ಮ್ಯಾಂಚೆಸ್ಟರ್: ಭಾರತ ತಂಡದ ನಾಯಕ ಶುಭಮನ್ ಗಿಲ್ ಅವರು ಸತತ ನಾಲ್ಕನೇ ಟಾಸ್ ಸೋತರು. ಆದರೆ, ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಅವರು ಅನಿರೀಕ್ಷಿತ ನಿರ್ಧಾರ ಕೈಗೊಂಡರು.
ತಂಪಾದ ಮತ್ತು ಮೋಡ ಕವಿದ ಮುಂಜಾನೆಯ ಹೊತ್ತಿನಲ್ಲಿ ಬೌಲರ್‌ಗಳಿಗೆ ನೆರವು ಲಭಿಸಬಹುದೆಂಬ ನಿರೀಕ್ಷೆಯಿಂದ ಸ್ಟೋಕ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ಈ ಹಿಂದೆ ನಡೆದ 84 ಟೆಸ್ಟ್‌ಗಳಲ್ಲಿ ಟಾಸ್ ಗೆದ್ದವರು ಇಂತಹ ನಿರ್ಧಾರ ಮಾಡಿರಲಿಲ್ಲ. ಆದರೆ ಸ್ಟೋಕ್ಸ್ ಅದೃಷ್ಟ ಪಣಕ್ಕೊಡ್ಡಿದರು.
ಚೆಂಡು ನಿಧಾನಗತಿಯ ಚಲನೆಯೊಂದಿಗೆ ಪುಟಿಯುತ್ತಿದ್ದ ಪಿಚ್‌ನಲ್ಲಿ ದಿನದ ಮೊದಲ ಅವಧಿಯಲ್ಲಿ ಯಶಸ್ವಿ ಜೈಸ್ವಾಲ್ (58; 107ಎ) ಮತ್ತು ಕೆ.ಎಲ್. ರಾಹುಲ್ (46; 98ಎ) ತಾಳ್ಮೆಯಿಂದ ಇನಿಂಗ್ಸ್ ಕಟ್ಟಿದರು. ಆದರೆ ಊಟದ ವಿರಾಮದ ನಂತರದಲ್ಲಿ ಚುರುಕಿನ ದಾಳಿ ನಡೆಸಿದ ಇಂಗ್ಲೆಂಡ್ ಬೌಲರ್‌ಗಳು ಭಾರತದ ಬ್ಯಾಟರ್‌ಗಳು ತಡಬಡಾಯಿಸುವಂತೆ ಮಾಡಿದರು. ಇದರಿಂದಾಗಿ ಚಹಾ ವಿರಾಮದ ಹೊತ್ತಿಗೆ ಗಿಲ್ ಬಳಗವು 3 ವಿಕೆಟ್‌ಗಳಿಗೆ 143 ರನ್ ಗಳಿಸಿತು.
ಐದು ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 2–1ರಿಂದ ಮುನ್ನಡೆಯಲ್ಲಿದೆ. ಸರಣಿಯಲ್ಲಿ ತನ್ನ ಗೆಲುವಿನ ಕನಸು ಜೀವಂತವಾಗುಳಿಸಿಕೊಳ್ಳಬೇಕಾದರೆ ಭಾರತ ತಂಡವು ಈ ಪಂದ್ಯದಲ್ಲಿ ಜಯಿಸುವುದು ಅನಿವಾರ್ಯವಾಗಿದೆ.
ದಿನದಾಟದ ಆರಂಭದ ಕೆಲವು ಓವರ್‌ಗಳಲ್ಲಿ ರಾಹುಲ್ ಮತ್ತು ಜೈಸ್ವಾಲ್ ಅವರು ತಮ್ಮ ನಾಯಕನ ಅಣತಿಯನ್ನು ಅಚ್ಚುಕಟ್ಟಾಗಿ ಪಾಲಿಸುವಂತೆ ಕಂಡಿತ್ತು. ಇಂಗ್ಲೆಂಡ್ ವೇಗಿಗಳಾದ ಕ್ರಿಸ್ ವೋಕ್ಸ್, ಜೋಫ್ರಾ ಆರ್ಚರ್, ಬ್ರೈಡನ್ ಕಾರ್ಸ್ ಮತ್ತು ಸ್ಟೋಕ್ಸ್ ಅವರು ಆಫ್ ಸ್ಟಂಪ್ ಗುರಿಯಾಗಿಸಿಕೊಂಡೇ ನಿರಂತರ ದಾಳಿ ಸಂಘಟಿಸಿದರು. ವೇಗ, ಸ್ವಿಂಗ್ ಮತ್ತು ಪರಿಣಾಮಕಾರಿ ಚಲನೆಯಿಂದ ಕೂಡಿದ ಎಸೆತಗಳ ಸವಾಲನ್ನು ಬ್ಯಾಟರ್‌ಗಳು ಎದುರಿಸಿ ನಿಲ್ಲಬೇಕಾಯಿತು.
ಅಪಾರ ಏಕಾಗ್ರತೆಯಿಂದ ಎಸೆತಗಳ ಚಲನೆಯನ್ನು ಗುರುತಿಸಿದರು. ಆಫ್‌ಸ್ಟಿಕ್‌ನಿಂದ ಹೊರಗೆ ತಿರುಗುವ ಎಸೆತಗಳನ್ನು ಬಿಟ್ಟರು. ರನ್ ಸಿಗಬಹುದಾದ ಎಸೆತಗಳನ್ನು ಆಡಿದರು. ಆದರೆ ರಕ್ಷಣಾ ಕವಚವನ್ನು ಬಿಟ್ಟುಕೊಡಲಿಲ್ಲ.
ಭೋಜನ ವಿರಾಮದ 18 ನಿಮಿಷಗಳ ನಂತರ ರಾಹುಲ್ ಅವರು ವೋಕ್ಸ್ ಎಸೆತ ಪಂಚ್ ಮಾಡಲು ಹೋಗಿ, ಸ್ಲಿಪ್‌ನಲ್ಲಿದ್ದ ಜ್ಯಾಕ್ ಕ್ರಾಲಿಗೆ ಕ್ಯಾಚ್ ಆದರು.
ಅರ್ಧಶತಕ ಗಳಿಸಿದ ಎಡಗೈ ಬ್ಯಾಟರ್ ಜೈಸ್ವಾಲ್ ಅವರು ಎಡಗೈ ಸ್ಪಿನ್ನರ್, 35 ವರ್ಷದ ಲಿಯಾಮ ಡಾಸನ್ ಎಸೆತವನ್ನು ಫಾರ್ವರ್ಡ್ ಡಿಫೆನ್ಸ್ ಮಾಡಲು ಹೋಗಿ ಸ್ಲಿಪ್‌ನಲ್ಲಿದ್ದ ಹ್ಯಾರಿ ಬ್ರೂಕ್ ಅವರಿಗೆ ಕ್ಯಾಚ್ ಕೊಟ್ಟರು. ಎಂಟು ವರ್ಷಗಳ ನಂತರ ಇಂಗ್ಲೆಂಡ್ ತಂಡಕ್ಕೆ ಮರಳಿರುವ ಲಿಯಾಮ್ ಹಿರಿಹಿರಿ ಹಿಗ್ಗಿದರು.
ಆದರೆ ಇನ್ನೊಂದು ಬದಿಯಲ್ಲಿದ್ದ ಸಾಯಿ ಸುದರ್ಶನ್ ಪೂರ್ಣ ಏಕಾಗ್ರತೆ ಮತ್ತು ಭರ್ತಿ ತಾಳ್ಮೆಯ ಆಟದ ಮೂಲಕ ಇನಿಂಗ್ಸ್ ಬೆಳೆಸುವ ಭರವಸೆ ಮೂಡಿಸಿದರು. ಕರುಣ್ ನಾಯರ್ ಬದಲಿಗೆ ಅವರಿಗೆ ಇಲ್ಲಿ ಸ್ಥಾನ ಲಭಿಸಿದೆ. ಅವರೊಂದಿಗೆ ಸೇರಿಕೊಂಡ ನಾಯಕ ಗಿಲ್ ಕೂಡ ಭರವಸೆ ಮೂಡಿಸಿದರು. ಆದರೆ ಚಹಾ ವಿರಾಮಕ್ಕೂ 14 ನಿಮಿಷಗಳ ಮುನ್ನ ಮತ್ತೊಂದು ಆಘಾತ ಎದುರಾಯಿತು. ಬೆನ್ ಸ್ಟೋಕ್ಸ್ ಬೀಸಿದ ಎಲ್‌ಬಿಡಬ್ಲ್ಯು ಬಲೆಗೆ ಗಿಲ್ ಬಿದ್ದರು.
ಆಫ್‌ಸ್ಟಂಪ್ ಲೈನ್ ಅಂಚಿನಲ್ಲಿ ಪುಟಿದ ಚೆಂಡು ಸ್ವಿಂಗ್ ಆಗಿ ಒಳನುಗ್ಗಿತು. ಇದನ್ನು ನಿರೀಕ್ಷೆ ಮಾಡದ ಗಿಲ್ ರಕ್ಷಣಾತ್ಮಕ ಹೊಡೆತ ಪ್ರಯೋಗಿಸುವಲ್ಲಿ ವಿಳಂಬ ಮಾಡಿ ದಂಡ ತೆತ್ತರು.
ಹರಿಯಾಣದ ವೇಗಿ ಅನ್ಷುಲ್ ಕಂಬೋಜ್ ಪದಾರ್ಪಣೆ ಕರುಣ್ ನಾಯರ್ ಬದಲಿಗೆ ಸಾಯಿ ಸುದರ್ಶನ್‌ಗೆ ಅವಕಾಶ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಕಣಕ್ಕೆ
ಕ್ರಿಸ್ ವೋಕ್ಸ್ ಎಸೆತಕ್ಕೆ ಮುರಿದ ಜೈಸ್ವಾಲ್ ಬ್ಯಾಟ್
ಭಾರತದ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರ ಬ್ಯಾಟ್ ಮುರಿದ ಪ್ರಸಂಗ ಬುಧವಾರ ನಡೆಯಿತು.
ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ ವೇಗಿ ಕ್ರಿಸ್ ವೋಕ್ಸ್ ಅವರು ಹಾಕಿದ 9ನೇ ಓವರ್‌ನಲ್ಲಿ 127 ಕಿ.ಮೀ ವೇಗದ ಎಸೆತವನ್ನು ಯಶಸ್ವಿ ರಕ್ಷಣಾತ್ಮಕವಾಗಿ ಆಡಿದರು. ಚೆಂಡು ಅಪ್ಪಳಿಸಿದ ವೇಗಕ್ಕೆ ಜೈಸ್ವಾಲ್ ಅವರ ಬ್ಯಾಟಿನ ಹಿಡಿಕೆಯ ಜೋಡಣೆ ಮುರಿಯಿತು. ಆಗ, ಪೆವಿಲಿಯನ್‌ನಲ್ಲಿದ್ದ ಭಾರತ ತಂಡದ ಕರುಣ್ ನಾಯರ್ ಅವರು ಹೊಸ ಬ್ಯಾಟ್ ತಂದು ಕೊಟ್ಟರು. ಕರುಣ್ ಈ ಪಂದ್ಯದಲ್ಲಿ ಹನ್ನೊಂದು ಅಟಗಾರರ ಬಳಗದಲ್ಲಿ ಸ್ಥಾನ ಪಡೆದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.