ADVERTISEMENT

ಸೂಪರ್ ಕಪ್ ಫುಟ್‌ಬಾಲ್ ಫೈನಲ್ ಇಂದು; ಗೆಲ್ಲುವ ವಿಶ್ವಾಸದಲ್ಲಿ ಚೇಟ್ರಿ ಬಳಗ

ಬೆಂಗಳೂರು ಬಳಗಕ್ಕೆ ಒಡಿಶಾ ಎದುರಾಳಿ

ಪಿಟಿಐ
Published 24 ಏಪ್ರಿಲ್ 2023, 22:11 IST
Last Updated 24 ಏಪ್ರಿಲ್ 2023, 22:11 IST
ಸುನೀಲ್ ಚೇಟ್ರಿ
ಸುನೀಲ್ ಚೇಟ್ರಿ   

ಕೊಯಿಕ್ಕೋಡ್: ಬೆಂಗಳೂರು ಫುಟ್‌ಬಾಲ್ ಕ್ಲಬ್ ಹಾಗೂ ಒಡಿಶಾ ಫುಟ್‌ಬಾಲ್ ಕ್ಲಬ್ ತಂಡಗಳು ಮಂಗಳವಾರ ನಡೆಯಲಿರುವ ಸೂಪರ್ ಕಪ್ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.

2018ರಲ್ಲಿ ಭುವನೇಶ್ವರದಲ್ಲಿ ನಡೆದಿದ್ದ ಫೈನಲ್‌ನಲ್ಲಿ ಬಿಎಫ್‌ಸಿ ಜಯಿಸಿತ್ತು. ಒಡಿಶಾ ತಂಡಕ್ಕೆ ಇದು ಮೊದಲ ಪ್ರಶಸ್ತಿ ಗೆಲ್ಲುವ ಅವಕಾಶವಾಗಿದೆ. 

ಈ ಎರಡೂ ತಂಡಗಳು ಇತ್ತೀಚೆಗೆ ಮುಕ್ತಾಯವಾದ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಟೂರ್ನಿಯಲ್ಲಿ ಪ್ಲೇ ಆಫ್‌ಗೆ ಪ್ರವೇಶಿಸಿದ್ದವು. ಅದರಲ್ಲಿ ಒಡಿಶಾ ತಂಡವು ಎಟಿಕೆ ಮೋಹನ್ ಬಾಗನ್  ಎದುರು ಸೋತಿತ್ತು. ಬೆಂಗಳೂರು ತಂಡವು ಫೈನಲ್ ಕೂಡ ಪ್ರವೇಶಿಸಿತ್ತು. 

ADVERTISEMENT

ಬೆಂಗಳೂರು ತಂಡವು ಕಳೆದ ಸೆಪ್ಟೆಂಬರ್‌ನಲ್ಲಿ ಡುರಾಂಡ್ ಕಪ್ ಕೂಡ ಜಯಿಸಿತ್ತು. ಆ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಒಡಿಶಾ ತಂಡವನ್ನು ಎದುರಿಸಿತ್ತು. ಆ ರೋಚಕ ಪಂದ್ಯದಲ್ಲಿ ರಾಯ್ ಕೃಷ್ಣ ಗೆಲುವಿನ ರೂವಾರಿಯಾಗಿದ್ದರು. 

ಸೂಪರ್ ಕಪ್ ಟೂರ್ನಿಯಲ್ಲಿ ಬಿಎಫ್‌ಸಿ ತಂಡವು ಗುಂಪು ಹಂತದಲ್ಲಿ ಅಮೋಘ ಆಟವಾಡಿ ಸೆಮಿಫೈನಲ್ ಪ್ರವೇಶಿಸಿತ್ತು. ನಾಲ್ಕರ ಘಟ್ಟದಲ್ಲಿ ಜೆಮ್ಶೇಡ್‌ಪುರ ತಂಡದ ಎದುರು ಜಯಿಸಿತು. ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ಸಂಧು ಅವರ ಅಮೋಘ ಆಟವು ಜಯದಲ್ಲಿ ಪ್ರಮುಖ ಪಾತ್ರ ವಹಿಸಿತ್ತು.  ನಾಯಕ ಸುನೀಲ್ ಚೇಟ್ರಿ ಹಾಗೂ ಜಯೇಶ್ ರಾಣೆ ಕೂಡ ಮಿಂಚಿದ್ದರು. 

ಬೆಂಗಳೂರು ತಂಡವು ಈ ಫೈನಲ್‌ನಲ್ಲಿ ಗೆದ್ದರೆ ಎಎಫ್‌ಸಿ ಕಪ್ ಗುಂಪು ಹಂತದ ಕ್ಲಬ್ ಪ್ಲೇ ಆಫ್‌ನಲ್ಲಿ ಗೋಕುಲಂ ಕೇರಳದ ವಿರುದ್ಧ ಸೆಣಸಲಿದೆ.   

‘ನಾವು ಎಎಫ್‌ಪಿ ಟೂರ್ನಿಗಳ ಗುಂಪಿನಲ್ಲಿ ಆಡುತ್ತಿರುವುದು ಹೆಮ್ಮೆಯ ವಿಷಯ. ಕೆಲವು ವರ್ಷಗಳಿಂದ ಈ ಹಂತಕ್ಕೆ ಬರಲು ಶ್ರಮಿಸಿದ್ದೆವು. ಎಎಫ್‌ಸಿ ಕಪ್ ಪ್ಲೇ ಆಫ್‌ನಲ್ಲಿ ಆಡುವುದು ಬೇರೆಲ್ಲದಕ್ಕಿಂತಲೂ ಮಹತ್ವದ್ದು’ ಎಂದು ಚೇಟ್ರಿ ಸಂತಸ ವ್ಯಕ್ತಪಡಿಸಿದ್ದಾರೆ. 

ಇತ್ತೀಚಿನ ಕೆಲವು ಪಂದ್ಯಗಳಲ್ಲಿ ಆರಂಭದಲ್ಲಿ ಹಿನ್ನಡೆ ಅನುಭವಿಸಿದರೂ ಕೊನೆಯ ಹಂತದಲ್ಲಿ ಜಯಿಸುವುದನ್ನು ಒಡಿಶಾ ಕರಗತ ಮಾಡಿಕೊಂಡಿದೆ. 

‘ಇದು ನಮ್ಮ ಚೊಚ್ಚಲ ಫೈನಲ್. ಆದ್ದರಿಂದ ಇದು ನಮಗೆ ಮತ್ತೊಂದು ಪಂದ್ಯವಷ್ಟೇ. ಯಾವುದೇ ಒತ್ತಡ ನಮಗಿಲ್ಲ. ಬಲಿಷ್ಠ ತಂಡದ ಎದುರು ಆಡುತ್ತಿದ್ದು, ಕಠಿಣ ಪೈಪೋಟಿಯಡ್ಡಲು ಪ್ರಯತ್ನಿಸುತ್ತೇವೆ’ ಎಂದು ಒಡಿಶಾ ತಂಡದ ಮುಖ್ಯ ಕೋಚ್ ಕ್ಲಿಫರ್ಡ್ ಮಿರಾಂಡಾ ಹೇಳಿದ್ದಾರೆ. 

ಒಡಿಶಾ ತಂಡವು ಬಿ ಗುಂಪಿನಿಂದ ಸೆಮಿಫೈನಲ್‌ಗೆ ಅರ್ಹತೆ ಗಳಿಸಿತ್ತು. ನಾರ್ತ್‌ ಈಸ್ಟ್ ಯುನೈಟೆಡ್ ಎಫ್‌ಸಿ ವಿರುದ್ಧ ಗೆದ್ದು ಫೈನಲ್ ಪ್ರವೇಶಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.