ADVERTISEMENT

ಎಎಫ್‌ಸಿ ಕ್ವಾಲಿಫೈಯರ್ಸ್‌: ಭಾರತಕ್ಕೆ ಸಿಂಗಪುರ ಸವಾಲು

ಪಿಟಿಐ
Published 8 ಅಕ್ಟೋಬರ್ 2025, 13:43 IST
Last Updated 8 ಅಕ್ಟೋಬರ್ 2025, 13:43 IST
<div class="paragraphs"><p>ಸುನಿಲ್‌ ಚೆಟ್ರಿ</p></div>

ಸುನಿಲ್‌ ಚೆಟ್ರಿ

   

(ಚಿತ್ರ ಕೃಪೆ: X/@IndianFootball)

ಸಿಂಗಪುರ: ರಾಷ್ಟ್ರೀಯ ಶಿಬಿರದ ಮೊದಲಾರ್ಧದಲ್ಲಿ ಗೊಂದಲಗಳನ್ನು ಮಾಡಿಕೊಂಡ ನಂತರ ಈಗ ಭಾರತ ಫುಟ್‌ಬಾಲ್‌ ತಂಡ ಎಎಫ್‌ಸಿ ಏಷ್ಯನ್ ಕಪ್‌ ಅರ್ಹತಾ ಹಂತದ ಮೂರನೇ ಸುತ್ತಿನ ನಿರ್ಣಾಯಕ ಪಂದ್ಯದಲ್ಲಿ ಗುರುವಾರ ಸಿಂಗಪುರ ತಂಡವನ್ನು ಇಲ್ಲಿ ಎದುರಿಸಲಿದೆ.

ADVERTISEMENT

ಆಗಸ್ಟ್– ಸೆ‍‍ಪ್ಟೆಂಬರ್‌ನಲ್ಲಿ ನಡೆದ ಸಿಎಎಫ್‌ಎ ನೇಷನ್ಸ್‌ ಕಪ್‌ಗೆ ವಿಶ್ರಾಂತಿ ಪಡೆದಿದ್ದ ಅನುಭವಿ ಆಟಗಾರ ಸುನಿಲ್‌ ಚೆಟ್ರಿ ಅವರು ತಂಡಕ್ಕೆ ಮರಳಿದ್ದಾರೆ. ಆದರೆ ಈ ಮಹತ್ವದ ಪಂದ್ಯಕ್ಕೆ ಪೂರ್ವಭಾವಿಯಾಗಿ ಎಲ್ಲ ಆಟಗಾರರು ರಾಷ್ಟ್ರೀಯ ಶಿಬಿರಕ್ಕೆ ಹಾಜರಾಗಿದ್ದು ಕೇವಲ ಒಂದು ವಾರವಿರುವಾಗ.

ನಾಲ್ಕು ತಂಡಗಳ ‘ಸಿ’ ಗುಂಪಿನಲ್ಲಿ ಭಾರತ ಮೊದಲ ಎರಡು ಪಂದ್ಯಗಳ ನಂತರ ಕೇವಲ ಒಂದು ಪಾಯಿಂಟ್‌ ಗಳಿಸಿದ್ದು ತಳದಲ್ಲಿದೆ. ಬಾಂಗ್ಲಾದೇಶ ಜೊತೆ (0–0) ಡ್ರಾ ಮಾಡಿಕೊಂಡ ಭಾರತವು, ಹಾಂಗ್‌ಕಾಂಗ್‌ ಎದುರು (0–1) ಸೋತಿತ್ತು. ಭಾರತ ಒಂದು ಕಡೆ ಪರದಾಡಿದರೆ, ಇನ್ನೊಂದು ಕಡೆ ಸಿಂಗಪುರ ಎರಡು ಪಂದ್ಯಗಳಲ್ಲಿ ನಾಲ್ಕು ಪಾಯಿಂಟ್ಸ್‌ ಗಳಿಸಿ ಅಗ್ರಸ್ಥಾನದಲ್ಲಿದೆ.

ಗುರುವಾರದ ಪಂದ್ಯದಲ್ಲಿ ಭಾರತ ಏನಾದರೂ ಹಿನ್ನಡೆ ಕಂಡರೆ 2027ರ ಪ್ರಧಾನ ಟೂರ್ನಿಯಲ್ಲಿ ಆಡುವ ಅವಕಾಶ ಕಳೆದುಕೊಂಡಂತೆಯೇ. ಗುಂಪಿನಿಂದ ಒಂದು ತಂಡ ಮಾತ್ರ ಪ್ರಧಾನ ಸುತ್ತಿಗೆ ಅರ್ಹತೆ ಪಡೆಯುತ್ತದೆ.

ಬೆಂಗಳೂರಿನಲ್ಲಿ ಸೆ. 20ರಂದು ಆರಂಭವಾದ ರಾಷ್ಟ್ರೀಯ ಶಿಬಿರಕ್ಕೆ ಹೆಡ್‌ ಕೋಚ್‌ ಖಾಲಿದ್ ಜಮೀಲ್ ಅವರು 30 ಮಂದಿ ಸಂಭವನೀಯರನ್ನು ಆಯ್ಕೆ ಮಾಡಿದ್ದರು. ಆದರೆ ಶಿಬಿರ ಆರಂಭವಾದಾಗ 14 ಮಂದಿ ಆಟಗಾರರನ್ನು ಅವರ ಕ್ಲಬ್‌ಗಳು ಬಿಟ್ಟುಕೊಟ್ಟಿರಲಿಲ್ಲ. ಸೆಪ್ಟೆಂಬರ್‌ ಕೊನೆಯಲ್ಲಷ್ಟೇ ಎಲ್ಲರೂ ಲಭ್ಯರಾದರು. ಅಸಹಾಯಕರಾಗಿದ್ದ ಜಮೀಲ್‌ ಇಬ್ಬರು ಡಿಫೆಂಡರ್‌ಗಳನ್ನಿಟ್ಟು ಶಿಬಿರದ ಮೊದಲಾರ್ಧ ನಡೆಸಬೇಕಾಯಿತು.

2022ರಲ್ಲಿ ಸಿಂಗಪುರ ಎದುರು ಭಾರತ ಕೊನೆಯ ಬಾರಿ ಆಡಿದಾಗ ಆ ಪಂದ್ಯ 1–1 ಡ್ರಾ ಆಗಿತ್ತು. 

ಪಂದ್ಯ ಆರಂಭ: ಸಂಜೆ 5.00 (ಭಾರತೀಯ ಕಾಲಮಾನ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.