ADVERTISEMENT

ಯುವ ಕ್ರಿಕೆಟಿಗ ಅವಿ ಬಾರೊಟ್ ನಿಧನ

ಪಿಟಿಐ
Published 16 ಅಕ್ಟೋಬರ್ 2021, 13:38 IST
Last Updated 16 ಅಕ್ಟೋಬರ್ 2021, 13:38 IST
ಅವಿ ಬಾರೊಟ್‌ –ಟ್ವಿಟರ್ ಚಿತ್ರ
ಅವಿ ಬಾರೊಟ್‌ –ಟ್ವಿಟರ್ ಚಿತ್ರ   

ರಾಜ್‌ಕೋಟ್/ಅಹಮದಾಬಾದ್: ಸೌರಾಷ್ಟ್ರ ಕ್ರಿಕೆಟ್ ತಂಡದ ಆಟಗಾರ, ಭಾರತ 19 ವರ್ಷದೊಳಗಿನವರ ತಂಡದ ಮಾಜಿ ನಾಯಕ ಅವಿ ಬಾರೊಟ್ (29) ಹೃದಯಸ್ತಂಭನದಿಂದ ಶುಕ್ರವಾರ ನಿಧನರಾದರು. ಅವರಿಗೆ ತಾಯಿ ಮತ್ತು ಪತ್ನಿ ಇದ್ದಾರೆ.

2019-20ರ ರಣಜಿ ಟೂರ್ನಿಯಲ್ಲಿ ಸೌರಾಷ್ಟ್ರ ಚಾಂಪಿಯನ್ ಆಗಿದ್ದಾಗ ಅವಿ ತಂಡದಲ್ಲಿದ್ದರು. ಹರಿಯಾಣ ಮತ್ತು ಗುಜರಾತ್ ತಂಡಗಳ ಪರವಾಗಿಯೂ ಅವರು ಆಡಿದ್ದಾರೆ. ಅಹಮದಾಬಾದ್‌ನಲ್ಲಿರುವ ತಮ್ಮ ಮನೆಯಲ್ಲಿ ಅಸ್ವಸ್ಥರಾದ ಅವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಆಂಬುಲೆನ್ಸ್‌ನಲ್ಲಿ ಕೊನೆಯುಸಿರೆಳೆದರು ಎಂದು ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಜಯದೇವ್ ಶಾ ತಿಳಿಸಿದ್ದಾರೆ.

‘ಅವಿ ಅವರ ತಂದೆ 42ನೇ ವಯಸ್ಸಿನಲ್ಲಿ ಮೃತಪಟ್ಟಿದ್ದರು. ಅವಿ ಪತ್ನಿ ನಾಲ್ಕು ತಿಂಗಳ ಗರ್ಭಿಣಿ. ಈ ಪ್ರತಿಭಾವಂತ ಆಟಗಾರನ ಅಗಲಿಕೆಯ ನೋವು ಸಹಿಸಲಾಗುತ್ತಿಲ್ಲ’ ಎಂದು ಶಾ ಹೇಳಿದ್ದಾರೆ.

ADVERTISEMENT

ಬಲಗೈ ಬ್ಯಾಟರ್ ಆಗಿದ್ದ ಅವಿ ಆಫ್‌ ಬ್ರೇಕ್ ಬೌಲಿಂಗ್ ಕೂಡ ಮಾಡುತ್ತಿದ್ದರು. ಕಳೆದ ವಾರವಷ್ಟೇ ಸ್ಥಳೀಯ ಟೂರ್ನಿಯೊಂದಲ್ಲಿ ಪಾಲ್ಗೊಂಡಿದ್ದರು. 38 ಪ್ರಥಮ ದರ್ಜೆ ಪಂದ್ಯಗಳಲ್ಲಿ ಮತ್ತು ಅಷ್ಟೇ ಸಂಖ್ಯೆಯ ಲಿಸ್ಟ್ ‘ಎ’ ಪಂದ್ಯಗಳಲ್ಲಿ ಆಡಿರುವ ಅವರು 20 ದೇಶಿ ಟಿ20 ಪಂದ್ಯಗಳನ್ನು ಆಡಿದ್ದಾರೆ. ವಿಕೆಟ್ ಕೀಪಿಂಗ್ ಕೂಡ ಮಾಡುತ್ತಿದ್ದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 1,547 ಮತ್ತು ಲಿಸ್ಟ್ ಎ ಪಂದ್ಯಗಳಲ್ಲಿ1030, ಟಿ20ಯಲ್ಲಿ 717 ರನ್‌ ಕಲೆ ಹಾಕಿದ್ದಾರೆ.

ಬಂಗಾಳವನ್ನು ಮಣಿಸಿ ಸೌರಾಷ್ಟ್ರ ಪ್ರಶಸ್ತಿ ಗೆದ್ದ ರಣಜಿ ಟ್ರೋಫಿ ಟೂರ್ನಿಯ ಫೈನಲ್‌ನಲ್ಲಿ ಅವಿ ಅರ್ಧಶತಕ ಗಳಿಸಿದ್ದರು. ಸೌರಾಷ್ಟ್ರ 2015-16 ಮತ್ತು 2018-19ರಲ್ಲಿ ಫೈನಲ್ ಪ್ರವೇಶಿಸಿದಾಗಲೂ ಅವರು ತಂಡದಲ್ಲಿದ್ದರು. ತಂಡಕ್ಕಾಗಿ ಒಟ್ಟು 21 ರಣಜಿ ಪಂದ್ಯಗಳನ್ನು ಆಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.