ADVERTISEMENT

ಎಐಎಫ್‌ಎಫ್‌ ಡೆಪ್ಯುಟಿ ಪ್ರಧಾನ ಕಾರ್ಯದರ್ಶಿಯಾಗಿ ಅಭಿಷೇಕ್ ಯಾದವ್‌ ನೇಮಕ

ಪಿಟಿಐ
Published 5 ಜನವರಿ 2021, 12:32 IST
Last Updated 5 ಜನವರಿ 2021, 12:32 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಭಾರತದ ಮಾಜಿ ಫುಟ್‌ಬಾಲ್ ಆಟಗಾರ ಅಭಿಷೇಕ್ ಯಾದವ್‌ ಅವರು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ನ (ಎಐಎಫ್‌ಎಫ್‌) ಮೊದಲ ಡೆಪ್ಯುಟಿ ಪ್ರಧಾನ ಕಾರ್ಯದರ್ಶಿಯಾಗಿ ಮಂಗಳವಾರ ನೇಮಕವಾದರು. ಫುಟ್‌ಬಾಲ್ ಮಂಡಳಿ ಸೃಷ್ಟಿಸಿದ ನೂತನ ಹುದ್ದೆ ಇದು.

ಎಐಎಫ್‌ಎಫ್‌ನ ಉನ್ನತ ಹುದ್ದೆಯೊಂದಕ್ಕೆ ಮಾಜಿ ಆಟಗಾರನೊಬ್ಬ ನೇಮಕವಾಗಿರುವುದು ಅಪರೂಪದ ಸಂಗತಿಯಾಗಿದೆ. 40 ವರ್ಷದ ಅಭಿಷೇಕ್‌, ಭೈಚುಂಗ್ ಭುಟಿಯಾ, ಸುನಿಲ್ ಚೆಟ್ರಿ, ಮಹೇಶ್ ಗಾವ್ಳಿ ಹಾಗೂ ಕ್ಲಿಮ್ಯಾಕ್ಸ್ ಲಾರೆನ್ಸ್ ಅವರೊಂದಿಗೆ ರಾಷ್ಟ್ರೀಯ ತಂಡದಲ್ಲಿ ಆಡಿದ್ದಾರೆ. 2018ರ ಜನವರಿಯಿಂದ ಅವರು ಭಾರತ ತಂಡದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

‘ಅಭಿಷೇಕ್ ಅವರು ಇದುವರೆಗೆ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಆಡಳಿತಗಾರನಾಗಿ ಅವರು ಏರಿದ ಎತ್ತರವನ್ನು ಗಮನಿಸುತ್ತಾ ಬಂದಿದ್ದೇನೆ‘ ಎಂದು ಎಐಎಫ್‌ಎಫ್ ಅಧ್ಯಕ್ಷ ಪ್ರಫುಲ್ ಪಟೇಲ್‌ ಹೇಳಿದ್ದಾರೆ.

ADVERTISEMENT

2002ರಲ್ಲಿ ಭಾರತ ತಂಡವು ಎಲ್‌ಜಿ ಕಪ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿತ್ತು. ವಿಯೆಟ್ನಾಂ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಅಭಿಷೇಕ್ ಅವರು ನಿರ್ಣಾಯಕ ಗೋಲು ಗಳಿಸಿದ್ದರು.

ಮಹೀಂದ್ರಾ ಯುನೈಟೆಡ್‌, ಚರ್ಚಿಲ್ ಬ್ರದರ್ಸ್‌ ಹಾಗೂ ಮುಂಬೈ ಎಫ್‌ಸಿ ತಂಡಗಳ ಪರವೂ ಅವರು ಆಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.