ಮ್ಯಾಡ್ರಿಡ್: ಕರೀಂ ಬೆಂಜಮಾ ಗಳಿಸಿದ ಎರಡು ಗೋಲುಗಳ ಬಲದಿಂದ ರಿಯಲ್ ಮ್ಯಾಡ್ರಿಡ್ ತಂಡವು ಲಾಲಿಗಾ ಫುಟ್‌ಬಾಲ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು. ಶನಿವಾರ ತಡರಾತ್ರಿ ನಡೆದ ಹಣಾಹಣಿಯಲ್ಲಿ ಆ ತಂಡವು 4–1ರಿಂದ ಡೆಪೊರ್ಟಿವೊ ಅಲಾವೇಸ್ ತಂಡವನ್ನು ಪರಾಭವಗೊಳಿಸಿತು.
ಜಿದ್ದಾಜಿದ್ದಿ ಪೈಪೋಟಿ ನಡೆದ ಪಂದ್ಯದ ಮೊದಲಾರ್ಧ ಗೋಲುರಹಿತವಾಗಿತ್ತು. 48ನೇ ನಿಮಿಷದಲ್ಲಿ ಈಡನ್ ಹಜಾರ್ಡ್ ನೆರವು ಪಡೆದ ಬೆಂಜಮಾ ತಮ್ಮ ತಂಡಕ್ಕೆ ಮೊದಲ ಗೋಲು ತಂದುಕೊಟ್ಟರು. ಎದುರಾಳಿ ತಂಡದ ಮೇಲೆ ದಾಳಿ ಮುಂದುವರಿಸಿದ ರಿಯಲ್ ಮ್ಯಾಡ್ರಿಡ್ ಆಟಗಾರರಿಗೆ 56ನೇ ನಿಮಿಷದಲ್ಲಿ ಮತ್ತೊಂದು ಯಶಸ್ಸು ಸಿಕ್ಕಿತು. ಲೂಕಾ ಮಾಡ್ರಿಚ್ ನೀಡಿದ ಪಾಸ್‌ನಲ್ಲಿ ನ್ಯಾಚೊ ಬಲಗಾಲಿನ ಮೂಲಕ ಕಿಕ್ ಮಾಡಿದ ಚೆಂಡು ಗೋಲು ಪೆಟ್ಟಿಗೆ ಸೇರಿತು.
62ನೇ ನಿಮಿಷದಲ್ಲಿ ಬೆಂಜಮಾ ಮತ್ತೊಮ್ಮೆ ಮೋಡಿ ಮಾಡಿದರು. ಬಲ ಭಾಗದಿಂದ ಚೆಂಡನ್ನು ಸೊಗಸಾಗಿ ಗೋಲುಪೆಟ್ಟಿಗೆಗೆ ಸೇರಿಸಿದ ಅವರು ತಂಡವು 3–0 ಮುನ್ನಡೆ ಸಾಧಿಸುವಂತೆ ಮಾಡಿದರು. 65ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಅವಕಾಶದಲ್ಲಿ ಜೋಸೆಲುಅಲಾವೇಸ್ ತಂಡಕ್ಕೆ ಸಮಾಧಾನಕರ ಗೋಲು ದಾಖಲಿಸಿದರು.
ಇಂಜುರಿ ಅವಧಿಯಲ್ಲಿ ವಿನಿಸಿಯಸ್ ಹೆಡರ್ ಮೂಲಕ ರಿಯಲ್ ಮ್ಯಾಡ್ರಿಡ್ ತಂಡದ ನಾಲ್ಕನೇ ಗೋಲು ಗಳಿಸಿ ಸಂಭ್ರಮವನ್ನು ಹೆಚ್ಚಿಸಿದರು.
ಮತ್ತೊಂದು ಪಂದ್ಯದಲ್ಲಿ ಕ್ಯಾಡಿಜ್ ಮತ್ತು ಲೆವೆಂಟೆ ತಂಡಗಳು 1–1ರ ಡ್ರಾ ಸಾಧಿಸಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.