
ನವಿ ಮುಂಬೈ: ಕೊನೆಯ ಎಸೆತದವರೆಗೆ ಬೆಳೆದ ರೋಚಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಬುಧವಾರ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಯು.ಪಿ. ವಾರಿಯರ್ಸ್ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿತು.
ಡಿ.ವೈ ಪಾಟೀಲ ಕ್ರೀಡಾಂಗಣದಲ್ಲಿ ನಡೆದ ಪಂದ್ಯ ದಲ್ಲಿ 155 ರನ್‌ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ತಂಡವು 20 ಓವರ್‌ಗಳಲ್ಲಿ ಮೂರು ವಿಕೆಟ್‌ಗೆ 158 ರನ್ ಗಳಿಸಿ ಸಂಭ್ರಮಿಸಿತು. ಆಲ್‌ರೌಂಡ್ ಆಟ ಪ್ರದರ್ಶಿಸಿದ ಶಫಾಲಿ ವರ್ಮಾ (16ಕ್ಕೆ 2 ಮತ್ತು 36 ರನ್) ಮತ್ತು ಅರ್ಧಶತಕ ದಾಖಲಿಸಿದ ಲಿಜೆಲ್ ಲೀ (67;44ಎ, 4x8, 6x3) ಗೆಲುವಿನಲ್ಲಿ ಮಿಂಚಿದರು.
ಜೆಮಿಮಾ ರಾಡ್ರಿಗಸ್ ನಾಯಕತ್ವದ ಡೆಲ್ಲಿ ತಂಡವು ಹಾಲಿ ಆವೃತ್ತಿಯಲ್ಲಿ ಎರಡು ಸೋಲುಗಳ ಬಳಿಕ ಗೆಲುವಿನ ಖಾತೆ ತೆರೆಯಿತು. ವಾರಿಯರ್ಸ್‌ಗೆ ಇದು ಹ್ಯಾಟ್ರಿಕ್ ಸೋಲು.
ಸ್ಫೋಟಕ ಬ್ಯಾಟರ್ ಶಫಾಲಿ ವರ್ಮಾ (36;32ಎ) ಮತ್ತು ಲಿಜೆಲ್ ಅವರು ಮೊದಲ ವಿಕೆಟ್‌ಗೆ ಬಿರುಸಿನ 94 ರನ್ (69ಎ) ಸೇರಿಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿದರು. ಅವರಿಬ್ಬರ ವಿಕೆಟ್‌ಗಳು ಉರುಳುತ್ತಿದ್ದಂತೆ ರನ್‌ವೇಗಕ್ಕೆ ಕಡಿವಾಣ ಬಿತ್ತು. ಸ್ಪಿನ್ನರ್ ದೀಪ್ತಿ ಶರ್ಮಾ ಅವರು ಲಿಜೆಲ್ ಮತ್ತು ಜೆಮಿಮಾ (21;14ಎ) ಅವರ ವಿಕೆಟ್‌ಗಳನ್ನು ಪಡೆದರು. ಮತ್ತೊಂದೆಡೆ ತಾಳ್ಮೆಯ ಆಟ ಪ್ರದರ್ಶಿಸಿದ ಲಾರಾ ವೋಲ್ವಾರ್ಟ್ (ಔಟಾಗದೇ 25; 24ಎ) ತಂಡವನ್ನು ಗೆಲುವಿನ ದಡ ಸೇರಿಸಿದರು.
ಇದಕ್ಕೂ ಮೊದಲು ಟಾಸ್ ಗೆದ್ದ ಡೆಲ್ಲಿ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ನಾಯಕಿ ಮೆಗ್ ಲ್ಯಾನಿಂಗ್ (54; 38ಎ, 4X9, 6X1) ಮತ್ತು ಹರ್ಲಿನ್ ಡಿಯೊಲ್ (47; 36ಎ) ಅವರ ಬ್ಯಾಟಿಂಗ್ ಬಲದಿಂದ 8 ವಿಕೆಟ್‌ಗಳಿಗೆ 154 ರನ್ ಗಳಿಸಿತು.
ಯುಪಿ ತಂಡಕ್ಕೆ ಆರಂಭಿಕ ಓವರ್‌ನಲ್ಲಿಯೇ ಮರೈಝನ್ ಕಾಪ್ ಪೆಟ್ಟು ಕೊಟ್ಟರು. ಕಿರಣ್ ನವಿಗೆರೆ ವಿಕೆಟ್ ಗಳಿಸಿದರು. ಬಳಿಕ ಲ್ಯಾನಿಂಗ್ (54; 38ಎ, 4X9, 6X1) ಮತ್ತು ಫೋಬಿ ಲಿಚ್‌ಫೀಲ್ಡ್ (27; 29ಎ) ಅವರು ಇನಿಂಗ್ಸ್‌ಗೆ ಜೀವ ತುಂಬಿದರು. ಎರಡನೇ ವಿಕೆಟ್ ಜೊತೆಯಾಟದಲ್ಲಿ 47 ರನ್ ಸೇರಿಸಿದರು. ಲ್ಯಾನಿಂಗ್ ಮತ್ತು ಹರ್ಲಿನ್ (47; 36ಎ) ಜೊತೆಯಾಟದಲ್ಲಿ 85 ರನ್ ಸೇರಿದವು. ಶಫಾಲಿ ಎರಡು ವಿಕೆಟ್ ಪಡೆದರು.
ಯುಪಿ ವಾರಿಯರ್ಸ್: 20 ಓವರ್‌ಗಳಲ್ಲಿ 8ಕ್ಕೆ154 (ಮೆಗ್ ಲ್ಯಾನಿಂಗ್ 54, ಫೋಬಿ ಲಿಚ್‌ಫೀಲ್ಡ್ 27, ಹರ್ಲಿನ್ ಡಿಯೊಲ್ ಔಟಾಗದೇ 47, ಮರೈಝನ್ ಕಾಪ್ 24ಕ್ಕೆ2, ಶಫಾಲಿ ವರ್ಮಾ 16ಕ್ಕೆ2).
ಡೆಲ್ಲಿ ಕ್ಯಾಪಿಟಲ್ಸ್: 20 ಓವರ್‌ಗಳಲ್ಲಿ 3ಕ್ಕೆ 158 (ಶಫಾಲಿ ವರ್ಮಾ 36, ಲಿಜೆಲ್ ಲೀ 67, ಲಾರಾ ವೋಲ್ವಾರ್ಟ್ ಔಟಾಗದೇ 25; ದೀಪ್ತಿ ಶರ್ಮಾ 26ಕ್ಕೆ 2).
ಪಂದ್ಯದ ಆಟಗಾರ್ತಿ: ಶಫಾಲಿ ವರ್ಮಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.