
ರಯಾನ್ ವಿಲಿಯಮ್ಸ್
ನವದೆಹಲಿ: ಆಸ್ಟ್ರೇಲಿಯಾದ ಪಾಸ್‌ಪೋರ್ಟ್ ಮರಳಿಸಿ ಭಾರತದ ಪೌರತ್ವ ಪಡೆದಿರುವ ಫಾರ್ವರ್ಡ್ ಆಟಗಾರ ರಯಾನ್ ವಿಲಿಯಮ್ಸ್ ಅವರು ಬೆಂಗಳೂರಿನಲ್ಲಿ ಹೆಡ್ ಕೋಚ್ ಖಾಲಿದ್ ಜಮೀಲ್ ಉಸ್ತುವಾರಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಫುಟ್‌ಬಾಲ್ ಶಿಬಿರವನ್ನು ಸೇರಿಕೊಂಡಿದ್ದಾರೆ.
ಈ ವಿಷಯವನ್ನು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ (ಎಐಎಫ್‌ಎಫ್) ಭಾನುವಾರ ತಿಳಿಸಿದೆ. ಪರ್ತ್‌ನಲ್ಲಿ ಜನಿಸಿರುವ ವಿಲಿಯಮ್ಸ್ ಅವರು ರಕ್ಷಣೆ ಆಟಗಾರ ಜೇ ಗುಪ್ತಾ ಅವರೊಂದಿಗೆ ರಾಷ್ಟ್ರೀಯ ಸೀನಿಯರ್ ಪುರುಷರ ತಂಡದ ಶಿಬಿರ ಸೇರಿಕೊಂಡಿದ್ದಾರೆ ಎಂದು ಎಐಎಫ್‌ಎಫ್ ‘ಎಕ್ಸ್’ನಲ್ಲಿ ಬರೆದುಕೊಂಡಿದೆ.
ಬಾಂಗ್ಲಾದೇಶ ವಿರುದ್ಧ ಢಾಕಾದಲ್ಲಿ ಇದೇ 18ರಂದು ನಡೆಯಲಿರುವ ಎಎಫ್‌ಸಿ ಏಷ್ಯನ್ ಕಪ್ ಅರ್ಹತಾ ಪಂದ್ಯಕ್ಕೆ ಸಜ್ಜಾಗಲು ಈ ಶಿಬಿರ ನಡೆಯುತ್ತಿದೆ.
ಎಐಎಫ್‌ಎಫ್, ವಿದೇಶಿ ತಂಡಗಳಲ್ಲಿ ಆಡುತ್ತಿರುವ ಭಾರತ ಮೂಲದ ಆಟಗಾರರನ್ನು ಸೆಳೆಯಲು ಯತ್ನಿಸುತ್ತಿದೆ. ವಿಲಿಯಮ್ಸ್ ಜೊತೆ ಅಬ್ನೀತ್ ಭಾರತಿ ಅವರನ್ನು ಭಾರತಕ್ಕೆ ಆಡಲು ಆಹ್ವಾನಿಸಿತ್ತು.
ಬೆಂಗಳೂರು ಎಫ್‌ಸಿ ತರಬೇತಿ ಪಡೆಯುವ ತಾಣದಲ್ಲಿ ನಡೆದ ಸಮಾರಂಭದಲ್ಲಿ 32 ವರ್ಷ ವಯಸ್ಸಿನ ವಿಲಿಯಮ್ಸ್ ಅವರಿಗೆ ಭಾರತೀಯ ಪೌರತ್ವ ‘ಹಸ್ತಾಂತರ’ ಸಮಾರಂಭ ಕಾರ್ಯಕ್ರಮವನ್ನು ದಿಗ್ಗಜ ಆಟಗಾರ ಸುನಿಲ್ ಚೆಟ್ರಿ ನಡೆಸಿಕೊಟ್ಟರು.
‘ದೀರ್ಘ ಕಾಲದ ನಂತರ ಈಗ ಅಧಿಕೃತವಾಗಿ ಪೌರತ್ವ ಪಡೆದಿರುವುದು ಹೆಮ್ಮೆ ಮೂಡಿಸಿದೆ. ನಿಮ್ಮ ಪ್ರೀತಿಗೆ ಕೃತಜ್ಞನಾಗಿದ್ದೇನೆ. ಈಗ ಭಾರತೀಯನಾಗಿದ್ದೇನೆ’ ಎಂದು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
ರಯಾನ್ ವಿಲಿಯಮ್ಸ್ ಅವರು ಆಸ್ಟ್ರೇಲಿಯಾ 20 ಮತ್ತು 23 ವರ್ಷದೊಳಗಿನವರ ತಂಡಕ್ಕೆ ಆಡಿದ್ದಾರೆ. ದಕ್ಷಿಣ ಕೊರಿಯಾ ವಿರುದ್ಧ ಒಂದು ಪಂದ್ಯದಲ್ಲಿ ಸಬ್‌ಸ್ಟಿಟ್ಯೂಟ್ ಆಗಿ ಸೀನಿಯರ್ ತಂಡಕ್ಕೂ ಆಡಿದ್ದಾರೆ.
2023ರಲ್ಲಿ ಅವರು ಐಎಸ್‌ಎಲ್ ತಂಡವಾದ ಬೆಂಗಳೂರು ಎಫ್‌ಸಿಯನ್ನು ಸೇರಿದ್ದರು.
ವಿಲಿಯಮ್ಸ್ ಅವರಿಗಿಂತ ಮೊದಲು ಜಪಾನ್‌ನಲ್ಲಿ ಜನಿಸಿದ ಇಝುಮಿ ಅರಾಟ ಅವರು ಭಾರತ ಫುಟ್‌ಬಾಲ್ ತಂಡಕ್ಕೆ ಆಡಿದ್ದರು. ಅವರು 2012ರಲ್ಲಿ ಭಾರತದ ಪೌರತ್ವ ಪಡೆದಿದ್ದರು. 2013 ಮತ್ತು 2014ರ ಅವಧಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.