ಫುಟ್‌ಬಾಲ್
ನವದೆಹಲಿ: ಹೊಸದಾಗಿ ವಾಣಿಜ್ಯ ಪಾಲುದಾರನ ಆಯ್ಕೆಗೆ ಟೆಂಡರ್ ಪ್ರಕ್ರಿಯೆ ಪೂರೈಸುವಲ್ಲಿ ವಿಳಂಬ ಮಾಡುವ ಮೂಲಕ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ ‘ನಂಬಿಕೆ ದ್ರೋಹ’ ಎಸಗಿದೆ ಎಂದು ಐಎಸ್‌ಎಲ್‌ನ ಹತ್ತು ಕ್ಲಬ್‌ಗಳು ಆಕ್ರೋಶ ವ್ಯಕ್ತಪಡಿಸಿವೆ.
ಈ ವಿಷಯಕ್ಕೆ ಸಂಬಂಧಿಸಿ ಫೆಡರೇಷನ್ ತಕ್ಷಣವೇ ಸ್ಪಷ್ಟನೆ ನೀಡಬೇಕು ಎಂದು ಕ್ಲಬ್‌ಗಳು ಪತ್ರಮುಖೇನ ಆಗ್ರಹಿಸಿವೆ.
ಆಗಸ್ಟ್ 28ರಂದು ಎಐಎಫ್‌ಎಫ್ ನಿಯಮಾವಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ವಿಚಾರಣೆ ನಡೆದಿತ್ತು. ಆ ಸಂದರ್ಭದಲ್ಲಿ, ಐಎಸ್‌ಎಲ್ ಆಯೋಜನೆಗೆ ಹೊಸ ಪಾಲುದಾರರ ಆಯ್ಕೆಗೆ ಮುಕ್ತ, ಸ್ಪರ್ಧಾತ್ಮಕ ಮತ್ತು ಪಾರದರ್ಶಕ ರೀತಿಯಲ್ಲಿ ಟೆಂಡರ್ ಕರೆಯುವುದಕ್ಕೆ ಫೆಡರೇಷನ್ ಮತ್ತು ಐಎಸ್‌ಎಲ್ ಆಯೋಜಕರಾದ ಎಫ್‌ಎಸ್‌ಡಿಎಲ್ (ರಿಲಯನ್ಸ್ ಒಡೆತನ) ನಿರ್ಣಯಿಸಿ ಸಮ್ಮತಿ ಸೂಚಿಸಿದ್ದವು.
ಇದರಂತೆ, ಡಿಸೆಂಬರ್‌ನಲ್ಲಿ ಹೊಸ ಲೀಗ್ ಋತು ಆರಂಭಿಸಲು ಅನುಕೂಲವಾಗುವಂತೆ ಐಎಫ್‌ಎಫ್ ಅಕ್ಟೋಬರ್ 15ರೊಳಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗಿತ್ತು. ಆದರೆ ಗಡುವಿನೊಳಗೆ ಪ್ರಕ್ರಿಯೆ ಮುಗಿದಿಲ್ಲ.
‘ಈ ಪ್ರಕ್ರಿಯೆ ಪೂರೈಸುವುದಿರಲಿ, ಇನ್ನೂ ಆರಂಭವಾಗದಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ. ಎಐಎಫ್‌ಎಫ್‌ನ ಕಡೆ ಸಂವಹನದ ಕೊರತೆ ತೀವ್ರ ನಿರಾಸೆ ಮೂಡಿಸಿದೆ. ಈ ವಿಷಯದಲ್ಲಿ ತಳೆದಿರುವ ಮೌನವು ನಂಬಿಕೆ ಮತ್ತಷ್ಟು ಕುಸಿಯುವಂತೆ ಮಾಡಿದೆ’ ಎಂದು ಕ್ಲಬ್‌ಗಳು ಅಸಮಾಧಾನ ವ್ಯಕ್ತಪಡಿಸಿವೆ.ಎಐಎಫ್‌ಎಫ್‌ನ ಉತ್ತರದಾಯಿತ್ವ ಮತ್ತು ಪಾರದರ್ಶಕತೆಯ ಕೊರತೆಯು 10 ಕ್ಲಬ್‌ಗಳ (ಚೆನ್ನೈಯಿನ್ ಎಫ್‌ಸಿ, ಪಂಜಾಬ್ ಎಫ್‌ಸಿ, ಹೈದರಾಬಾದ್ ಎಫ್‌ಸಿ, ಬೆಂಗಳೂರು ಎಫ್‌ಸಿ, ಎಫ್‌ಸಿ ಗೋವಾ, ನಾರ್ತ್ ಈಸ್ಟ್ ಯುನೈಟೆಡ್, ಕೇರಳ ಬ್ಲಾಸ್ಟರ್ಸ್, ಒಡಿಶಾ ಎಫ್‌ಸಿ, ಜಮ್ಷೆಡಪುರ ಎಫ್‌ಸಿ ಮತ್ತು ಮುಂಬೈ ಸಿಟಿ ಎಫ್‌ಸಿ) ಆಕ್ರೋಶಕ್ಕೆ ಕಾರಣವಾಗಿದೆ.
ಆದರೆ ಈ ಪತ್ರದಲ್ಲಿ ಕೋಲ್ಕತ್ತದ ಕ್ಲಬ್‌ಗಳಾದ ಮೋಹನ್ ಬಾಗನ್ ಸೂಪರ್ ಜೈಂಟ್, ಈಸ್ಟ್ ಬೆಂಗಾಲ್ ಮತ್ತು ಮೊಹಮ್ಮಡನ್ ಸ್ಪೋರ್ಟಿಂಗ್ ಕ್ಲಬ್‌ಗಳು ಒಳಗೊಂಡಿಲ್ಲ.
ಮೂಲ ಹಕ್ಕುಗಳ ಒಪ್ಪಂದಕ್ಕೆ (ಮಾಸ್ಟರ್ ರೈಟ್ಸ್ ಅಗ್ರಿಮೆಂಟ್) ನವೀಕರಣಕ್ಕೆ ಸಂಬಂಧಿಸಿ ಐಎಎಫ್‌ಎಫ್ ಮತ್ತು ಅದರ ವಾಣಿಜ್ಯ ಪಾಲುದಾರ ಎಫ್‌ಎಸ್‌ಡಿಎಲ್ ನಡುವೆ ಅನಿಶ್ಚಿತತೆ ಮೂಡಿದ ಕಾರಣ 2025–26ನೇ ಋತುವಿನ ಪ್ರಕ್ರಿಯೆಯನ್ನು ಜುಲೈ 11ರಂದು ತಡೆಹಿಡಿಯಲಾಗಿತ್ತು. ಅಂದು ಆರಂಭವಾದ ಬಿಕ್ಕಟ್ಟು ಇನ್ನೂ ಇತ್ಯರ್ಥಗೊಂಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.