ADVERTISEMENT

ಎಎಫ್‌ಸಿ ಏಷ್ಯನ್‌ ಕಪ್‌ ಫುಟ್‌ಬಾಲ್‌ ಅರ್ಹತಾ ಪಂದ್ಯ: ಜೂ 8ಕ್ಕೆ ಭಾರತ– ಕಾಂಬೊಡಿಯಾ

​ಪ್ರಜಾವಾಣಿ ವಾರ್ತೆ
Published 7 ಜೂನ್ 2022, 13:52 IST
Last Updated 7 ಜೂನ್ 2022, 13:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೋಲ್ಕತ್ತ: ಎಎಫ್‌ಸಿ ಏಷ್ಯನ್‌ ಕಪ್‌ ಫುಟ್‌ಬಾಲ್‌ ಟೂರ್ನಿಯ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ಸುನಿಲ್‌ ಚೆಟ್ರಿ ನೇತೃತ್ವದ ಭಾರತ ತಂಡ ಬುಧವಾರ ಇಲ್ಲಿ ಕಾಂಬೊಡಿಯಾ ಜತೆ ಪೈಪೋಟಿ ನಡೆಸಲಿದೆ.

ಫಿಫಾ ರ್‍ಯಾಂಕಿಂಗ್‌ನಲ್ಲಿ ತನಗಿಂತ ಕೆಳಗಿನ ಸ್ಥಾನದಲ್ಲಿರುವ ಕಾಂಬೊಡಿಯಾ (171) ವಿರುದ್ಧ ಗೆಲುವು ಪಡೆದು ಅರ್ಹತಾ ಸುತ್ತಿನ ಅಭಿಯಾನವನ್ನು ಭರ್ಜರಿಯಾಗಿ ಆರಂಭಿಸುವ ವಿಶ್ವಾಸದಲ್ಲಿ ಭಾರತ ಇದೆ. ‘ಡಿ’ ಗುಂಪಿನಲ್ಲಿರುವ ಭಾರತ, ಬಳಿಕದ ಪಂದ್ಯಗಳಲ್ಲಿ ಅಫ್ಗಾನಿಸ್ತಾನ (150ನೇ ರ‍್ಯಾಂಕ್) ಮತ್ತು ಹಾಂಕಾಂಗ್‌ (147) ತಂಡಗಳನ್ನು ಎದುರಿಸಲಿದೆ.

126ನೇ ಅಂತರರಾಷ್ಟ್ರೀಯ ಪಂದ್ಯವನ್ನಾಡಲಿರುವ ಚೆಟ್ರಿ ಮೇಲೆ ಹೆಚ್ಚಿನ ನಿರೀಕ್ಷೆಯಿದೆ. ಎಎಫ್‌ಸಿ ಏಷ್ಯನ್‌ ಕಪ್‌ 2023ರ ಕೊನೆಯಲ್ಲಿ ಅಥವಾ 2024ರ ಆರಂಭದಲ್ಲಿ ನಡೆಯಲಿದೆ. ‘ಏಷ್ಯನ್‌ ಕಪ್‌ಗೆ ಅರ್ಹತೆ ಪಡೆಯುವುದು ನನ್ನ ಗುರಿ. ಆ ಟೂರ್ನಿಯಲ್ಲಿ ನಾನು ಆಡುವೆನೋ, ಇಲ್ಲವೋ ಎಂಬುದು ಗೊತ್ತಿಲ್ಲ. ನಮ್ಮ ದೇಶದ ತಂಡ ಅಲ್ಲಿ ಆಡಬೇಕು’ ಎಂದು ಚೆಟ್ರಿ ಹೇಳಿದ್ದಾರೆ.

ADVERTISEMENT

ಅರ್ಹತಾ ಟೂರ್ನಿಗೆ ಪೂರ್ವಭಾವಿಯಾಗಿ ನಡೆದಿದ್ದ ಅಭ್ಯಾಸ ಪಂದ್ಯಗಳಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡಿಲ್ಲ. ಐಎಸ್‌ಎಲ್‌ ಚಾಂಪಿಯನ್‌ ಎಟಿಕೆ ಮೋಹನ್‌ ಬಾಗನ್‌ ಎದುರು 1–2 ಗೋಲುಗಳ ಸೋಲು ಎದುರಾಗಿತ್ತು. ಐ–ಲೀಗ್‌ ಆಲ್‌ಸ್ಟಾರ್ಸ್‌ ವಿರುದ್ಧ 2–1 ಗೋಲುಗಳ ಗೆಲುವು ಪಡೆದಿದ್ದರೆ, ಸಂತೋಷ್‌ ಟ್ರೋಫಿ ರನ್ನರ್‌ ಅಪ್‌ ಬಂಗಾಳ ಜತೆ 1–1 ಗೋಲುಗಳ ಡ್ರಾ ಸಾಧಿಸಿತ್ತು.

ಸ್ನಾಯು ಸೆಳೆತಕ್ಕೆ ಒಳಗಾಗಿರುವ ಸ್ಟ್ರೈಕರ್‌ ರಹೀಂ ಅಲಿ ಅವರು ಈ ಪಂದ್ಯದಲ್ಲಿ ಆಡದಿರುವುದು ಭಾರತಕ್ಕೆ ಅಲ್ಪ ಹಿನ್ನಡೆಯಾಗಿ ಪರಿಣಮಿಸಿದೆ. ಅವರ ಅನುಪಸ್ಥಿತಿಯಲ್ಲಿ ಲಿಸ್ಟನ್‌ ಕೊಲಾಸೊ, ಮನ್ವೀರ್ ಸಿಂಗ್‌ ಮತ್ತು ಉದಾಂತ ಸಿಂಗ್‌ ಮೇಲಿನ ಜವಾಬ್ದಾರಿ ಹೆಚ್ಚಿದೆ.

ಪಂದ್ಯದ ಆರಂಭ: ರಾತ್ರಿ 8.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.