ADVERTISEMENT

ಸಾಫ್‌ ಕಪ್‌ ಫುಟ್‌ಬಾಲ್‌: ಭಾರತ ವಿರುದ್ಧ ಡ್ರಾ ಸಾಧಿಸಿದ ಬಾಂಗ್ಲಾ

ಸಾಫ್‌ ಕಪ್‌ ಫುಟ್‌ಬಾಲ್‌: ಅಂತರರಾಷ್ಟ್ರೀಯ ಮಟ್ಟದಲ್ಲಿ 76ನೇ ಗೋಲು ಗಳಿಸಿದ ನಾಯಕ ಸುನಿಲ್ ಚೆಟ್ರಿ

ಪಿಟಿಐ
Published 4 ಅಕ್ಟೋಬರ್ 2021, 15:32 IST
Last Updated 4 ಅಕ್ಟೋಬರ್ 2021, 15:32 IST
ಚೆಂಡಿನೊಂದಿಗೆ ಮುನ್ನುಗ್ಗಿದ ಸುನಿಲ್ ಚೆಟ್ರಿ –ಎಐಎಫ್‌ಎಫ್‌ ಚಿತ್ರ
ಚೆಂಡಿನೊಂದಿಗೆ ಮುನ್ನುಗ್ಗಿದ ಸುನಿಲ್ ಚೆಟ್ರಿ –ಎಐಎಫ್‌ಎಫ್‌ ಚಿತ್ರ   

ಮಾಲಿ: ಮೊದಲಾರ್ಧದಲ್ಲೇ ನಾಯಕ ಸುನಿಲ್ ಚೆಟ್ರಿ ಗೋಲು ಗಳಿಸಿ ಭರವಸೆ ಮೂಡಿಸಿದರು. ಆದರೆ ದ್ವಿತೀಯಾರ್ಧದಲ್ಲಿ ತಿರುಗೇಟು ನೀಡಿದ ಬಾಂಗ್ಲಾದೇಶ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು. ಸೋಮವಾರ ನಡೆದ ಸಾಫ್ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ತನ್ನ ಮೊದಲ ಪಂದ್ಯದಲ್ಲಿ ಭಾರತ 1–1ರ ಡ್ರಾಗೆ ಸಮಾಧಾನಪಟ್ಟುಕೊಂಡಿತು.

37 ವರ್ಷದ ಸುನಿಲ್ ಚೆಟ್ರಿ 27ನೇ ನಿಮಿಷದಲ್ಲಿ ಚೆಂಡನ್ನು ಗುರಿ ತಲುಪಿಸಿದರು. ಈ ಮೂಲಕ ತಮ್ಮ 121ನೇ ಪಂದ್ಯದಲ್ಲಿ 76ನೇ ಗೋಲು ಗಳಿಸಿದರು. ಫುಟ್‌ಬಾಲ್ ದಂತಕತೆ, ಬ್ರೆಜಿಲ್‌ನ ಪೆಲೆ ಅವರ ಸಾಧನೆಯೊಂದಿಗೆ ಸಮಬಲ ಸಾಧಿಸಲು ಚೆಟ್ರಿ ಅವರಿಗೆ ಇನ್ನು ಒಂದು ಗೋಲು ಬೇಕಾಗಿದೆ. ಈಗ ಸಕ್ರಿಯರಾಗಿರುವವರ ಪೈಕಿ ಅತಿ ಹೆಚ್ಚು ಗೋಲು ಗಳಿಸಿದವರ ಸಾಲಿನಲ್ಲಿ ಚೆಟ್ರಿ ಈಗ ನಾಲ್ಕನೇ ಸ್ಥಾನದಲ್ಲಿದ್ದಾರೆ. ಕ್ರಿಸ್ಟಿಯಾನೊ ರೊನಾಲ್ಡೊ (111), ಲಯೊನೆಲ್ ಮೆಸ್ಸಿ (79) ಮತ್ತು ಅಲಿ ಮಬ್‌ಕೌತ್ (77) ಮೊದಲ ಮೂರು ಸ್ಥಾನದಲ್ಲಿದ್ದಾರೆ.

ಭಾರತ ತಂಡದ ಆರಂಭ ಉತ್ತಮವಾಗಿತ್ತು. ಕೆಲವೊಮ್ಮೆ ಚೆಂಡಿನ ಮೇಲೆ ಹಿಡಿತ ಸಾಧಿಸುವಲ್ಲಿ ಎದುರಾಳಿಗಳು ಯಶಸ್ವಿಯಾಗಿದ್ದರೂ ಒಟ್ಟಾರೆಯಾಗಿ ಚೆಟ್ರಿ ಬಳಗ ಆಧಿಪತ್ಯ ಸ್ಥಾಪಿಸಿತ್ತು. 54ನೇ ನಿಮಿಷದಲ್ಲಿ ಲಿಸ್ಟನ್ ಕೊಲ್ಯಾಕೊ ಅವರನ್ನು ನೆಲಕ್ಕೆ ಉರುಳಿಸಿ ಬಾಂಗ್ಲಾದೇಶದ ವಿಶ್ವನಾಥ್ ಘೋಷ್‌ ರೆಡ್ ಕಾರ್ಡ್ ಪಡೆದು ಹೊರ ನಡೆದರು. ಆ ನಂತರವಂತೂ ಭಾರತಕ್ಕೆ ಅತ್ಯುತ್ತಮ ಅವಕಾಶ ಇತ್ತು. ಆದರೆ ಬಾಂಗ್ಲಾದ ಪ್ರತಿದಾಳಿಯನ್ನು ಮೀರಿ ನಿಲ್ಲಲು ಭಾರತಕ್ಕೆ ಸಾಧ್ಯವಾಗಲಿಲ್ಲ. 74ನೇ ನಿಮಿಷದಲ್ಲಿ ಗೋಲು ಗಳಿಸಿದ ಬಾಂಗ್ಲಾ ಸಮಬಲ ಸಾಧಿಸಿತು.

ADVERTISEMENT

ಆರಂಭದಲ್ಲಿ ಆಕ್ರಮಣಕಾರಿ ಆಟಕ್ಕೆ ಮುಂದಾದ ಭಾರತಕ್ಕೆ ಚಿಂಗ್ಲೆನ್ಸಾನಾ ಸಿಂಗ್ ಮೂಲಕ ಗೋಲು ಗಳಿಸುವ ಅವಕಾಶ ಒದಗಿತ್ತು. ಆದರೆ ಇಬ್ರಾಹಿಂ ಅವರು ಇದಕ್ಕೆ ಅಡ್ಡಿಯಾದರು. ಬಾಂಗ್ಲಾದೇಶಕ್ಕೆ ಕೆಲವು ಕಾರ್ನರ್ ಅವಕಾಶಗಳು ಲಭಿಸಿದವು. ಆದರೆ ಉದಾಂತ ಸಿಂಗ್ ಅವರು ಅಮೋಘ ಆಟವಾಡಿ ಭಾರತದ ಆತಂಕ ದೂರ ಮಾಡಿದರು.

24ನೇ ನಿಮಿಷದಲ್ಲಿ ಮನ್ವೀರ್ ಸಿಂಗ್ ಹೆಡ್ ಮಾಡಿದ ಚೆಂಡು ಗುರಿ ಮುಟ್ಟಲಿಲ್ಲ. ಆದರೆ ನಂತರದ ಅವಕಾಶದಲ್ಲಿ ಸುನಿಲ್ ಚೆಟ್ರಿ ಯಶಸ್ಸು ಕಂಡರು. ಬಲಭಾಗದಿಂದ ಪ್ರೀತಂ ಕೊತಾಲ್ ನೀಡಿದ ಚೆಂಡನ್ನು ನಿಯಂತ್ರಿಸಿದ ಉದಾಂತ ಸಿಂಗ್ ನಂತರ ಚೆಟ್ರಿಯತ್ತ ತಳ್ಳಿದರು. ಚೆಟ್ರಿ ನಿಖರವಾಗಿ ಒದ್ದು ಗುರಿ ಮುಟ್ಟಿಸಿದರು. 39ನೇ ನಿಮಿಷದಲ್ಲಿ ಚೆಟ್ರಿ ಮತ್ತೊಂದು ಗೋಲು ಗಳಿಸುವ ಪ್ರಯತ್ನ ಮಾಡಿದರು. ಆದರೆ ಗೋಲ್‌ಕೀಪರ್ ಅನಿಸುರ್ ರಹಮಾನ್ ಅದನ್ನು ತಡೆದರು. ಗುರುವಾರ ನಡೆಯಲಿರುವ ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾವನ್ನು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.