ADVERTISEMENT

ಐಎಸ್‌ಎಲ್: ಬೆಂಗಳೂರು ಎಫ್‌ಸಿ–ಚೆನ್ನೈಯಿನ್ ಪಂದ್ಯ ಡ್ರಾ

ಪಿಟಿಐ
Published 5 ಫೆಬ್ರುವರಿ 2021, 18:57 IST
Last Updated 5 ಫೆಬ್ರುವರಿ 2021, 18:57 IST
ಚೆನ್ನೈಯಿನ್ ಎಫ್‌ಸಿಯ ಎಸ್ಮಾಯೆಲ್ ಗೊನ್ಜಾಲ್ವಸ್ (ಬಿಳಿ ಪೋಷಾಕು) ಅವರ ಮುನ್ನಡೆಯನ್ನು ತಡೆಯಲು ಬಿಎಫ್‌ಸಿ ಆಟಗಾರರು ಯತ್ನಿಸಿದರು –ಐಎಸ್‌ಎಲ್ ಮೀಡಿಯಾ ಚಿತ್ರ
ಚೆನ್ನೈಯಿನ್ ಎಫ್‌ಸಿಯ ಎಸ್ಮಾಯೆಲ್ ಗೊನ್ಜಾಲ್ವಸ್ (ಬಿಳಿ ಪೋಷಾಕು) ಅವರ ಮುನ್ನಡೆಯನ್ನು ತಡೆಯಲು ಬಿಎಫ್‌ಸಿ ಆಟಗಾರರು ಯತ್ನಿಸಿದರು –ಐಎಸ್‌ಎಲ್ ಮೀಡಿಯಾ ಚಿತ್ರ   

ಫತೋರ್ಡ, ಗೋವಾ: ಜಿದ್ದಾಜಿದ್ದಿಯ ಆಟಕ್ಕೆ ಸಾಕ್ಷಿಯಾದ ಪಂದ್ಯದಲ್ಲಿ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ತಂಡದ ಗೆಲುವಿನ ಆಸೆ ಈಡೇರಲಿಲ್ಲ. ಶುಕ್ರವಾರ ಇಲ್ಲಿ ನಡೆದಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿಯ ಚೆನ್ನೈಯಿನ್ ಎಫ್‌ಸಿ ಮತ್ತು ಬಿಎಫ್‌ಸಿ ನಡುವಿನ ಪಂದ್ಯ ಗೋಲಿಲ್ಲದೇ ಡ್ರಾ ಆಯಿತು.

ಒಟ್ಟು 16 ಪಂದ್ಯಗಳನ್ನು ಆಡಿರುವ ಸುನಿಲ್ ಚೆಟ್ರಿ ನಾಯಕತ್ವದ ಬೆಂಗಳೂರು ತಂಡಕ್ಕೆ ಇದು ಏಳನೇ ಡ್ರಾ. ಐದರಲ್ಲಿ ಸೋತಿದೆ ಮತ್ತು ನಾಲ್ಕರಲ್ಲಿ ಜಯಿಸಿದೆ. ಪಾಯಿಂಟ್ಸ್ ಪಟ್ಟಿಯಲ್ಲಿ ತಂಡ ಆರನೇ ಸ್ಥಾನದಲ್ಲಿದೆ. ಹೋದ ಪಂದ್ಯದಲ್ಲಿ ಚೆಟ್ರಿ ಬಳಗವು ಜಯ ಗಳಿಸಿತ್ತು. ಅದೇ ಹುರುಪಿನಲ್ಲಿ ಇಲ್ಲಿಯೂ ಕಣಕ್ಕಿಳಿಯಿತು. ಆದರೆ, ಚೆನ್ನೆಯಿನ್ ತಂಡದ ರಕ್ಷಣಾ ಆಟಗಾರರು ಬಿಎಫ್‌ಸಿ ಸ್ಟ್ರೈಕರ್‌ಗಳನ್ನು ತಡೆಯುವಲ್ಲಿ ಯಶಸ್ವಿಯಾದರು.

ಪಾಸಿಂಗ್‌ ನಿಖರತೆಯಲ್ಲಿ ಬಿಎಫ್‌ಸಿಗಿಂತ ಚೆನ್ನೈಯಿನ್ ಚುರುಕಾಗಿತ್ತು. ಆದರೂ ಅವರಿಗೆ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. ಆರು ಸಲ ಗೋಲ್‌ ಪೋಸ್ಟ್‌ ಸನಿಹಕ್ಕೆ ಚೆಂಡನ್ನು ಒಯ್ಯುವಲ್ಲಿ ಚೆನ್ನೈಯಿನ್ ಆಟಗಾರರು ಸಫಲರಾಗಿದ್ದರು. ಬೆಂಗಳೂರಿನ ರಕ್ಷಣಾ ಆಟಗಾರರೂ ದಿಟ್ಟ ಪ್ರತಿರೋಧ ತೋರಿದರು.

ADVERTISEMENT

ಎಟಿಕೆ ಮೋಹನ್ ಬಾಗನ್‌ಗೆ ಒಡಿಶಾ ಸವಾಲು

ಬ್ಯಾಂಬೊಲಿಮ್‌ನ ಜಿಎಂಸಿ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿರುವ ಪಂದ್ಯದಲ್ಲಿ ಎಟಿಕೆ ಮೋಹನ್ ಬಾಗನ್ ತಂಡವನ್ನು ಒಡಿಶಾ ಎಫ್‌ಸಿ ಎದುರಿಸಲಿದೆ. 14 ಪಂದ್ಯಗಳಲ್ಲಿ ಒಂದನ್ನಷ್ಟೇ ಗೆದ್ದಿರುವ ಒಡಿಶಾ ಎಫ್‌ಸಿ ಕೇವಲ ಎಂಟು ಪಾಯಿಂಟ್‌ಗಳೊಂದಿಗೆ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಉಳಿದಿರುವ ಪಂದ್ಯಗಳಲ್ಲೂ ಜಯ ಸಾಧಿಸಲು ಆಗದೇ ಇದ್ದರೆ ಐಎಸ್‌ಎಲ್‌ನಲ್ಲಿ ಕೇವಲ ಒಂದು ಪಂದ್ಯ ಗೆದ್ದ ಏಕೈಕ ತಂಡ ಎಂಬ ಕಪ್ಪು ಚುಕ್ಕೆ ಒಡಿಶಾದ ಮೇಲೆ ಬೀಳಲಿದೆ. ಈ ಬಾರಿ ಇಲ್ಲಿಯವರೆಗೆ ಅತಿಹೆಚ್ಚು, 21 ಗೋಲುಗಳನ್ನು ಬಿಟ್ಟುಕೊಟ್ಟಿರುವ ತಂಡವಾಗಿದೆ ಅದು. ತಂಡ ಗಳಿಸಿರುವುದು 13 ಗೋಲು ಮಾತ್ರ.

ಹಿಂದಿನ ಸತತ ಐದು ಪಂದ್ಯಗಳಲ್ಲಿ ಜಯ ಕಾಣದ ಒಡಿಶಾ ಇನ್ನು ಮುಂದಿನ ಹಾದಿಯಲ್ಲಿ ಜಯವಲ್ಲದೆ ಬೇರೇನನ್ನೂ ಕನಸು ಕಾಣದು. ಶನಿವಾರದ ಪಂದ್ಯದಲ್ಲಿ ಸೋತರೆ ತಂಡದ ಪ್ಲೇ ಆಫ್ ಆಸೆ ಕೊನೆಗೊಳ್ಳಲಿದೆ. ಜೆರಾಲ್ಡ್‌ ಪೇಟನ್ ತಂಡದ ಹೊಸ ಕೋಚ್ ಆಗಿ ಸೇರ್ಪಡೆಗೊಂಡಿದ್ದು ಜಯದೊಂದಿಗೆ ಅವರು ತಂಡದ ಜೊತೆಗಿನ ಅಭಿಯಾನ ಆರಂಭಿಸುವ ನಿರೀಕ್ಷೆ ಹೊಂದಿದ್ದಾರೆ.

‘ಹಿಂದಿನ ಆರು ಪಂದ್ಯಗಳಲ್ಲಿ ತಂಡ ಗೆಲುವಿನ ಲಕ್ಷಣಗಳನ್ನು ತೋರಿಸಿದೆ. ಹೀಗಾಗಿ ಭರವಸೆ ಮೂಡಿದ್ದು ಉಳಿದಿರುವ ಪಂದ್ಯಗಳ ಪೈಕಿ ಹೆಚ್ಚಿನವುಗಳನ್ನು ಗೆದ್ದು ಮುನ್ನಡೆಯುವುದು ಉದ್ದೇಶ’ ಎಂದು ಪೇಟನ್ ಹೇಳಿದ್ದಾರೆ.

ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಎಟಿಕೆ ಮೋಹನ್‌ ಬಾಗನ್ ಅಗ್ರಸ್ಥಾನದಲ್ಲಿರುವ ಮುಂಬೈ ಸಿಟಿ ಎಫ್‌ಸಿಯನ್ನು ಹಿಂದಿಕ್ಕುವ ನಿರೀಕ್ಷೆಯಲ್ಲಿದ್ದು ಇದರ ಮೊದಲ ಮೆಟ್ಟಿಲಾಗಿ ಒಡಿಶಾ ಎದುರು ಜಯ ಗಳಿಸಬೇಕಾಗಿದೆ. ಮೊದಲ ಲೆಗ್‌ನಲ್ಲಿ ಉಭಯ ತಂಡಗಳು ಮುಖಾಮುಖಿಯಾದಾಗ ರಾಯ್ ಕೃಷ್ಣ ಅಂತಿಮ ನಿಮಿಷಗಳಲ್ಲಿ ಗಳಿಸಿದ ಗೋಲು ಎಟಿಕೆ ಎಂಬಿಗೆ ಜಯ ತಂದುಕೊಟ್ಟಿತ್ತು.

‘ಮುಂಬೈ ಸಿಟಿ ಎಫ್‌ಸಿ ವಿರುದ್ಧ ಯಾವ ರೀತಿಯ ಪ್ರದರ್ಶನ ತೋರಿದ್ದಾರೆಯೋ ಅದೇ ರೀತಿಯಲ್ಲಿ ಒಡಿಶಾ ವಿರುದ್ಧ ಆಡಲು ತಂಡದ ಆಟಗಾರರು ಸಜ್ಜಾಗಿದ್ದಾರೆ. ಕೋಚ್ ಬದಲಾಗಿರುವ ಕಾರಣ ಒಡಿಶಾ ಎಫ್‌ಸಿ ಆಟಗಾರರ ಹುಮ್ಮಸ್ಸು ಸಹಜವಾಗಿ ಇಮ್ಮಡಿಗೊಂಡಿರುವ ಸಾಧ್ಯತೆ ಇದೆ. ಆದ್ದರಿಂದ ಶನಿವಾರ ಆ ತಂಡದ ವಿರುದ್ಧ ಎಚ್ಚರಿಕೆಯ ಆಟ ಆಡಬೇಕಾಗಿದೆ’ ಎಂದು ಎಟಿಕೆಎಂಬಿ ಕೋಚ್ ಆ್ಯಂಟೋನಿಯೊ ಹಬಾಸ್ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.