ಅದಿತಿ ಚೌಹಾಣ್ –ಟ್ವಿಟರ್ ಚಿತ್ರ
ನವದೆಹಲಿ: ಭಾರತ ಮಹಿಳಾ ಫುಟ್‌ಬಾಲ್ ತಂಡದ ಅನುಭವಿ ಗೋಲ್‌ಕೀಪರ್ ಅದಿತಿ ಚೌಹಾಣ್ ಅವರು 17 ವರ್ಷಗಳ ಅಂತರರಾಷ್ಟ್ರೀಯ ವೃತ್ತಿಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ.
ಯುರೋಪ್‌ನಲ್ಲಿ ವೃತ್ತಿಪರ ಫುಟ್‌ಬಾಲ್ ಆಡಿದ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ 32 ವರ್ಷದ ಚೌಹಾಣ್, ಈಗ ಮೈದಾನದಿಂದ ಹೊರಗೆ ಕೆಲಸ ಮಾಡಲು ಮತ್ತು ತಂಡದಲ್ಲಿ ಮುಂದಿನ ಪೀಳಿಗೆಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ.
ತಮಿಳುನಾಡಿನ ಈ ಆಟಗಾರ್ತಿ 2011ರಿಂದ 2023ರವರೆಗೆ 57 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. 2008ರಿಂದ 2012ರವರೆಗೆ 19 ವರ್ಷದೊಳಗಿನ ಭಾರತ ತಂಡದಲ್ಲಿ ನಾಲ್ಕು ಪಂದ್ಯಗಳನ್ನು ಆಡಿದ್ದಾರೆ.
ಅವರು 2012, 2016 ಮತ್ತು 2019 ರಲ್ಲಿ ಸ್ಯಾಫ್ ಮಹಿಳಾ ಚಾಂಪಿಯನ್‌ಷಿಪ್ ಗೆದ್ದ ಭಾರತ ತಂಡದ ಭಾಗವಾಗಿದ್ದರು. ಇಂಗ್ಲೆಂಡ್‌ನಲ್ಲಿ ನಡೆದ ಮಹಿಳಾ ಸೂಪರ್ ಲೀಗ್‌ಗಾಗಿ ವೆಸ್ಟ್ ಹ್ಯಾಮ್ ಯುನೈಟೆಡ್ ತಂಡಕ್ಕೆ ಎರಡು ಋತುವಿನಲ್ಲಿ ಆಡಿದ್ದರು.
‘ಫುಟ್‌ಬಾಲ್‌ಗೆ ಧನ್ಯವಾದಗಳು, ನನ್ನನ್ನು ರೂಪಿಸಿದ್ದಕ್ಕಾಗಿ, ನನ್ನನ್ನು ಪರೀಕ್ಷಿಸಿದ್ದಕ್ಕಾಗಿ ಮತ್ತು ನನ್ನನ್ನು ಮುನ್ನಡೆಸಿದ್ದಕ್ಕಾಗಿ. ಮರೆಯಲಾಗದ ನೆನಪಿನೊಂದಿಗೆ ಹೆಮ್ಮೆಯಿಂದ 17 ವರ್ಷಗಳ ವೃತ್ತಿಪರ ಫುಟ್‌ಬಾಲ್‌ನಿಂದ ನಿವೃತ್ತಿ ಹೊಂದುತ್ತಿದ್ದೇನೆ’ ಎಂದು ಅದಿತಿ ಗುರುವಾರ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.