ADVERTISEMENT

ಫುಟ್‌ಬಾಲ್‌| ಭಾರತ–ಮಂಗೋಲಿಯ ಪೈಪೋಟಿ

ಫುಟ್‌ಬಾಲ್‌: ಇಂದಿನಿಂದ ಇಂಟರ್‌ಕಾಂಟಿನೆಂಟಲ್‌ ಕಪ್‌

​ಪ್ರಜಾವಾಣಿ ವಾರ್ತೆ
Published 8 ಜೂನ್ 2023, 14:35 IST
Last Updated 8 ಜೂನ್ 2023, 14:35 IST
ಸುನಿಲ್‌ ಚೆಟ್ರಿ
ಸುನಿಲ್‌ ಚೆಟ್ರಿ   

ಭುವನೇಶ್ವರ: ಭಾರತ ತಂಡ ಶುಕ್ರವಾರ ಇಲ್ಲಿ ಆರಂಭವಾಗಲಿರುವ ಇಂಟರ್‌ಕಾಂಟಿನೆಂಟಲ್‌ ಕಪ್‌ ಫುಟ್‌ಬಾಲ್‌ ಟೂರ್ನಿಯ ಮೊದಲ ಪಂದ್ಯದಲ್ಲಿ ಮಂಗೋಲಿಯ ವಿರುದ್ಧ ಪೈಪೋಟಿ ನಡೆಸಲಿದ್ದು, ಶುಭಾರಂಭದ ನಿರೀಕ್ಷೆಯಲ್ಲಿದೆ.

ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಲೆಬನಾನ್‌ ಮತ್ತು ವನುವಾಟು ತಂಡಗಳು ಎದುರಾಗಲಿವೆ. ಎರಡನೇ ಪಂದ್ಯದಲ್ಲಿ ಭಾರತ ಕಣಕ್ಕಿಳಿಯಲಿದ್ದು, ಎಲ್ಲರ ಚಿತ್ತ ಸುನಿಲ್‌ ಚೆಟ್ರಿ ಮೇಲೆ ನೆಟ್ಟಿದೆ.

ಫಿಫಾ ರ್‍ಯಾಂಕಿಂಗ್‌ನಲ್ಲಿ 101ನೇ ಸ್ಥಾನದಲ್ಲಿರುವ ಭಾರತ ತಂಡವು, ತನಗಿಂತ ತುಂಬಾ ಕೆಳಗಿನ ಸ್ಥಾನದಲ್ಲಿರುವ (183) ಮಂಗೋಲಿಯ ವಿರುದ್ಧ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದೆ. ಈ ಟೂರ್ನಿಯಲ್ಲಿ ಪಾಲ್ಗೊಂಡಿರುವ ತಂಡಗಳಲ್ಲಿ ರ‍್ಯಾಂಕಿಂಗ್‌ನಲ್ಲಿ ಭಾರತಕ್ಕಿಂತ ಮೇಲಿನ ಸ್ಥಾನದಲ್ಲಿರುವುದು ಲೆಬನಾನ್‌ (99) ಮಾತ್ರ.

ADVERTISEMENT

ಆತಿಥೇಯ ತಂಡವು ಅನುಭವಿ ನಾಯಕ ಚೆಟ್ರಿ ಮೇಲೆ ಭರವಸೆ ಇಟ್ಟಿದೆ. 131 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಅವರು ಇದುವರೆಗೆ 84 ಗೋಲುಗಳನ್ನು ಗಳಿಸಿದ್ದಾರೆ. ಇಂಟರ್‌ಕಾಂಟಿನೆಂಟಲ್‌ ಕಪ್‌ ಟೂರ್ನಿಯಲ್ಲಿ ಭಾರತ ತಂಡ ಇದುವರೆಗೆ ಗಳಿಸಿರುವ 16 ಗೋಲುಗಳಲ್ಲಿ 11 ಕೂಡಾ ಚೆಟ್ರಿ ಹೆಸರಿನಲ್ಲಿದೆ. ಈ ಟೂರ್ನಿಯಲ್ಲಿ ‘ಹ್ಯಾಟ್ರಿಕ್‌’ ಗಳಿಸಿರುವ ಏಕೈಕ ಆಟಗಾರ ಎಂಬ ಗೌರವವನ್ನೂ ಅವರು ಹೊಂದಿದ್ದಾರೆ.

2018 ರಲ್ಲಿ ನಡೆದಿದ್ದ ಚೊಚ್ಚಲ ಇಂಟರ್‌ಕಾಂಟಿನೆಂಟಲ್‌ ಕಪ್‌ ಟೂರ್ನಿಯಲ್ಲಿ ಭಾರತ ಚಾಂಪಿಯನ್‌ ಆಗಿತ್ತು. 2019 ರಲ್ಲಿ ಭಾರತ ಗುಂಪು ಹಂತದಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿತ್ತು. ಆ ವರ್ಷ ಕೊರಿಯಾ ಚಾಂಪಿಯನ್‌ ಆಗಿತ್ತು. ಕೋವಿಡ್‌ ಕಾರಣ ಆ ಬಳಿಕ ಟೂರ್ನಿ ನಡೆದಿರಲಿಲ್ಲ. ಇದೀಗ ನಾಲ್ಕು ವರ್ಷಗಳ ಬಿಡುವಿನ ಬಳಿಕ ಆಯೋಜನೆಯಾಗಿದೆ.

‘ಸುನಿಲ್‌ ಅವರು ಒಬ್ಬ ರೋಲ್‌ ಮಾಡೆಲ್‌ ಮತ್ತು ಮಾದರಿ ನಾಯಕ ಆಗಿದ್ಧಾರೆ. ಆಟಗಾರರ ತರಬೇತಿ ಶಿಬಿರದಲ್ಲಿ ಕೈಗೊಂಡಿದ್ದ ಎಲ್ಲ ದೈಹಿಕ ಸಾಮರ್ಥ್ಯ ಪರೀಕ್ಷೆಗಳಲ್ಲೂ ಅವರು ಟಾಪ್‌–5 ರಲ್ಲಿ ಕಾಣಿಸಿಕೊಂಡಿದ್ದಾರೆ. ಆಟದ ಮೇಲೆ ಅವರಿಗಿರುವ ಬದ್ಧತೆಯನ್ನು ಇದು ತೋರಿಸುತ್ತದೆ’ ಎಂದು ಭಾರತ ತಂಡದ ಕೋಚ್‌ ಐಗೊರ್‌ ಸ್ಟಿಮ್ಯಾಚ್‌ ಹೇಳಿದ್ದಾರೆ.

ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಏಷ್ಯಾ ಕಪ್‌ ಟೂರ್ನಿಗೆ ಸಜ್ಜಾಗುವ ನಿಟ್ಟಿನಲ್ಲಿ ಭಾರತ ತಂಡಕ್ಕೆ ಈ ಟೂರ್ನಿ ಮಹತ್ವದ್ದಾಗಿದೆ.

ಪಂದ್ಯ ಆರಂಭ: ರಾತ್ರಿ 7.30

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.