗಳನ್ನು ಪರಿ ಪರಿಯಾಗಿ ಕಾಡಿದ್ದರು.

*ಚಾಪೆಲ್‌ ಸಿಡಿಸಿದ ಆಕರ್ಷಕ ಶತಕದಿಂದಾಗಿ ಆಸ್ಟ್ರೇಲಿಯಾ, 60 ಓವರ್‌ಗಳಲ್ಲಿ 9 ವಿಕೆಟ್‌ಗೆ 320ರನ್‌ ಕಲೆಹಾಕಿತ್ತು.

ADVERTISEMENT

*131 ಎಸೆತಗಳಲ್ಲಿ 11 ಬೌಂಡರಿ ಸಹಿತ 110ರನ್ ಬಾರಿಸಿದ್ದ ಚಾಪೆಲ್‌ ‘ಪಂದ್ಯಶ್ರೇಷ್ಠ’ ಗೌರವಕ್ಕೂ ಭಾಜನರಾಗಿದ್ದರು.

*ನಾಯಕ ಕಿಮ್‌ ಹ್ಯೂಸ್‌ (52) ಮತ್ತು ಗ್ರಹಾಂ ಯಲೋ‍ಪ್‌ (ಔಟಾಗದೆ 66) ಅವರೂ ರನ್‌ ಕಾಣಿಕೆ ನೀಡಿದ್ದರು.

*ಆಸ್ಟ್ರೇಲಿಯಾ ಇನಿಂಗ್ಸ್‌ನಲ್ಲಿ ದಾಖಲಾದ ಏಕೈಕ ಸಿಕ್ಸರ್‌ ಸಿಡಿಸಿದ್ದು ಒಂಬತ್ತನೇ ಕ್ರಮಾಂಕದ ಆಟಗಾರ ಟಾಮ್ ಹಾಗನ್‌.

*ಅಲನ್‌ ಬಾರ್ಡರ್‌, ಆರನೇ ಕ್ರಮಾಂಕದಲ್ಲಿ ಆಡಿ 26ರನ್‌ ಕಲೆಹಾಕಿದ್ದರು.

*ಭಾರತದ ನಾಯಕ ಕಪಿಲ್‌ ದೇವ್‌ ಸೋಲಿನ ನಡುವೆಯೂ ಪ್ರಜ್ವಲಿಸಿದ್ದರು. ಐದು ವಿಕೆಟ್‌ ಉರುಳಿಸಿದ್ದ ಅವರು ಎರಡು ಕ್ಯಾಚ್ ಕೂಡಾ ಪಡೆದಿದ್ದರು.

*ಈ ಪಂದ್ಯದಲ್ಲಿ ಸುನಿಲ್‌ ಗಾವಸ್ಕರ್‌ ಆಡಿರಲಿಲ್ಲ. ಹೀಗಾಗಿ ರವಿಶಾಸ್ತ್ರಿ ಮತ್ತು ಕೃಷ್ಣಮಾಚಾರಿ ಶ್ರೀಕಾಂತ್ ಇನಿಂಗ್ಸ್‌ ಆರಂಭಿಸಿದ್ದರು.

*ಶಾಸ್ತ್ರಿ 11ರನ್ ಗಳಿಸಿ ನಿರ್ಗಮಿಸಿದರು. ನಂತರ ತಂಡ ಕುಸಿತದ ಹಾದಿ ಹಿಡಿದಿತ್ತು. ಮೋಹಿಂದರ್‌ ಅಮರನಾಥ್‌ ಸೇರಿದಂತೆ ಒಟ್ಟು ಐದು ಮಂದಿ ಒಂದಂಕಿ ಮೊತ್ತಕ್ಕೆ ಔಟಾಗಿದ್ದರು. 158ರನ್‌ಗಳಿಗೆ ತಂಡದ ಹೋರಾಟ ಮುಗಿದಿತ್ತು.

*ಈ ಹಣಾಹಣಿಯಲ್ಲಿ ಕಪಿಲ್‌ ಪಡೆ ನೀಡಿದ ಇತರೆ ರನ್‌ 25!

*ವಿಂಡೀಸ್‌ ಎದುರೂ ಭಾರತ ಬ್ಯಾಟಿಂಗ್‌ ವೈಫಲ್ಯ ಕಂಡಿತ್ತು. ಈ ಪಂದ್ಯದಲ್ಲೂ ಐದು ಮಂದಿ ಒಂದಕ್ಕಿ ಮೊತ್ತಕ್ಕೆ ಪೆವಿಲಿಯನ್‌ ಸೇರಿದ್ದರು.

*ಮೋಹಿಂದರ್‌ ಅಮರನಾಥ್ ಛಲದ ಆಟ ಗಮನ ಸೆಳೆದಿತ್ತು. 139ಎಸೆತ ಆಡಿದ್ದ ಅವರು 80ರನ್‌ ಗಳಿಸಿದ್ದರು.

*ಭಾರತದ ಇನಿಂಗ್ಸ್‌ನಲ್ಲಿ ಬೌಂಡರಿ, ಸಿಕ್ಸರ್‌ಗಳೇ ಇರಲಿಲ್ಲ.

*ಮೊದಲು ಬ್ಯಾಟ್‌ ಮಾಡಿದ್ದ ವಿಂಡೀಸ್‌ ಕೂಡಾ ಬ್ಯಾಟಿಂಗ್‌ ವೈಫಲ್ಯ ಕಂಡಿತ್ತು. ಆದರೆ ವಿವಿಯನ್‌ ರಿಚರ್ಡ್ಸ್‌ (119; 146ಎ, 6ಬೌಂ, 1ಸಿ) ಏಕಾಂಗಿಯಾಗಿ ಹೋರಾಡಿ ತಂಡದ ಮೊತ್ತ ಹೆಚ್ಚಿಸಿದ್ದರು.

*ಜೂನ್ 13ರಂದು ನಡೆದಿದ್ದ ‘ಎ’ ಗುಂಪಿನ ಪಂದ್ಯಗಳಲ್ಲಿ ಇಂಗ್ಲೆಂಡ್‌ ತಂಡ ಪಾಕಿಸ್ತಾನದ ಎದುರೂ, ನ್ಯೂಜಿಲೆಂಡ್‌ ತಂಡ ಶ್ರೀಲಂಕಾವನ್ನೂ ಮಣಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.