
ನವಿ ಮುಂಬೈ: ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಎದುರು ರೋಚಕ ಜಯ ಸಾಧಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ವನಿತೆಯರು ಭರ್ಜರಿ ಆತ್ಮವಿಶ್ವಾಸದಲ್ಲಿದ್ದಾರೆ.
ಸೋಮವಾರ ಡಿವೈ ಪಾಟೀಲ ಕ್ರೀಡಾಂಗಣದಲ್ಲಿ ನಡೆಯಲಿರುವ ಮಹಿಳಾ ಪ್ರಿಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಸ್ಮೃತಿ ಮಂದಾನ ನಾಯಕತ್ವದ ಆರ್‌ಸಿಬಿಯು ಯುಪಿ ವಾರಿಯರ್ಸ್ ಎದುರು ಕಣಕ್ಕಿಳಿಯಲಿದೆ. ಈ ಪಂದ್ಯದಲ್ಲಿಯೂ ಗೆಲುವಿನ ಓಟ ಮುಂದುವರಿಸುವ ಹುಮ್ಮಸ್ಸಿನಲ್ಲಿದೆ.
ಎರಡು ವರ್ಷಗಳ ಹಿಂದೆ ಚಾಂಪಿಯನ್ ಆಗಿದ್ದ ಆರ್‌ಸಿಬಿ ತಂಡವು ಈ ಸಲ ಶುಭಾರಂಭ ಮಾಡಿದೆ. ತಂಡದಲ್ಲಿರುವ ದಕ್ಷಿಣ ಆಫ್ರಿಕಾದ ನದೀನ್ ಡಿ ಕ್ಲರ್ಕ್ ಅವರ ಆಲ್‌ರೌಂಡ್ ಆಟದ ಫಲವಾಗಿ ಮುಂಬೈಗೆ ಸೋಲುಣಿಸುವಲ್ಲಿ ಮಂದಾನ ಪಡೆ ಯಶಸ್ವಿಯಾಗಿತ್ತು. ಎಲಿಸ್ ಪೆರಿ ಗೈರು ಹಾಜರಿಯ ಚಿಂತೆಯನ್ನು ಕ್ಲರ್ಕ್ ದೂರ ಮಾಡಿದ್ದಾರೆ. ಆ ಪಂದ್ಯದಲ್ಲಿ ನಾಲ್ಕು ವಿಕೆಟ್ ಗಳಿಸಿದ್ದ ಅವರು ಬ್ಯಾಟಿಂಗ್‌ನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಅರ್ಧಶತಕ ಹೊಡೆದಿದ್ದರು. ಅಲ್ಲದೇ ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಆರ್‌ಸಿಬಿಗೆ 18 ರನ್ ಅಗತ್ಯವಿದ್ದಾಗ 6,4,6 ಮತ್ತು 4 ಹೊಡೆದಿದ್ದರು.
ಆದರೆ ಆರಂಭಿಕ ಬ್ಯಾಟರ್‌ಗಳ ಸಹಿತ ಅಗ್ರ ಐವರು ದೀರ್ಘ ಇನಿಂಗ್ಸ್ ಆಡುವಲ್ಲಿ ಯಶಸ್ವಿಯಾಗಿರಲಿಲ್ಲ. ಕ್ಲರ್ಕ್ ಜೊತೆಗೆ ಅರುಂಧತಿ ರೆಡ್ಡಿ (20; 25ಎ) ಉತ್ತಮ ಜೊತೆಯಾಟವಾಡಿದ್ದರು. ಆದ್ದರಿಂದ ಮೇಲಿನ ಕ್ರಮಾಂಕದ ಬ್ಯಾಟರ್‌ಗಳು ಈ ಪಂದ್ಯದಲ್ಲಿ ಲಯಕ್ಕೆ ಮರಳುವ ಅನಿವಾರ್ಯತೆ ಇದೆ. ಯುಪಿ ತಂಡದಲ್ಲಿರುವ ಸ್ಪಿನ್ನರ್ ದೀಪ್ತಿ ಶರ್ಮಾ, ಮಧ್ಯಮವೇಗಿಗಲಾದ ಕ್ರಾಂತಿ ಗೌಡ, ಶಿಖಾ ಪಾಂಡೆ, ಎಡಗೈ ಸ್ಪಿನ್ನರ್ ಸೋಫಿ ಎಕ್ಲೆಸ್ಟೋನ್ ಅವರನ್ನು ಎದುರಿಸಿ ನಿಲ್ಲುವ ಸವಾಲು ಆರ್‌ಸಿಬಿ ಆಟಗಾರ್ತಿಯರಿಗೆ ಇದೆ.
ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಯುಪಿ ತಂಡವು ಸೋತಿತ್ತು.ಕ ಆದರೆ ತಂಡದ ಬ್ಯಾಟರ್ ಫೋಬಿ ಲಿಚ್‌ಪೀಲ್ಡ್ ಅವರ ಹೋರಾಟವು ಗಮನ ಸೆಳೆದಿತ್ತು. 40 ಎಸೆತಗಳಲ್ಲಿ 78 ರನ್ ಗಳಿಸಿದ್ದರು. ನಾಯಕಿ ಮೆಗ್ ಲ್ಯಾನಿಂಗ್ 30 ಮತ್ತು ಆಶಾ ಶೋಭನಾ ಅಜೇಯ27 ರನ್ ಗಳಿಸಿದ್ದರು. ಮಧ್ಯಮ ಕ್ರಮಾಂಕದಲ್ಲಿ ಹರ್ಲಿನ್ ಡಿಯೊಲ್, ದೀಪ್ತಿ, ದಿಯಾಂದ್ರ ಡಾಟಿನ್ ಅವರು ಲಯಕ್ಕೆ ಮರಳಿದರೆ ತಂಡದ ಬ್ಯಾಟಿಂಗ್ ಬಲ ಹೆಚ್ಚಲಿದೆ. ಆರ್‌ಸಿಬಿಯ ಬೌಲಿಂಗ್ ಪಡೆಯಲ್ಲಿ ಕ್ಲರ್ಕ್ ಬಿಟ್ಟರೆ ಲಾರೆನ ಬೆಲ್ ಹಾಗೂ ಕರ್ನಾಟಕದ ಹುಡುಗಿ ಶ್ರೇಯಾಂಕಾ ಪಾಟೀಲ ಅವರ ಮೇಲೆ ವಿಶ್ವಾಸ ಇಡಬಹುದು.
ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ, ಜಿಯೊಹಾಟ್‌ಸ್ಟಾರ್ ಆ್ಯಪ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.