ADVERTISEMENT

ಫಿಫಾ: ಇಂಗ್ಲೆಂಡ್‌ಗೆ ಸೋಲು; ಬೆಲ್ಜಿಯಂಗೆ ಅಗ್ರ ಸ್ಥಾನ

ಗೆಲುವಿನ ಗೋಲು ಗಳಿಸಿದ ಅಡ್ನಾನ್ ಜನುಜಾಜ್‌

ಏಜೆನ್ಸೀಸ್
Published 29 ಜೂನ್ 2018, 19:20 IST
Last Updated 29 ಜೂನ್ 2018, 19:20 IST
ಬೆಲ್ಜಿಯಂ ತಂಡದ ಮರಾನೆ ಫೆಲಾನಿ (ಎಡ) ಅವರಿಂದ ಚೆಂಡು ಕಸಿದುಕೊಂಡ ಇಂಗ್ಲೆಂಡ್‌ನ ಫಿಲ್‌ ಜಾನ್ಸ್‌ ಮುನ್ನುಗ್ಗಲು ಪ್ರಯತ್ನಿಸಿದ ಸಂದರ್ಭ ಎಎಫ್‌ಪಿ ಚಿತ್ರ
ಬೆಲ್ಜಿಯಂ ತಂಡದ ಮರಾನೆ ಫೆಲಾನಿ (ಎಡ) ಅವರಿಂದ ಚೆಂಡು ಕಸಿದುಕೊಂಡ ಇಂಗ್ಲೆಂಡ್‌ನ ಫಿಲ್‌ ಜಾನ್ಸ್‌ ಮುನ್ನುಗ್ಗಲು ಪ್ರಯತ್ನಿಸಿದ ಸಂದರ್ಭ ಎಎಫ್‌ಪಿ ಚಿತ್ರ   

ಕಲಿನಿಗ್ರಾಡ್‌ : ಇಂಗ್ಲೆಂಡ್‌ ತಂಡದ ಸವಾಲನ್ನು ಮೆಟ್ಟಿ ನಿಂತ ಬೆಲ್ಜಿಯಂ ತಂಡ ಏಕೈಕ ಗೋಲಿನಿಂದ ಗೆದ್ದು ಸಂಭ್ರಮಿಸಿತು. ಈ ಮೂಲಕ ‘ಜಿ’ ಗುಂಪಿನ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರ ಸ್ಥಾನ ಗಳಿಸಿತು.

ಗುಂಪಿನ ಇತರ ಎರಡು ತಂಡಗಳಾದ ಟ್ಯುನೀಷಿಯಾ ಮತ್ತು ಪನಾಮ ಮೊದಲೇ ಸ್ಪರ್ಧೆಯಿಂದ ಹೊರ ಬಿದ್ದಿದ್ದ ಕಾರಣ ಈ ಪಂದ್ಯದ ಫಲಿತಾಂಶ ಉಭಯ ತಂಡಗಳಿಗೂ ಮಹತ್ವದ್ದಾಗಿರಲಿಲ್ಲ. ಹೀಗಾಗಿ ಒಟ್ಟು 17 ಬದಲಾವಣೆಗಳೊಂದಿಗೆ ಎರಡೂ ತಂಡಗಳು ಕಣಕ್ಕೆ ಇಳಿದಿದ್ದವು.

ಇಂಗ್ಲೆಂಡ್‌ ತಂಡದಿಂದ ಹ್ಯಾರಿ ಕೇನ್ ಅವರನ್ನು ಹೊರಗಿರಿಸಿದ್ದರೆ ರೊಮೆಲು ಲುಕಾಕು, ಈಡನ್‌ ಹಜಾರ್ಡ್‌ ಮತ್ತು ಕೆವಿನ್‌ ಡಿ ಬ್ರೂಯ್ನೆ ಅವರಿಗೆ ಬೆಲ್ಜಿಯಂ ವಿಶ್ರಾಂತಿ ನೀಡಿತ್ತು.

ADVERTISEMENT

ಮೊದಲಾರ್ಧದಲ್ಲಿ ಯಾವ ತಂಡವೂ ಪ್ರಬಲ ಆಕ್ರಮಣಕ್ಕೆ ಮುಂದಾಗಲಿಲ್ಲ. ಆರಂಭದ ಕೆಲವು ನಿಮಿಷಗಳಲ್ಲಿ ನೀರಸ ಆಟಕ್ಕೆ ಪಂದ್ಯ ಸಾಕ್ಷಿಯಾಯಿತು. ನಂತರ ಬೆಲ್ಜಿಯಂನ ಮೂಸಾ ಡಂಬೆಲ್‌ ಆಕ್ರಮಣಕ್ಕೆ ಮುಂದಾದರು. ಆದರೆ ಅವರ ಶ್ರಮವನ್ನು ಇಂಗ್ಲೆಂಡ್‌ನ ಜೋರ್ಡಾನ್‌ ಪಿಕ್‌ಫಾರ್ಡ್ ವಿಫಲಗೊಳಿಸಿದರು.

ಮೊದಲಾರ್ಧದಲ್ಲಿ ಉಭಯ ತಂಡದವರು ಗೋಲು ಗಳಿಸದೆ ವಿರಾಮಕ್ಕೆ ತೆರಳಿದರು. 51ನೇ ನಿಮಿಷ ದಲ್ಲಿ ಅಡ್ನಾನ್ ಜನುಜಾಜ್‌, ಬೆಲ್ಜಿಯಂ ತಂಡಕ್ಕೆ ಗೋಲು ಗಳಿಸಿಕೊಟ್ಟರು. ಅವರು ಬಲವಾಗಿ ಒದ್ದ ಚೆಂಡನ್ನು ತಡೆಯಲು ಜೋರ್ಡನ್‌ ಪಿಕ್‌ಫಾರ್ಡ್ ಪ್ರಯತ್ನಿಸಿದರೂ ಅದಕ್ಕೆ ಫಲ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.