ADVERTISEMENT

ಪಾಲ್ಗೊಳ್ಳುವಿಕೆ ಖಚಿತಪಡಿಸಿ: ಕ್ಲಬ್‌ಗಳಿಗೆ ಎಐಎಫ್‌ಎಫ್‌ ವಿನಂತಿ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 19:16 IST
Last Updated 31 ಡಿಸೆಂಬರ್ 2025, 19:16 IST
ಅಭ್ಯಾಸ ನಿರತ ಭಾರತ ತಂಡದ ಆಟಗಾರರು –ಎಐಎಫ್‌ಎಫ್‌ ಚಿತ್ರ
ಅಭ್ಯಾಸ ನಿರತ ಭಾರತ ತಂಡದ ಆಟಗಾರರು –ಎಐಎಫ್‌ಎಫ್‌ ಚಿತ್ರ   

ನವದೆಹಲಿ (ಪಿಟಿಐ): ಈಗಾಗಲೇ ವಿಳಂಬವಾಗಿರುವ ಇಂಡಿಯನ್ ಸೂಪರ್ ಲೀಗ್‌ನಲ್ಲಿ (ಐಎಸ್‌ಎಲ್‌) ಭಾಗವಹಿಸುವ ಬಗ್ಗೆ ಖಚಿತಪಡಿಸು ವಂತೆ ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌) ಬುಧವಾರ ಕ್ಲಬ್‌ಗಳಿಗೆ ಕೇಳಿದೆ.

ತಂಡಗಳು ಪಾಲ್ಗೊಳ್ಳುವುದನ್ನು ಖಚಿತಪಡಿಸಿದರಷ್ಟೇ, ವಿಶ್ವ ಫುಟ್‌ಬಾಲ್‌ ಸಂಸ್ಥೆಯಾದ ಫಿಫಾಕ್ಕೆ ಲೀಗ್‌ನಲ್ಲಿ ನಡೆಯುವ ಪಂದ್ಯಗಳ ನಿಖರವಾದ ಸಂಖ್ಯೆಯನ್ನು ನೀಡಲು ಫೆಡರೇಷನ್‌ಗೆ ಸಾಧ್ಯವಾಗಲಿದೆ. 2025–26ನೇ ಸಾಲಿನ ಐಎಸ್‌ಎಲ್‌ ಇನ್ನೂ ಆರಂಭವಾಗಿಲ್ಲ. ತಂಡಗಳು ಕಡ್ಡಾಯ 24 ಪಂದ್ಯಗಳನ್ನು ಆಡಲು ಸಾಧ್ಯವಾಗುವುದು ಅನುಮಾನ. ಹೀಗಾಗಿ, ಲೀಗ್‌ನಲ್ಲಿ ಕಡ್ಡಾಯವಾಗಿ ಆಡ ಬೇಕಾದ ಪಂದ್ಯಗಳ ಸಂಖ್ಯೆಯನ್ನು ಈ ಬಾರಿ ಕಡಿಮೆ ಮಾಡುವಂತೆ ಐಎಸ್‌ಎಲ್‌ ಕ್ಲಬ್‌ಗಳು ಎಐಎಫ್‌ಎಫ್‌ಗೆ ಕೋರಿವೆ.

ಪಂದ್ಯಗಳ ಸಂಖ್ಯೆ ಕಡಿಮೆಯಾದರೆ, ಅರ್ಹ ಕ್ಲಬ್‌ಗಳು ಎಫ್‌ಸಿ ಚಾಂಪಿಯನ್ಸ್‌ ಲೀಗ್‌ 2ರಲ್ಲಿ ಆಡಲು ಸಾಧ್ಯವಾಗಲಿದೆ.

ADVERTISEMENT

2025–26ನೇ ಸಾಲಿನ ಐಎಸ್‌ಎಲ್‌ ಲೀಗ್ ಯಾವ ರೀತಿ ನಡೆಸಬೇಕೆಂದು ನಿರ್ಧರಿಸಲು ಕ್ಲಬ್‌ಗಳ ಪ್ರತಿನಿಧಿಗಳು ಮತ್ತು ಎಐಎಫ್‌ಎಫ್‌ ರಚಿಸಿದ ಸಮಿತಿ ಈವರೆಗೆ ಐದು ಸಭೆಗಳನ್ನು ನಡೆಸಿವೆ.

ಕನಿಷ್ಠ 24 ಪಂದ್ಯ ಆಡುವುದನ್ನು ಕಡ್ಡಾಯ ಮಾಡುವ ನಿಯಮವನ್ನು ಈ ಬಾರಿ ಸಡಿಲಿಸಲು ಏಷ್ಯನ್‌ ಫುಟ್‌ಬಾಲ್‌ ಕಾನ್ಫಡರೇಷನ್‌ ಬಳಿ ಚರ್ಚಿಸುವಂತೆ ಕ್ಲಬ್‌ಗಳು ಡಿ. 28ರಂದು ನಡೆದ ಸಭೆಯಲ್ಲಿ ಎಐಎಫ್‌ಎಫ್‌ಗೆ ಮನವಿ ಮಾಡಿವೆ.

ಫೆಬ್ರುವರಿ ಮೊದಲ ವಾರ 2025–26ನೇ ಸಾಲಿನ ಐಎಸ್‌ಎಲ್‌ ಋತು ಆರಂಭಿಸಲು ಎಐಎಫ್‌ಎಫ್‌ ಉದ್ದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.