ADVERTISEMENT

ಎಟಿಕೆಎಂಬಿಗೆ ಗೆಲುವು ಮುಂದುವರಿಸುವ ಹಂಬಲ

ಇಂಡಿಯನ್‌ ಸೂಪರ್‌ ಲೀಗ್‌ ಫುಟ್‌ಬಾಲ್‌ ಟೂರ್ನಿ: ಇಂದು ಜಮ್ಶೆಡ್‌ಪುರ ಎದುರಾಳಿ

ಪಿಟಿಐ
Published 6 ಡಿಸೆಂಬರ್ 2020, 13:45 IST
Last Updated 6 ಡಿಸೆಂಬರ್ 2020, 13:45 IST
ಎಟಿಕೆ ಮೋಹನ್‌ ಬಾಗನ್ ತಂಡದ ಆಟಗಾರರು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ–ಪಿಟಿಐ ಚಿತ್ರ
ಎಟಿಕೆ ಮೋಹನ್‌ ಬಾಗನ್ ತಂಡದ ಆಟಗಾರರು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ–ಪಿಟಿಐ ಚಿತ್ರ   

ವಾಸ್ಕೊ: ಗೆಲುವಿನ ಸರಣಿ ಮುಂದುವರಿಸುವ ಹಂಬಲದಲ್ಲಿರುವ ಎಟಿಕೆ ಮೋಹನ್‌ ಬಾಗನ್‌ (ಎಟಿಕೆಎಂಬಿ) ತಂಡವು ಇಂಡಿಯನ್ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಸೋಮವಾರ ಜಮ್ಶೆಡ್‌ಪುರ ಎಫ್‌ಸಿ ತಂಡವನ್ನು ಎದುರಿಸಲಿದೆ. ಇಲ್ಲಿಯ ತಿಲಕ್‌ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.

ಟೂರ್ನಿಯಲ್ಲಿ ಆಡಿರುವ ಮೂರೂ ಪಂದ್ಯಗಳನ್ನು ಜಯಿಸಿರುವ ಎಟಿಕೆ, ದಾಳಿ ಹಾಗೂ ಡಿಫೆನ್ಸ್ ವಿಭಾಗಗಳಲ್ಲಿ ಅದ್ಭುತ ಸಾಮರ್ಥ್ಯ ತೋರಿದೆ. ಎದುರಾಳಿಗಳಿಗೆ ಒಂದು ಗೋಲನ್ನೂ ಈ ತಂಡ ಬಿಟ್ಟುಕೊಟ್ಟಿಲ್ಲ. ಪಾಯಿಂಟ್ಸ್ ಪಟ್ಟಿಯಲ್ಲೂ ಅಗ್ರಸ್ಥಾನದಲ್ಲಿದೆ.

ಎರಡು ಡ್ರಾ ಹಾಗೂ ಒಂದು ಪಂದ್ಯದಲ್ಲಿ ಸೋಲು ಅನುಭವಿಸಿರುವ ಜಮ್ಶೆಡ್‌ಪುರ ತಂಡವು ಮೊದಲ ಜಯದ ನಿರೀಕ್ಷೆಯಲ್ಲಿದೆ.

ADVERTISEMENT

‘ಪ್ರತಿ ಪಂದ್ಯವೂ ಸವಾಲಿನದ್ದು. ಲೀಗ್‌ನ ಪ್ರತಿ ಹಣಾಹಣಿಯಲ್ಲೂ ಪೈಪೋಟಿ ಕಂಡುಬರುತ್ತಿದೆ. ಗಳಿಸಿರುವ ಪಾಯಿಂಟ್ಸ್ ಪರಿಗಣಿಸುವುದಾದರೆ ಎಟಿಕೆಎಂಬಿ ಉತ್ತಮ ಆಟವಾಡಿದೆ. ಉತ್ತಮ ಫಲಿತಾಂಶವನ್ನೂ ಪಡೆದಿದೆ. ಹೀಗಾಗಿ ಆ ತಂಡವನ್ನು ಎದುರಿಸಲು ಕಾತರರಾಗಿದ್ದೇವೆ‘ ಎಂದು ಜಮ್ಶೆಡ್‌ಪುರ ತಂಡದ ಕೋಚ್‌ ಓವೆನ್‌ ಕೊಯ್ಲೆ ಹೇಳಿದ್ದಾರೆ.

ಈ ಹಂತದಲ್ಲಿ ಒಂದು ಗೆಲುವು ಮುನ್ನಡೆಗೆ ಹೆಚ್ಚಿನ ಆವೇಗವನ್ನು ನೀಡುತ್ತದೆ ಎಂಬುದು ಕೊಯ್ಲೆ ಅಂಬೋಣ.

‘ನಮ್ಮ ತಂಡದ ಡಿಫೆನ್ಸ್ ವಿಭಾಗ ಉತ್ತಮವಾದ ಆಟ ಆಡಿದ್ದರಿಂದ ಟೂರ್ನಿಯಲ್ಲಿ ಮುನ್ನಡೆ ಸಾಧಿಸಿದ್ದೇವೆ. ಇದೇ ವಿಶ್ವಾಸದೊಂದಿಗೆ ಮುಂದಡಿ ಇಡಲಿದ್ದೇವೆ. ತಾಂತ್ರಿಕ ಶಿಸ್ತು ಹಾಗೂ ಪ್ರಯತ್ನವೇ ನಮ್ಮ ಯಶಸ್ಸಿನ ಗುಟ್ಟು‘ ಎಂದು ಎಟಿಕೆಎಂಬಿ ತಂಡದ ಕೋಚ್‌ ಅಂಟೋನಿಯೊ ಹಬಾಸ್‌ ಹೇಳಿದ್ದಾರೆ.

‘ಪಂದ್ಯದ ಮಿಡ್‌ಫೀಲ್ಡ್ ವಿಭಾಗದಲ್ಲಿ ನಾವು ಇನ್ನಷ್ಟು ಸುಧಾರಿಸಬೇಕಿದೆ‘ ಎಂದೂ ಅವರು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.