ADVERTISEMENT

ಸೆ.2 ರಂದು ಎಐಎಫ್‌ಎಫ್‌ ಚುನಾವಣೆ

ಆ.25 ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶುರು

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2022, 12:33 IST
Last Updated 23 ಆಗಸ್ಟ್ 2022, 12:33 IST
.
.   

ನವದೆಹಲಿ (ಪಿಟಿಐ): ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ನ (ಎಐಎಫ್‌ಎಫ್‌) ಕಾರ್ಯಕಾರಿ ಸಮಿತಿಗೆ ಚುನಾವಣೆ ಸೆ.2 ರಂದು ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳು ಆ.25 ರಿಂದ ನಾಮಪತ್ರ ಸಲ್ಲಿಸಬಹುದು.

ಎಐಎಫ್‌ಎಫ್‌ ದೈನಂದಿನ ವ್ಯವಹಾರಗಳ ಮೇಲ್ವಿಚಾರಣೆಗೆ ನೇಮಿಸಿದ್ದ ಮೂವರು ಸದಸ್ಯರ ಆಡಳಿತ ಸಮಿತಿಯನ್ನು (ಸಿಒಎ) ಸುಪ್ರೀಂ ಕೋರ್ಟ್‌ ಸೋಮವಾರ ರದ್ದುಗೊಳಿಸಿತ್ತು. ಆ.28 ರಂದು ನಡೆಯಬೇಕಿದ್ದ ಚುನಾವಣೆಯನ್ನು ಒಂದು ವಾರ ಮುಂದೂಡಿತ್ತು.

ಸುಪ್ರೀಂ ಕೋರ್ಟ್‌ ತೀರ್ಪು ಹೊರಬಿದ್ದ ಬೆನ್ನಲ್ಲೇ ಚುನಾವಣಾಧಿಕಾರಿ ಉಮೇಶ್‌ ಸಿನ್ಹಾ ಅವರು ಚುನಾವಣೆ ಪ್ರಕ್ರಿಯೆಗೆ ಸಂಬಂಧಿಸಿದ ಹೊಸ ನೋಟಿಸ್‌ ಹೊರಡಿಸಿದರು.

ADVERTISEMENT

ಗುರುವಾರದಿಂದ ಶನಿವಾರದವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದ್ದು, ಆ.28 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ.

ನಾಮಪತ್ರ ವಾಪಸ್‌ ಪಡೆಯಲು ಆ.29 ಕೊನೆಯ ದಿನವಾಗಿದೆ. ಅಭ್ಯರ್ಥಿಗಳ ಅಂತಿಮಪಟ್ಟಿಯನ್ನು ಆ.30 ರಂದು ಎಐಎಫ್‌ಎಫ್‌ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ.

ನವದೆಹಲಿಯಲ್ಲಿರುವ ಎಐಎಫ್‌ಎಫ್‌ ಕೇಂದ್ರ ಕಚೇರಿಯಲ್ಲಿ ಸೆ.2 ರಂದು ಮತದಾನ ನಡೆಯಲಿದ್ದು, ಅದೇ ದಿನ ಅಥವಾ ಸೆ.3 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಎಐಎಫ್‌ಎಫ್‌ ಮತದಾರರ ಪಟ್ಟಿಯಲ್ಲಿ ’ಖ್ಯಾತನಾಮ ಆಟಗಾರರು‘ ಇರುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ತನ್ನ ಹೊಸ ಆದೇಶದಲ್ಲಿ ತಿಳಿಸಿದೆ. ಆದ್ದರಿಂದ ಭಾರತ ತಂಡದ ಮಾಜಿ ನಾಯಕ ಭೈಚುಂಗ್‌ ಭುಟಿಯಾ ಅವರು ಯಾವುದಾದರೂ ರಾಜ್ಯ ಸಂಸ್ಥೆಯ ಬೆಂಬಲದೊಂದಿಗೆ ಹೊಸದಾಗಿ ನಾಮಪತ್ರ ಸಲ್ಲಿಸಬೇಕಿದೆ. ಈ ಮೊದಲು ಅವರು ‘ಖ್ಯಾತನಾಮ ಆಟಗಾರ‘ನಾಗಿದ್ದುಕೊಂಡು ನಾಮಪತ್ರ ಸಲ್ಲಿಸಿದ್ದರು.

‘ಎಐಎಫ್‌ಎಫ್‌ ಆಡಳಿತದಲ್ಲಿ ಮೂರನೇ ವ್ಯಕ್ತಿಗಳು ಅನಗತ್ಯ ಹಸ್ತಕ್ಷೇಪ ನಡೆಸುತ್ತಿದ್ದಾರೆ‘ ಎಂಬ ಕಾರಣ ಫುಟ್‌ಬಾಲ್‌ ಸಂಸ್ಥೆಗಳ ಅಂತರರಾಷ್ಟ್ರೀಯ ಒಕ್ಕೂಟವು (ಫಿಫಾ) ಆ.15 ರಂದು ಎಐಎಫ್‌ಎಫ್‌ ಮೇಲೆ ಅಮಾನತು ಹೇರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.