ಬೆಂಗಳೂರು: ಮುಂಬೈನ ಆಲ್‌ರೌಂಡ್ ಆಟಗಾರ್ತಿ ಸಿಮ್ರನ್ ಶೇಖ್ ಅವರನ್ನು ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಕ್ರಿಕೆಟ್ ಟೂರ್ನಿಯ ಹರಾಜಿನಲ್ಲಿ ಗುಜರಾತ್ ಜೈಂಟ್ಸ್ ತಂಡವು ₹1.90 ಕೋಟಿ ಮೌಲ್ಯಕ್ಕೆ ತನ್ನ ತೆಕ್ಕೆಗೆಳೆದುಕೊಂಡಿತು.
ಡಬ್ಲ್ಯುಪಿಎಲ್‌ನ ಐದು ಫ್ರ್ಯಾಂಚೈಸಿಗಳು ಒಟ್ಟು 19 ಆಟಗಾರ್ತಿಯರ ಆಯ್ಕೆಗಾಗಿ ಇಲ್ಲಿ ಭಾನುವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ ಪೈಪೋಟಿ ನಡೆಸಿದವು. 91 ಭಾರತೀಯ ಮತ್ತು 29 ವಿದೇಶಿ ಆಟಗಾರ್ತಿಯರು ಬಿಡ್‌ನಲ್ಲಿದ್ದರು. ಈ ಪೈಕಿ ಭಾರತದ ಅನ್‌ಕ್ಯಾಪ್ಡ್ ಆಟಗಾರ್ತಿಯರೇ ಹೆಚ್ಚಿನ ಪಾಲು ಪಡೆದಿದ್ದ ವಿಶೇಷ.
ಮೊದಲ ಎರಡು ಆವೃತ್ತಿಗಳಲ್ಲಿ ಯು.ಪಿ ವಾರಿಯರ್ಸ್ ಪರ ಕಣಕ್ಕೆ ಇಳಿದಿದ್ದ 22 ವರ್ಷ ವಯಸ್ಸಿನ ಸಿಮ್ರನ್, ಬಿಡ್‌ನಲ್ಲಿ ಅತಿ ಹೆಚ್ಚು ಮೊತ್ತ ಪಡೆದರು. ₹10 ಲಕ್ಷ ಮೂಲ ಬೆಲೆ ಹೊಂದಿದ್ದ ಅವರಿಗೆ ಅದೃಷ್ಟ ಖುಲಾಯಿಸಿತು. ಅನ್‌ಕ್ಯಾಪ್ಡ್ ಆಟಗಾರ್ತಿಯಾಗಿರುವ ಅವರನ್ನು ವಾರಿಯರ್ಸ್ ತಂಡವು ಕೈಬಿಟ್ಟಿತ್ತು. ಡಬ್ಲ್ಯುಪಿಎಲ್‌ನಲ್ಲಿ ಯು.ಪಿ ಪರ ಅವರು 11 ಪಂದ್ಯಗಳನ್ನು ಆಡಿ 29 ರನ್ ಗಳಿಸಿದ್ದಾರೆ.
ಭಾನುವಾರ ನಡೆದ 19 ವರ್ಷದೊಳಗಿನವರ ಟಿ20 ಏಷ್ಯಾ ಕಪ್ ಟೂರ್ನಿಯ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಅಜೇಯ 44 ರನ್ ಗಳಿಸಿ ಮಿಂಚಿದ ತಮಿಳುನಾಡಿನ 16 ವರ್ಷ ವಯಸ್ಸಿನ ವಿಕೆಟ್‌ಕೀಪರ್– ಬ್ಯಾಟರ್ ಜಿ.ಕಮಲಿನಿ ಬಂಪರ್ ಮೊತ್ತ ಪಡೆದರು. ಅವರನ್ನು 1.60 ಕೋಟಿ ಮೌಲ್ಯಕ್ಕೆ ಮುಂಬೈ ಇಂಡಿಯನ್ಸ್ ತನ್ನದಾಗಿಸಿಕೊಂಡಿತು. ₹10 ಲಕ್ಷ ಮೂಲ ಬೆಲೆ ಹೊಂದಿದ್ದ ಅವರಿಗೆ ಮುಂಬೈ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪೈಪೋಟಿ ನಡೆಸಿದ್ದವು.
ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಉತ್ತರಾಖಂಡದ ಪ್ರೇಮಾ ರಾವತ್ ಅವರನ್ನು ₹1.2 ಕೋಟಿಗೆ ಖರೀದಿಸಿತು. 23 ವರ್ಷ ವಯಸ್ಸಿನ ಆಲ್‌ರೌಂಡರ್ ಪ್ರೇಮಾ ಅವರಿಗೆ ಇದು ಚೊಚ್ಚಲ ಡಬ್ಲ್ಯುಪಿಎಲ್ ಆಗಿದೆ. ಅವರೊಂದಿಗೆ ಜೋಶಿತಾ ಜೆ.ವಿ, ರಾಘ್ವಿ ಬಿಸ್ತ್ ಮತ್ತು ಜಾಗ್ರವಿ ಪವಾರ್ ಬೆಂಗಳೂರು ತಂಡದ ಪಾಲಾದರು. ಇವರೆಲ್ಲರೂ ಭಾರತದ ಅನ್‌ಕ್ಯಾಪ್ಡ್ ಆಟಗಾರ್ತಿಯರು.
ವೆಸ್ಟ್ ಇಂಡೀಸ್‌ನ ಆಲ್‌ರೌಂಡರ್ ದಿಯಾಂದ್ರ ಡಾಟಿನ್ ₹1.7 ಕೋಟಿಗೆ ಗುಜರಾತ್ ಜೈಂಟ್ಸ್ ತಂಡವನ್ನು ಸೇರಿಕೊಂಡರು. ₹50 ಲಕ್ಷ ಮೂಲ ಬೆಲೆ ಹೊಂದಿದ್ದ 33 ವರ್ಷ ವಯಸ್ಸಿನ ಈ ಆಟಗಾರ್ತಿಯನ್ನು ಪಡೆಯಲು ಜೈಂಟ್ಸ್ ಮತ್ತು ವಾರಿಯರ್ಸ್ ಫ್ರಾಂಚೈಸಿಗಳು ಪೈಪೋಟಿ ನಡೆಸಿದ್ದರು.
ಸ್ನೇಹಾ ರಾಣಾಗೆ ನಿರಾಸೆ: ಅಚ್ಚರಿ ಎಂಬಂತೆ ಭಾರತದ ಅನುಭವಿ ಆಟಗಾರ್ತಿಯರಾದ ಸ್ನೇಹಾ ರಾಣಾ, ಪೂನಮ್ ಯಾದವ್, ಸುಷ್ಮಾ ವರ್ಮಾ ಅವರ ಖರೀದಿಗೆ ಯಾವುದೇ ತಂಡಗಳು ಆಸಕ್ತಿ ತೋರಲಿಲ್ಲ. ಅವರೊಂದಿಗೆ ತೇಜಲ್ ಹಸಬ್ನಿಸ್, ಸಿ.ಪ್ರತ್ಯುಷಾ (ಭಾರತ), ಹೀಥರ್ ನೈಟ್, ಲಾರೆನ್ ಬೆಲ್ (ಇಂಗ್ಲೆಂಡ್), ಒರ್ಲಾ ಪ್ರೆಂಡರ್‌ಗಸ್ತ್ (ಐರ್ಲೆಂಡ್), ಕಿಮ್ ಗಾರ್ತ್ (ಆಸ್ಟ್ರೇಲಿಯಾ) ಅವರಿಗೂ ನಿರಾಸೆಯಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.