ADVERTISEMENT

WPL RCBW vs GGW | ಆರ್‌ಸಿಬಿ ಗೆಲುವಿನ ಓಟ ಅಬಾಧಿತ: ನಾಕೌಟ್‌ಗೆ ಮಂದಾನ ಬಳಗ

ಪಿಟಿಐ
Published 19 ಜನವರಿ 2026, 18:21 IST
Last Updated 19 ಜನವರಿ 2026, 18:21 IST
<div class="paragraphs"><p>ಗೌತಮಿ ನಾಯಕ್ ಬ್ಯಾಟಿಂಗ್</p></div>

ಗೌತಮಿ ನಾಯಕ್ ಬ್ಯಾಟಿಂಗ್

   

ಚಿತ್ರ: @DilPrabhat88

ADVERTISEMENT

ವಡೋದರ: ಗೌತಮಿ ನಾಯಕ್ ಅವರ ಸೊಗಸಾದ ಅರ್ಧಶತಕ ಹಾಗೂ ಬೌಲರ್‌ಗಳ ಸಾಂಘಿಕ ದಾಳಿಯ ನೆರವಿನಿಂದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಸೋಮವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ 61 ರನ್‌ಗಳಿಂದ ಗುಜರಾತ್ ಜೈಂಟ್ಸ್ ತಂಡವನ್ನು ಮಣಿಸಿತು. ಅದರೊಂದಿಗೆ ಟೂರ್ನಿಯಲ್ಲಿ ಸತತ ಐದು ಗೆಲುವಿನೊಂದಿಗೆ ನಾಕೌಟ್‌ಗೆ ಪ್ರವೇಶ ಪಡೆಯಿತು.

ಇಲ್ಲಿನ ಕೋತಂಬಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿದ ಆರ್‌ಸಿಬಿ ತಂಡಕ್ಕೆ ಗೌತಮಿ (73; 55ಎ, 4x7, 6x1) ಆಸರೆಯಾದರು. ಅವರ ಆಟದ ಬಲದಿಂದ ಮಂದಾನ ಬಳಗವು ನಿಗದಿತ ಓವರ್‌ಗಳಲ್ಲಿ 6 ವಿಕೆಟ್‌ಗೆ 178 ರನ್ ಗಳಿಸಿತು.

ವಡೋದರ ಲೆಗ್‌ನ ಈ ಮೊದಲ ಪಂದ್ಯದಲ್ಲಿ ಸವಾಲಿನ ಗುರಿ ಬೆನ್ನಟ್ಟಿ ಜೈಂಟ್ಸ್‌ ತಂಡಕ್ಕೆ ಬಲಗೈ ವೇಗಿ ಸಾಯ್ಲಿ ಸತ್ಘರೆ (21ಕ್ಕೆ3) ಆಘಾತ ನೀಡಿದರು. ಟೂರ್ನಿಯಲ್ಲಿ ಎರಡನೇ ಪಂದ್ಯ ಆಡಿದ ಅವರು ಜೈಂಟ್ಸ್‌ ತಂಡದ ಪ್ರಮುಖ ವಿಕೆಟ್‌ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು. ಆರಂಭದಲ್ಲಿ ಬೆತ್‌ ಮೂನಿ (3; 4ಎ) ಹಾಗೂ ಸೋಫಿ ಡಿವೈನ್‌ (0; 4ಎ) ಅವರ ವಿಕೆಟ್‌ ಪಡೆದ ಸಾಯ್ಲಿ, ಅರ್ಧಶತಕ ಗಳಿಸಿದ್ದ ನಾಯಕಿ ಆ್ಯಷ್ಲೆ ಗಾರ್ಡನರ್‌ (54;43ಎ) ಅವರಿಗೂ ಪೆವಿಲಿಯನ್‌ ಹಾದಿ ತೋರಿಸಿದರು.

ದಕ್ಷಿಣ ಆಫ್ರಿಕಾದ ಆಲ್‌ರೌಂಡರ್‌ ನದೀನ್‌ ಡಿ ಕ್ಲರ್ಕ್‌ ಎರಡು ವಿಕೆಟ್‌ ಪಡೆದರೆ, ಲಾರೆನ್‌ ಬೆಲ್‌, ರಾಧಾ ಯಾದವ್‌ ಹಾಗೂ ಶ್ರೇಯಾಂಕಾ ಪಾಟೀಲ ಅವರು ತಲಾ ಒಂದು ವಿಕೆಟ್‌ ಪಡೆದರು.

ಲೀಗ್‌ನಲ್ಲಿ ಆರ್‌ಸಿಬಿ ತಂಡಕ್ಕೆ ಇದು ಸತತ ಆರನೇ ಗೆಲುವಾಗಿದ್ದು, ಈ ಸಾಧನೆ ಮಾಡಿದ ಮೊದಲ ತಂಡ ಎನಿಸಿತು.

ಇದಕ್ಕೆ ಮೊದಲು, ಲೀಗ್‌ನಲ್ಲಿ ಅಜೇಯವಾಗಿರುವ ಬೆಂಗಳೂರು ತಂಡದ ಆರಂಭ ಉತ್ತಮವಾಗಿರಲಿಲ್ಲ. ಆರಂಭ ಆಟಗಾರ್ತಿ ಗ್ರೇಸ್‌ ಹ್ಯಾರಿಸ್ (1) ಮತ್ತು ಮೂರನೇ ಕ್ರಮಾಂಕದ ಜಾರ್ಜಿಯಾ ವೋಲ್ (1) ಅವರು ಕೇವಲ 9 ರನ್‌ಗಳಾಗುವಷ್ಟರಲ್ಲಿ ನಿರ್ಗಮಿಸಿದ್ದರು. ನಾಯಕಿ ಸ್ಮೃತಿ ಮಂದಾನ (26, 23 ಎಸೆತ) ಜೊತೆಗೂಡಿದ ಗೌತಮಿ ಮೂರನೇ ವಿಕೆಟ್‌ಗೆ 60 ರನ್ (47 ಎಸೆತ) ಸೇರಿಸಿ ಇನಿಂಗ್ಸ್‌ಗೆ ಸ್ಥಿರತೆ ಒದಗಿಸಿದರು.

ಗೌತಮಿ ಅವರು ರಿಚಾ ಘೋಷ್‌ (27; 20ಎ, 6x3) ಜೊತೆಗೂಡಿ ನಾಲ್ಕನೇ ವಿಕೆಟ್‌ಗೆ ಉಪಯುಕ್ತ 69 ರನ್ ಪೇರಿಸಿದರು. 18ನೇ ಓವರಿನಲ್ಲಿ ಗಾರ್ಡನರ್ ಬೌಲಿಂಗ್‌ನಲ್ಲಿ ಬೌಲ್ಡ್‌ ಆಗುವ ಮೂಲಕ ಗೌತಮಿ ಅವರ ಆಟ ಕೊನೆಗೊಂಡಿತು.

ಗುಜರಾತ್‌ ಜೈಂಟ್ಸ್‌ನ 18 ವರ್ಷ ವಯಸ್ಸಿನ ಮಧ್ಯಮ ವೇಗದ ಬೌಲರ್ ಹ್ಯಾಪಿ ಕುಮಾರಿ ಅವರು ಈ ಪಂದ್ಯದ ಮೂಲಕ ಐಪಿಎಲ್‌ಗೆ ಪದಾರ್ಪಣೆ ಮಾಡಿದರು. 

ಸಂಕ್ಷಿಪ್ತ ಸ್ಕೋರು: ಆರ್‌ಸಿಬಿ: 20 ಓವರುಗಳಲ್ಲಿ 6 ವಿಕೆಟ್‌ಗೆ 178 (ಸ್ಮೃತಿ ಮಂದಾನ 26, ಗೌತಮಿ ನಾಯಕ್ 73, ರಿಚಾ ಘೋಷ್‌ 27, ಕಾಶ್ವಿ ಗೌತಮ್ 38ಕ್ಕೆ2, ಗಾರ್ಡನರ್ 43ಕ್ಕೆ2).

ಗುಜರಾತ್ ಜೈಂಟ್ಸ್‌: 20 ಓವರುಗಳಲ್ಲಿ 8 ವಿಕೆಟ್‌ಗೆ 117 (ಆ್ಯಷ್ಲೆ ಗಾರ್ಡನರ್‌ 54; ಸಾಯ್ಲಿ ಸತ್ಘರೆ 21ಕ್ಕೆ3, ನದೀನ್‌ ಡಿ ಕ್ಲರ್ಕ್‌ 17ಕ್ಕೆ2).

ಫಲಿತಾಂಶ: ಆರ್‌ಸಿಬಿ ತಂಡಕ್ಕೆ 61 ರನ್‌ ಜಯ. ಪಂದ್ಯದ ಆಟಗಾರ್ತಿ: ಗೌತಮಿ ನಾಯಕ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.