ADVERTISEMENT

ಮತ್ತೊಂದು ಜಯದತ್ತ ಬಿಎಫ್‌ಸಿ ಚಿತ್ತ

ಐಎಸ್‌ಎಲ್‌: ಇಂದು ಎಟಿಕೆ ವಿರುದ್ಧ ಪೈಪೋಟಿ: ಚೆಟ್ರಿ, ಮಿಕು ಆಕರ್ಷಣೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2018, 18:55 IST
Last Updated 30 ಅಕ್ಟೋಬರ್ 2018, 18:55 IST
ಬಿಎಫ್‌ಸಿ ಆಟಗಾರರು ಅಭ್ಯಾಸದ ವೇಳೆ ಕಂಡಿದ್ದು ಹೀಗೆ
ಬಿಎಫ್‌ಸಿ ಆಟಗಾರರು ಅಭ್ಯಾಸದ ವೇಳೆ ಕಂಡಿದ್ದು ಹೀಗೆ   

ಕೋಲ್ಕತ್ತ: ಈ ಬಾರಿಯ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ನಲ್ಲಿ ತವರಿನ ಹೊರಗೆ ಆಡಿದ ಮೊದಲ ಪಂದ್ಯದಲ್ಲೇ ಗೆದ್ದು ಭರವಸೆ ಮೂಡಿಸಿರುವ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡ ಈಗ ಮತ್ತೆ ಜಯದ ಮಂತ್ರ ಜಪಿಸುತ್ತಿದೆ.

ಇಲ್ಲಿನ ಸಾಲ್ಟ್‌ ಲೇಕ್‌ ಕ್ರೀಡಾಂಗಣದಲ್ಲಿ ಬುಧವಾರ ನಡೆಯುವ ಹಣಾಹಣಿಯಲ್ಲಿ ಸುನಿಲ್‌ ಚೆಟ್ರಿ ಸಾರಥ್ಯದ ಬಿಎಫ್‌ಸಿ, ಆತಿಥೇಯ ಎಟಿಕೆ ತಂಡವನ್ನು ಸುಲಭವಾಗಿ ಮಣಿಸುವ ವಿಶ್ವಾಸದಲ್ಲಿದೆ.

ಈ ಬಾರಿ ಆಡಿರುವ ಮೂರು ಪಂದ್ಯಗಳ ಪೈಕಿ ಬೆಂಗಳೂರಿನ ತಂಡ ಎರಡರಲ್ಲಿ ಗೆದ್ದಿದ್ದು ಒಂದರಲ್ಲಿ ಡ್ರಾ ಮಾಡಿಕೊಂಡಿದೆ. ಚೆಟ್ರಿ ಪಡೆಯ ಖಾತೆಯಲ್ಲಿ ಏಳು ಪಾಯಿಂಟ್ಸ್‌ ಇದ್ದು ಪಟ್ಟಿಯಲ್ಲಿ ಮೂರನೇ ಸ್ಥಾನ ಹೊಂದಿದೆ.

ADVERTISEMENT

ಹೋದ ವರ್ಷ ಐಎಸ್‌ಎಲ್‌ಗೆ ಪದಾರ್ಪಣೆ ಮಾಡಿದ್ದ ಬಿಎಫ್‌ಸಿ, ರನ್ನರ್ಸ್‌ ಅಪ್‌ ಸ್ಥಾನ ಗಳಿಸಿ ಗಮನ ಸೆಳೆದಿತ್ತು. ನೂತನ ಕೋಚ್‌ ಕಾರ್ಲೆಸ್‌ ಕುದ್ರತ್‌ ಅವರ ಮಾರ್ಗದರ್ಶನದಲ್ಲಿ ಈ ಬಾರಿಯೂ ತಂಡದಿಂದ ಪರಿಣಾಮಕಾರಿ ಸಾಮರ್ಥ್ಯ ಮೂಡಿಬರುತ್ತಿದೆ. ಮೂರು ಪಂದ್ಯಗಳಿಂದ ಆರು ಗೋಲು ಗಳಿಸಿರುವುದು ಇದಕ್ಕೆ ಸಾಕ್ಷಿ.

ಮಿಕು ಮತ್ತು ಚೆಟ್ರಿ ಪ್ರವಾಸಿ ಪಡೆಯ ಶಕ್ತಿಯಾಗಿದ್ದಾರೆ. ಮುಂಚೂಣಿ ವಿಭಾಗದಲ್ಲಿ ಆಡುವ ಉದಾಂತ್‌ ಸಿಂಗ್‌, ಚೆಂಚೊ ಗೈಲ್‌ಶೆನ್‌, ಥಾಂಗ್‌ಕೋಶಿಯೆರ್‌ ಹಾವೊಕಿಪ್‌ ಅವರೂ ಮಿಂಚಲು ಕಾಯುತ್ತಿದ್ದಾರೆ.

ಹರ್ಮನ್‌ಜ್ಯೋತ್ ಸಿಂಗ್‌ ಖಾಬ್ರಾ, ಜುನಾನ್‌, ರಿನೊ ಆ್ಯಂಟೊ, ನಿಶು ಕುಮಾರ್‌ ಮತ್ತು ರಾಹುಲ್‌ ಭೆಕೆ ಅವರು ರಕ್ಷಣಾ ವಿಭಾಗದಲ್ಲಿ ತಂಡದ ಆಧಾರ ಸ್ಥಂಭಗಳಾಗಿದ್ದಾರೆ.

ಮಿಡ್‌ಫೀಲ್ಡರ್‌ಗಳಾದ ಕೀನ್ ಲೂಯಿಸ್‌, ಬೊಯಿಥಾಂಗ್ ಹಾವೊಕಿಪ್‌, ಕ್ಸಿಸ್ಕೊ ಹರ್ನಾಂಡೆಜ್‌ ಮತ್ತು ದಿಮಾಸ್‌ ಡೆಲ್‌ಗಾಡೊ ಅವರ ಮೇಲೂ ಭರವಸೆ ಇಡಬಹುದಾಗಿದೆ. ಬಿಎಫ್‌ಸಿ ತಂಡ ಎಟಿಕೆ ಎದುರು 2–0ರ ಗೆಲುವಿನ ದಾಖಲೆ ಹೊಂದಿದೆ. ಇದು ಆಟಗಾರರಲ್ಲಿ ವಿಶ್ವಾಸ ಹೆಚ್ಚುವಂತೆ ಮಾಡಿದೆ.

ಎಟಿಕೆ ತಂಡ ಈ ಬಾರಿ ಐದು ಪಂದ್ಯಗಳನ್ನು ಆಡಿದೆ. ಈ ಪೈಕಿ ಎರಡರಲ್ಲಿ ಗೆದ್ದಿದೆ. ಇನ್ನು ಎರಡು ಪಂದ್ಯಗಳಲ್ಲಿ ಸೋತಿರುವ ತಂಡ ಇನ್ನೊಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದೆ.

ಸ್ಟೀವ್‌ ಕೊಪ್ಪೆಲ್‌ ಮಾರ್ಗದರ್ಶನದಲ್ಲಿ ತರಬೇತುಗೊಂಡಿರುವ ಈ ತಂಡದಲ್ಲೂ ಪ್ರತಿಭಾನ್ವಿತ ಆಟಗಾರರಿದ್ದಾರೆ. ಮುಂಚೂಣಿ ವಿಭಾಗದ ಆಟಗಾರ ಕಲು ಉಚೆ ಮತ್ತು ಜಾನ್‌ ಜಾನ್ಸನ್‌ ಅವರು ಬಿಎಫ್‌ಸಿಯ ರಕ್ಷಣಾ ವಿಭಾಗಕ್ಕೆ ಸವಾಲಾಗಬಲ್ಲ ಸಾಮರ್ಥ್ಯ ಹೊಂದಿದ್ದಾರೆ.

ಆರಂಭ: ರಾತ್ರಿ 7.30

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.