ADVERTISEMENT

WPL -2026: ಗೆಲುವಿನ ನಿರೀಕ್ಷೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 14:39 IST
Last Updated 31 ಜನವರಿ 2026, 14:39 IST
<div class="paragraphs"><p>ಡೆಲ್ಲಿ ಕ್ಯಾಪಿಟಲ್ಸ್ ತಂಡ </p></div>

ಡೆಲ್ಲಿ ಕ್ಯಾಪಿಟಲ್ಸ್ ತಂಡ

   

–ಪಿಟಿಐ ಚಿತ್ರ 

ವಡೋದರ: ಪ್ರಮುಖ ಬ್ಯಾಟರ್‌ಗಳ ವೈಫಲ್ಯದಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಒತ್ತಡಕ್ಕೆ ಸಿಲುಕಿದೆ. ಭಾನುವಾರ ಯುಪಿ ವಾರಿಯರ್ಸ್‌ ವಿರುದ್ಧ ನಡೆಯಲಿರುವ ಈ ಆವೃತ್ತಿಯ ಕೊನೆಯ ಲೀಗ್ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ ಗೆದ್ದರೆ ಮಾತ್ರ ಡೆಲ್ಲಿ ತಂಡವು ನೇರವಾಗಿ ಎಲಿಮಿನೇಟರ್‌ನಲ್ಲಿ ಆಡುವ ಅವಕಾಶ ಪಡೆಯಲಿದೆ.

ADVERTISEMENT

ಆರ್‌ಸಿಬಿ (12 ಅಂಕ) ಈಗಾಗಲೇ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆದಿದೆ. ಈ ಹಿಂದಿನ ಪಂದ್ಯದಲ್ಲಿ ಮುಂಬೈ ವಿರುದ್ಧ ಗೆಲ್ಲುವ ಮೂಲಕ ಗುಜರಾತ್ ಜೈಂಟ್ಸ್ (10 ಅಂಕ) ತಂಡ ಎಲಿಮಿನೇಟರ್‌ನ ಒಂದು ಸ್ಥಾನ ಕಾದಿರಿಸಿದೆ. ಮುಂಬೈ ಇಂಡಿಯನ್ಸ್ (6 ಅಂಕ) ಲೀಗ್ ವ್ಯವಹಾರ ಮುಗಿಸಿದೆ. ಜೆಮಿಮಾ ಪಡೆ ಸದ್ಯ ಆರು ಅಂಕಗಳೊಡನೆ ನಾಲ್ಕನೇ ಸ್ಥಾನ, ಕೊನೆಯ ಲೀಗ್ ಪಂದ್ಯ ಗೆದ್ದಲ್ಲಿ ಮೂರನೇ ಸ್ಥಾನಕ್ಕೇರಲಿದೆ.

ಕೊನೆಯ ಸ್ಥಾನದಲ್ಲಿರುವ ವಾರಿಯರ್ಸ್‌ (4) ಗೆದ್ದರೆ, ಎಲಿಮಿನೇಟರ್‌ಗೇರುವ ಮುಂಬೈ ತಂಡದ ಆಸೆ ಜೀವಂತವಾಗಿ ಉಳಿಯಲಿದೆ. ಮುಂಬೈ, ಡೆಲ್ಲಿ ಮತ್ತು ಯುಪಿ ತಂಡಗಳು ಆಗ ತಲಾ ಆರು ಪಾಯಿಂಟ್ಸ್‌ ಗಳಿಸಿದಂತಾಗಲಿದ್ದು ನೆಟ್‌ ರನ್‌ ರೇಟ್‌ ಗಣನೆಗೆ ಬರಲಿದೆ. ಮುಂಬೈ ಇಂಡಿಯನ್ಸ್ ರನ್‌ರೇಟ್ (0.059), ಸದ್ಯ ಇತರ ಎರಡು ತಂಡಗಳಿಗಿಂತ (ವಾರಿಯರ್ಸ್: –1.146, ಡೆಲ್ಲಿ: –0.164) ಉತ್ತಮವಾಗಿದೆ.

ಡೆಲ್ಲಿ ಆಟಗಾರ್ತಿಯರ ಪೈಕಿ, ದಕ್ಷಿಣ ಆಫ್ರಿಕಾದವರಾದ ಲಿಝೆಲ್ ಲೀ (230) ಮತ್ತು ಲಾರಾ ವೋಲ್ವಾರ್ಟ್‌ (194) ಮಾತ್ರ ಯಶಸ್ಸು ಗಳಿಸಿದ್ದಾರೆ. ಶಫಾಲಿ ವರ್ಮಾ (179) ಸ್ಥಿರ ಪ್ರದರ್ಶನ ನೀಡಿಲ್ಲ. ನಾಯಕಿ ಜೆಮಿಮಾ 7 ಪಂದ್ಯಗಳಿಂದ 132 ರನ್‌ಗಳನ್ನಷ್ಟೇ ಗಳಿಸಿದ್ದಾರೆ. 

ವಾರಿಯರ್ಸ್ ಆಡಿದ 7 ಪಂದ್ಯಗಳಲ್ಲಿ ಎರಡರಲ್ಲಷ್ಟೇ ಜಯಗಳಿಸಿದೆ. ತಂಡ ನಾಯಕಿ ಮೆಗ್‌ ಲ್ಯಾನಿಂಗ್‌ (7 ಪಂದ್ಯಗಳಿಂದ 248) ಅವರನ್ನು ನಂಬಿಕೊಂಡಿದೆ. ಇನ್ನೊಬ್ಬ ಯಶಸ್ವಿ ಆಟಗಾರ್ತಿ ಫೋಬಿ ಲಿಚ್‌ಫೀಲ್ಡ್ (6 ಪಂದ್ಯಗಳಿಂದ 243) ಗಾಯಾಳಾಗಿದ್ದು ತಂಡಕ್ಕೆ ಹಿನ್ನಡೆಯಾಗಿದೆ.

ಪಂದ್ಯ ಆರಂಭ: ರಾತ್ರಿ 7.30.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.