ADVERTISEMENT

ತಲೆಗೆ ಪೆಟ್ಟು: ಅಂಗಳದಲ್ಲೇ ಕುಸಿದು ಬಿದ್ದ ಗೋಲ್‌ಕೀಪರ್‌

ಬಿಡಿಎಫ್‌ಎ ಸೂ‍ಪರ್‌ ಡಿವಿಷನ್‌ ಲೀಗ್‌ ಫುಟ್‌ಬಾಲ್‌ ಚಾಂ‍ಪಿಯನ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2018, 19:20 IST
Last Updated 15 ನವೆಂಬರ್ 2018, 19:20 IST
ದಿಲೀಪ್‌ ಅವರನ್ನು ಆರೈಕೆ ಮಾಡಿದ ಸಹ ಆಟಗಾರರು –ಪ್ರಜಾವಾಣಿ ಚಿತ್ರ
ದಿಲೀಪ್‌ ಅವರನ್ನು ಆರೈಕೆ ಮಾಡಿದ ಸಹ ಆಟಗಾರರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಬಿಡಿಎಫ್‌ಎ ಆಶ್ರಯದ ಸೂಪರ್‌ ಡಿವಿಷನ್‌ ಲೀಗ್‌ ಪಂದ್ಯದ ವೇಳೆ ತಲೆಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ ಸಿ.ಐ.ಎಲ್‌ ತಂಡದ ಗೋಲ್‌ಕೀಪರ್‌ ದಿಲೀಪ್‌ ಅಂಗಳದಲ್ಲೇ ಪ್ರಜ್ಞೆ ಕಳೆದುಕೊಂಡಿದ್ದರಿಂದ ಗುರುವಾರ ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಹೆಚ್ಚುವರಿ ಅವಧಿಯಲ್ಲಿ (90+1ನೇ ನಿಮಿಷ) ದಿಲೀಪ್‌ ಅವರು ಮೇಲಕ್ಕೆ ಜಿಗಿದು ಚೆಂಡನ್ನು ತಡೆಯಲು ಮುಂದಾದರು. ಈ ವೇಳೆ ಓಜೋನ್‌ ಬೆಂಗಳೂರು ಎಫ್‌ಸಿ ತಂಡದ ಆ್ಯಂಟೊ ರುಶಿಲ್‌, ದಿಲೀಪ್‌ಗೆ ಗುದ್ದಿದರು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರಿಗೆ ಸಹ ಆಟಗಾರರು ಮತ್ತು ವೈದ್ಯರು ಆರೈಕೆ ಮಾಡಿ ಆಂಬುಲೆನ್ಸ್‌ ನೆರವಿನಿಂದ ಹತ್ತಿರದ ಹಾಸ್ಮಟ್‌ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು.

‘ದಿಲೀಪ್‌ ಅವರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಎಂ.ಆರ್‌.ಐ ಮತ್ತು ಸಿ.ಟಿ ಸ್ಕ್ಯಾನ್‌ ಮಾಡಿರುವ ವೈದ್ಯರು ಯಾವುದೇ ಆತಂಕ ಇಲ್ಲ ಎಂದು ತಿಳಿಸಿದ್ದಾರೆ. ಇನ್ನೆರಡು ದಿನಗಳೊಳಗೆ ಅವರು ಗುಣಮುಖರಾಗುವ ವಿಶ್ವಾಸ ಇದೆ’ ಎಂದು ಸಿ.ಐ.ಎಲ್‌. ತಂಡದ ಮ್ಯಾನೇಜರ್‌ ಪಿ.ನಮಶಿವಾಯಂ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಈ ಪಂದ್ಯದಲ್ಲಿ ಓಜೋನ್‌ ಎಫ್‌ಸಿ ಬೆಂಗಳೂರು 2–0 ಗೋಲುಗಳಿಂದ ಗೆದ್ದಿತು. ಪಂದ್ಯದ ಮೊದಲಾರ್ಧದ ಆರಂಭದಲ್ಲಿ ಸಿ.ಐ.ಎಲ್‌ ಮಿಂಚಿತು. ಈ ತಂಡ ಗೋಲು ಗಳಿಸುವ ಹಲವು ಅವಕಾಶಗಳನ್ನು ಸೃಷ್ಟಿಸಿಕೊಂಡಿತ್ತು. ಆದರೆ ಚೆಂಡನ್ನು ಗುರಿ ಮುಟ್ಟಿಸಲು ಮಾತ್ರ ಆಗಲಿಲ್ಲ.

33ನೇ ನಿಮಿಷದಲ್ಲಿ ಓಜೋನ್‌ ತಂಡದ ಶಾಯ್‌ ಗೋಲು ಬಾರಿಸಿದರು. 53ನೇ ನಿಮಿಷದಲ್ಲಿ ಅವರು ಮತ್ತೊಮ್ಮೆ ಕಾಲ್ಚಳಕ ತೋರಿದರು.

‘ಎ’ ಡಿವಿಷನ್‌ ಲೀಗ್‌ ಪಂದ್ಯದಲ್ಲಿ ಇನ್‌ಕಮ್‌ ಟ್ಯಾಕ್ಸ್‌ ಎಫ್‌ಸಿ 2–0 ಗೋಲುಗಳಿಂದ ಯಂಗ್‌ ಚಾಲೆಂಜರ್ಸ್‌ ಎಫ್‌ಸಿ ತಂಡವನ್ನು ಸೋಲಿಸಿತು.

ವಿಜಯೀ ತಂಡದ ಕಿಂಗ್‌ಸ್ಲೆ ಮತ್ತು ಆಸ್ಟಿನ್‌ ಕ್ರಮವಾಗಿ 24 ಮತ್ತು 90+4ನೇ ನಿಮಿಷಗಳಲ್ಲಿ ಗೋಲು ಬಾರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.