ADVERTISEMENT

ಸಬ್ರತೊ ಕಪ್ ಫುಟ್‌ಬಾಲ್ ಟೂರ್ನಿ: ಬಾಂಗ್ಲಾ ಬಾಲಕಿಯರಿಗೆ ಚಾಂಪಿಯನ್ ಪಟ್ಟ

ಮಣಿಪುರದ ನೀಲಮಣಿ ಶಾಲೆ ತಂಡದ ವಿರುದ್ಧ ಭರ್ಜರಿ ಗೆಲುವು

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2019, 19:45 IST
Last Updated 6 ಸೆಪ್ಟೆಂಬರ್ 2019, 19:45 IST
ಬಾಂಗ್ಲಾದೇಶ್ ಕ್ರೀಡಾ ಶಿಕ್ಷಾ ಪ್ರತಿಷ್ಠಾನ್‌
ಬಾಂಗ್ಲಾದೇಶ್ ಕ್ರೀಡಾ ಶಿಕ್ಷಾ ಪ್ರತಿಷ್ಠಾನ್‌   

ನವದೆಹಲಿ: ಮಣಿಪುರದ ನೀಲಮಣಿ ಶಾಲೆಯ ತಂಡವನ್ನು ಏಕಪಕ್ಷೀಯವಾದ ನಾಲ್ಕು ಗೋಲುಗಳಿಂದ ಮಣಿಸಿದ ‘ಬಾಂಗ್ಲಾದೇಶ್ ಕ್ರೀಡಾ ಶಿಕ್ಷಾ ಪ್ರತಿಷ್ಠಾನ್‌’ (ಬಿಕೆಎಸ್‌ಪಿ) ತಂಡ ಸುಬ್ರತೊ ಕಪ್ ಅಂತರರಾಷ್ಟ್ರೀಯ ಫುಟ್‌ಬಾಲ್ ಟೂರ್ನಿಯ ಪ್ರಶಸ್ತಿಯನ್ನು ಉಳಿಸಿಕೊಂಡಿತು.

ಶುಕ್ರವಾರ ನಡೆದ ಫೈನಲ್ ಪಂದ್ಯದ ಆರಂಭದಲ್ಲೇ ಬಿಕೆಎಸ್‌ಪಿ ಆತ್ಮವಿಶ್ವಾಸದಿಂದ ಆಡಿತು. ಚೆಂಡಿನ ಮೇಲೆ ಸತತವಾಗಿ ಹಿಡಿತ ಸಾಧಿಸಿಕೊಳ್ಳುವಲ್ಲಿ ಯಶಸ್ವಿಯಾದ ತಂಡ ಐದನೇ ನಿಮಿಷದಲ್ಲೇ ಎದುರಾಳಿ ತಂಡದ ಆವರಣದಲ್ಲಿ ಆತಂಕ ಸೃಷ್ಟಿಸಿತು. ಅಕ್ಲೀಮಾ ಅಕ್ತರ್ ಬಲಭಾಗದಿಂದ ಚೆಂಡನ್ನು ಡ್ರಿಬಲ್ ಮಾಡುತ್ತ ಬಂದು ಎದುರಾಳಿಗಳ ಗೋಲ್ ಪೋಸ್ಟ್‌ನತ್ತ ಒದ್ದರು. ಆದರೆ ಚೆಂಡು ಗುರಿ ಸೇರಲಿಲ್ಲ. 19ನೇ ನಿಮಿಷದಲ್ಲಿ ಲಭಿಸಿದ ಮತ್ತೊಂದು ಅವಕಾಶದಲ್ಲಿ ಅವರು ಎಡವಲಿಲ್ಲ. ಚೆಂಡನ್ನು ಸುಲಭವಾಗಿ ಗುರಿ ಮುಟ್ಟಿಸಿ ಸಂಭ್ರಮಿಸಿದರು.

29ನೇ ನಿಮಿಷದಲ್ಲಿ ಶಿರಿನಾ ಅಕ್ತರ್ ಗಳಿಸಿದ ಗೋಲಿನ ಮೂಲಕ ಬಿಕೆಎಸ್‌ಪಿ ತಂಡ ಮುನ್ನಡೆಯನ್ನು ಇಮ್ಮಡಿಗೊಳಿಸಿತು. ಆಕ್ರಮಣ ಮತ್ತು ಪ್ರತಿರೋಧದಲ್ಲಿ ಪರಿಣಾಮಕಾರಿ ಆಟವಾಡಲು ವಿಫಲವಾದ ಮಣಿಪುರ ಶಾಲಾ ತಂಡ ದ್ವಿತೀಯಾರ್ಧದಲ್ಲಿ ಗೋಲು ಗಳಿಸಲು ಮತ್ತಷ್ಟು ಪ್ರಯತ್ನ ನಡೆಸಿತು. ಆದರೆ ಫಲ ಸಿಗಲಿಲ್ಲ.

ADVERTISEMENT

55ನೇ ನಿಮಿಷದಲ್ಲಿ ಮಣಿಪುರ ಶಾಲಾ ತಂಡದ ರಕ್ಷಣಾ ಗೋಡೆಯನ್ನು ಬೇಧಿಸಿ ಮುನ್ನುಗ್ಗಿದ ಬಿಕೆಎಸ್‌ಪಿ ತಂಡದ ಸಪ್ನಾ ರಾಣಿ ಚೆಂಡನ್ನು ಗುರಿ ಮುಟ್ಟಿಸಿದರು. ಮೂರು ನಿಮಿಷಗಳ ನಂತರಅಕ್ಲೀಮಾ ಅಕ್ತರ್ ವೈಯಕ್ತಿಕ ಎರಡನೇ ಗೋಲು ದಾಖಲಿಸಿದರು.

ವಿಜಯಿ ತಂಡ ₹ 4 ಲಕ್ಷ ಗಳಿಸಿದರೆ ರನ್ನರ್ ಅಪ್‌ ತಂಡಕ್ಕೆ ₹ 2.5 ಲಕ್ಷ ಮೊತ್ತ ಸಲಭಿಸಿತು. ಬಿಕೆಎಸ್‌ಪಿಯ ಸುರುದಾನಿ ಕಿಸ್ಕು ಉತ್ತಮ ಗೋಲ್ ಕೀಪರ್ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಅವರಿಗೆ ₹ 50 ಸಾವಿರ ಲಭಿಸಿತು. ಇದೇ ತಂಡದ ಅಫೀದಾ ಖಂದಕರ್ ಉತ್ತಮ ಆಟಗಾರ್ತಿ ಪ್ರಶಸ್ತಿ (₹ 50 ಸಾವಿರ) ಗಳಿಸಿದರು. ಆ ತಂಡದ ತರಬೇತುಗಾರ್ತಿ ಜಯ ಚಕ್ಮಾ ಉತ್ತಮ ಕೋಚ್ ಎನಿಸಿಕೊಂಡರು (₹ 15 ಸಾವಿರ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.