ಯಜುವೇಂದ್ರ ಚಹಲ್, ಧನಶ್ರೀ ವರ್ಮಾ
ಚಿತ್ರ ಕೃಪೆ: ಇನ್‌ಸ್ಟಾಗ್ರಾಂ
ಬೆಂಗಳೂರು: ಪತ್ನಿ ಧನಶ್ರೀ ವರ್ಮಾ ಅವರಿಂದ ದೂರವಾಗಿದ್ದರ ಬಗ್ಗೆ ಕ್ರಿಕೆಟಿಗ ಯಜುವೇಂದ್ರ ಚಾಹಲ್ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿದ್ದಾರೆ.
ಮದುವೆಯಾದ ಒಂದೆರಡು ವರ್ಷಗಳ ತರುವಾಯ ಇಬ್ಬರ ನಡುವೆ ಹೊಂದಾಣಿಕೆ ಬೆಳೆಯಲಿಲ್ಲ. ಅವಳಿಗೆ ನಾನು ಸಮಯ ಕೊಡೊಕೆ ಆಗುತ್ತಿರಲಿಲ್ಲ, ಇದರಿಂದ ಜಗಳ ಆಗುತ್ತಿತ್ತು. ಕ್ರಮೇಣ ಅದು ಬೆಳೆಯಿತು. ಮದುವೆಯಾಗಿ ಮೂರು ವರ್ಷದ ನಂತರ ಬೇರೆ ಆಗಲು ನಿರ್ಧರಿಸಲಾಯಿತು ಎಂದು ರಾಜ್ ಶಮಾನಿ ಯೂಟ್ಯೂಬ್ ಚಾನಲ್ ಜೊತೆ ಅವರು ಮಾತನಾಡಿದ್ದಾರೆ.
ಆಗ ಇಬ್ಬರು ಬೇರೆ ಆಗುವ ತೀರ್ಮಾನ ಮಾಡಲಾಯಿತು. ಆದರೆ, ಈ ವಿಷಯವನ್ನು ಬಹಿರಂಗಗೊಳಿಸುವುದು ಬೇಡ ಎಂದು ತೀರ್ಮಾನ ಆಯಿತು. ಹಾಗೆಯೇ ಎರಡು ವರ್ಷ ಮುಂದುವರೆಸಿಕೊಂಡು ಬರಲಾಯಿತು ಎಂದು ಬೇಸರ ತೋಡಿಕೊಂಡಿದ್ದಾರೆ.
ಕಡೆಗೆ ನಮ್ಮಿಬ್ಬರ ಸಂಬಂಧ ಸರಿ ಇಲ್ಲ ಎಂದು ಮಾತುಗಳು ಕೇಳಿಬರಲು ಶುರುವಾಯಿತು. ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲಾಯಿತು. ಆ ವೇಳೆ ಮಾಧ್ಯಮಗಳು, ಸಾಮಾಜಿಕ ಮಾಧ್ಯಮಗಳಲ್ಲಿನ ಚರ್ಚೆ, ಟೀಕೆ, ಬೆಂಬಲ ಎಲ್ಲ ನೋಡಿ ನಾನು ಖಿನ್ನತೆಗೆ ಹೋಗಿದ್ದೆ. ಆತ್ಮಹತ್ಯೆಯ ವಿಚಾರವನ್ನೂ ಮಾಡಿದ್ದೆ. ಎರಡೇ ಗಂಟೆ ಮಲಗುತ್ತಿದ್ದೆ, ಅಳುತ್ತಿದ್ದೆ, ಆದರೆ, ಸ್ನೇಹಿತ ತಡೆದ ಎಂದು ಹೇಳಿದ್ದಾರೆ.
ಯಾರಾದರೂ ಏನಾದರೂ ಹೇಳಬಹುದು. ಆದರೆ, ನಾನು ಇಬ್ಬರು ಸಹೋದರಿಯರೊಂದಿಗೆ ಬೆಳೆದಿದ್ದೇನೆ. ಹೆಣ್ಣನ್ನು ಗೌರವಿಸುವುದು ನನಗೆ ಗೊತ್ತು. ಅದೆಲ್ಲ ಮುಗಿದು ಹೋದ ಕಥೆ. ದೇವರ ದಯೆಯಿಂದ ಬದುಕಿದ್ದೇನೆ ಎಂದು ಹೇಳಿದ್ದಾರೆ. ಈ ಕುರಿತು ದಿ ಹಿಂದೂಸ್ತಾನ್ ಟೈಮ್ಸ್ ವೆಬ್‌ಸೈಟ್ ವರದಿ ಮಾಡಿದೆ.
ಪತ್ನಿ ಧನಶ್ರೀ ವರ್ಮಾ ಅವರಿಗೆ ವಿಚ್ಛೇದನ ನೀಡಲು ಮುಂಬೈನ ಬಾಂದ್ರಾದ ಕೌಟುಂಬಿಕ ನ್ಯಾಯಾಲಯ ಕಳೆದ ಮಾರ್ಚ್‌ನಲ್ಲಿ ಅನುಮತಿ ನೀಡಿತ್ತು.
2020ರ ಡಿಸೆಂಬರ್‌ನಲ್ಲಿ ಇಬ್ಬರ ವಿವಾಹ ನಡೆದಿತ್ತು. ಅರ್ಜಿಯ ಪ್ರಕಾರ 2022ರ ಜೂನ್‌ನಿಂದ ಇಬ್ಬರೂ ಪ್ರತ್ಯೇಕ ವಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.