ADVERTISEMENT

IND vs BAN 1st Test: ಭಾರತದ ಗೆಲುವಿಗೆ ಇನ್ನು ನಾಲ್ಕು ಮೆಟ್ಟಿಲು!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಡಿಸೆಂಬರ್ 2022, 11:03 IST
Last Updated 17 ಡಿಸೆಂಬರ್ 2022, 11:03 IST
   

ಚತ್ತೊಗ್ರಾಮ್: ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವಿನ ಸನಿಹದಲ್ಲಿದೆ.

ಕೊನೆಯ ಇನ್ನಿಂಗ್ಸ್‌ನಲ್ಲಿ 513 ರನ್‌ಗಳ ಬೃಹತ್ ಮೊತ್ತ ಬೆನ್ನಟ್ಟಿರುವ ಬಾಂಗ್ಲಾ, ನಾಲ್ಕನೇ ದಿನದ ಅಂತ್ಯಕ್ಕೆ 102 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿದೆ.

ಈ ಮೂಲಕ ಭಾರತದ ಗೆಲುವನ್ನು ಮತ್ತಷ್ಟು ವಿಳಂಬ ಮಾಡಿದೆ. ಭಾರತದ ಜಯಕ್ಕೆ ಈಗ ನಾಲ್ಕು ವಿಕೆಟ್‌ಗಳ ಅಗತ್ಯವಿದೆ. ಇನ್ನೊಂದೆಡೆ ಬಾಂಗ್ಲಾ ಅಂತಿಮ ದಿನದಾಟದಲ್ಲಿ ನಾಲ್ಕು ವಿಕೆಟ್ ಮಾತ್ರ ಬಾಕಿ ಉಳಿದಿರುವಂತೆಯೇ 241 ರನ್ ಗಳಿಸಬೇಕಿದೆ.

ADVERTISEMENT

ಝಾಕೀರ್ ಶತಕ - ಆರಂಭಿಕರ ಜೊತೆಯಾಟ...
ನಾಲ್ಕನೇ ದಿನದಾಟದಲ್ಲಿ ಅಮೋಘ ಶತಕ ಗಳಿಸಿದ ಝಾಕೀರ್ ಹಸನ್ ಮತ್ತು ಆಕರ್ಷಕ ಅರ್ಧಶತಕ ಗಳಿಸಿದ ನಜ್ಮುಲ್ ಹಸನ್ ಶಾಂತೊ ಭಾರತಕ್ಕೆ ಪ್ರತಿರೋಧ ಒಡ್ಡಿದರು.

ಇವರಿಬ್ಬರು ಮೊದಲ ವಿಕೆಟ್‌ಗೆ 124 ರನ್ ಗಳಿಸಿದರು. ಇದರಿಂದಾಗಿ ಭಾರತೀಯ ಪಾಳಯದಲ್ಲಿ ನಡುಕ ಸೃಷ್ಟಿಯಾಯಿತು.

ಆರಂಭಿಕ ಜೋಡಿಯನ್ನು ಉಮೇಶ್ ಯಾದವ್ ಬೇರ್ಪಡಿಸುವುದರೊಂದಿಗೆ ಪಂದ್ಯದಲ್ಲಿ ಭಾರತ ಮಗದೊಮ್ಮೆ ಹಿಡಿತ ಸಾಧಿಸಿತು. ಶಾಂತೊ 67 ರನ್‌ಗಳ ಉಪಯುಕ್ತ ಇನ್ನಿಂಗ್ಸ್ (156 ಎಸೆತ, 7 ಬೌಂಡರಿ) ಕಟ್ಟಿದರು.

ಮತ್ತೊಂದೆಡೆ ದಿಟ್ಟ ಹೋರಾಟ ತೋರಿದ ಝಾಕೀರ್, ಅಮೋಘ ಶತಕ ಗಳಿಸಿದರು. 224 ಎಸೆತಗಳನ್ನು ಎದುರಿಸಿದ ಝಾಕೀರ್ 12 ಬೌಂಡರಿ ಹಾಗೂ ಒಂದು ಸಿಕ್ಸರ್‌ನಿಂದ 100 ರನ್ ಗಳಿಸಿದರು.

ಯಾಸಿರ್ ಅಲಿ (5), ಲಿಟನ್ ದಾಸ್ (19), ಮುಶ್ಫಿಕರ್ ರಹೀಂ (23) ಮತ್ತು ನುರುಲ್ ಹಸನ್‌ರನ್ನು (3) ಕಟ್ಟಿ ಹಾಕುವಲ್ಲಿ ಭಾರತೀಯ ಬೌಲರ್‌ಗಳು ಯಶಸ್ವಿಯಾದರು.

ನಾಯಕ ಶಕಿಲ್ ಅಲ್ ಹಸನ್ 40 ರನ್ ಗಳಿಸಿ ಅಂತಿಮ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಅವರಿಗೆ ಮೆಹದಿ ಹಸನ್ ಮಿರಾಜ್ (9*) ಸಾಥ್ ನೀಡುತ್ತಿದ್ದಾರೆ.

ಭಾರತದ ಪರ ಅಕ್ಷರ್ ಪಟೇಲ್ ಮೂರು ಮತ್ತು ಉಮೇಶ್ ಯಾದವ್, ಕುಲದೀಪ್ ಯಾದವ್ ಮತ್ತು ಆರ್. ಅಶ್ವಿನ್ ತಲಾ ಒಂದು ವಿಕೆಟ್ ಕಬಳಿಸಿದರು.

ಸಂಕ್ಷಿಪ್ತ ಸ್ಕೋರ್ ಪಟ್ಟಿ:

ಭಾರತ ಮೊದಲ ಇನ್ನಿಂಗ್ಸ್ 404ಕ್ಕೆ ಆಲೌಟ್
(ಪೂಜಾರ 90, ಅಯ್ಯರ್ 86, ಅಶ್ವಿನ್ 58, ಕುಲದೀಪ್ 40, ಪಂತ್ 46, ತೈಜುಲ್ 133/4, ಮೆಹದಿ 112/4)

ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್ 150ಕ್ಕೆ ಆಲೌಟ್
(ಮುಶ್ಪಿಕರ್ 28, ಕುಲದೀಪ್ 40/5, ಸಿರಾಜ್ 20/3)

ಭಾರತ ಎರಡನೇ ಇನ್ನಿಂಗ್ಸ್ 258/2 ಡಿಕ್ಲೇರ್
(ಗಿಲ್ 110, ಪೂಜಾರ 102*)

ಬಾಂಗ್ಲಾ ಎರಡನೇ ಇನ್ನಿಂಗ್ಸ್ 272/6
(ಝಾಕೀರ್ 100, ಶಾಂತೊ 67, ಶಕಿಬ್ 40*, ಅಕ್ಷರ್ 50/3)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.