ಫುಟ್‌ಬಾಲ್
ಯಾಂಗೂನ್ (ಮ್ಯಾನ್ಮಾರ್): ನಾಯಕಿ ಶುಭಾಂಗಿ ಸಿಂಗ್ ಮತ್ತು ಸುಲಂಜನಾ ರಾವುಲ್ ಗಳಿಸಿದ ತಲಾ ಎರಡು ಗೋಲುಗಳ ನೆರವಿನಿಂದ ಭಾರತ ತಂಡ, ಎಎಫ್‌ಸಿ 20 ವರ್ಷದೊಳಗಿನವರ ಮಹಿಳಾ ಏಷ್ಯಾ ಕಪ್ ಕ್ವಾಲಿಫೈಯರ್ ‘ಡಿ’ ಗುಂಪಿನ ಪಂದ್ಯದಲ್ಲಿ ತುರ್ಕಮೆನಿಸ್ತಾನ ತಂಡವನ್ನು 7–0 ಗೋಲುಗಳಿಂದ ಸದೆಬಡಿಯಿತು.
ತುವುನ್ನಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಈ ಪಂದ್ಯದಲ್ಲಿ ಶುಭಾಂಗಿ 7 ಮತ್ತು 42ನೇ ನಿಮಿಷ, ಸುಲಂಜನಾ 38 ಮತ್ತು 90+4ನೇ ನಿಮಿಷ ಗೋಲುಗಳನ್ನು ಗಳಿಸಿದರು. ಶಿವಾನಿ ದೇವಿ (14ನೇ ನಿಮಿಷ), ತೊಯ್ಬಿಸನಾ ಚಾನು (35ನೇ ನಿಮಿಷ), ಪೂಜಾ (65ನೇ ನಿಮಿಷ) ಉಳಿದ ಗೋಲುಗಳನ್ನು ಹೊಡೆದರು.
ಈ ಗೆಲುವಿನೊಂದಿಗೆ ‘ಯಂಗ್ ಟೈಗ್ರೆಸಸ್’ (ಭಾರತ ತಂಡ) ‘ಡಿ’ ಗುಂಪಿನಲ್ಲಿ 4 ಅಂಕಗಳೊಡನೆ (7 ಗೋಲು ವ್ಯತ್ಯಾಸ) ಅಗ್ರಸ್ಥಾನ ಗಳಿಸಿತು.
ಇಂಡೊನೇಷ್ಯಾ ಜೊತೆ ದಿನದ ಮೊದಲ ಪಂದ್ಯವನ್ನು 2–2 ಡ್ರಾ ಮಾಡಿಕೊಂಡಿದ್ದ ಆತಿಥೇಯ ಮ್ಯಾನ್ಮಾರ್ ಅಷ್ಟೇ ಅಂಕಗಳೊಂದಿಗೆ (5 ಗೋಲು ವ್ಯತ್ಯಾಸ) ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿದೆ. ಭಾರತ ಮೊದಲ ಪಂದ್ಯವನ್ನು ಇಂಡೊನೇಷ್ಯಾ ಜೊತೆ ಗೋಲಿಲ್ಲದೇ ಡ್ರಾ ಮಾಡಿಕೊಂಡು ನಿರಾಸೆ ಅನುಭವಿಸಿತ್ತು.
ಭಾನುವಾರ ನಡೆಯುವ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ ತಂಡವು, ಆತಿಥೇಯ ಮ್ಯಾನ್ಮಾರ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ಗೆದ್ದಲ್ಲಿ ಗುಂಪಿನಲ್ಲಿ ಅಗ್ರಸ್ಥಾನದ ಜೊತೆಗೆ ಎಎಫ್‌ಸಿ 20 ವರ್ಷದೊಳಗಿನವರ ಏಷ್ಯನ್ ಕಪ್ ಟೂರ್ನಿಯಲ್ಲಿ ಆಡುವ ಅವಕಾಶವನ್ನು ಭಾರತ ವನಿತೆಯರು ಪಡೆಯಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.