ADVERTISEMENT

ಬಿಎಫ್‌ಸಿಗೆ ಕಂಠೀರವದಲ್ಲಿ 9 ಪಂದ್ಯಗಳು

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ; ಅಕ್ಟೋಬರ್ 21ರಂದು ಮೊದಲ ಹಣಾಹಣಿ

ವಿಕ್ರಂ ಕಾಂತಿಕೆರೆ
Published 16 ಅಕ್ಟೋಬರ್ 2019, 19:42 IST
Last Updated 16 ಅಕ್ಟೋಬರ್ 2019, 19:42 IST

ಬೆಂಗಳೂರು: ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜೆಎಸ್‌ಡಬ್ಲ್ಯು ನಡುವಿನ ಹಗ್ಗಜಗ್ಗಾಟ ಕೊನೆಗೂ ಮುಗಿದಿದೆ. ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಪಂದ್ಯಗಳಿಗೆ ನಗರದ ಕಂಠೀರವ ಕ್ರೀಡಾಂಗಣ ಮುಕ್ತವಾಗಿದೆ. ಹೀಗಾಗಿ ಬೆಂಗಳೂರು ಫುಟ್‌ಬಾಲ್ ಕ್ಲಬ್‌ನ (ಬಿಎಫ್‌ಸಿ) ತವರಿನ 9 ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿವೆ.

ಕಂಠೀರವ ಕ್ರೀಡಾಂಗಣದಲ್ಲಿ ಫುಟ್‌ಬಾಲ್‌ಗೆ ಅವಕಾಶ ನೀಡಿದ್ದರಿಂದ ಸಿಂಥೆಟಿಕ್ ಟ್ರ್ಯಾಕ್ ಹಾಳಾಗಿದೆ ಎಂದು ಆರೋಪಿಸಿ ಕಳೆದ ವರ್ಷ ಅಥ್ಲೆಟಿಕ್ಸ್ ಕೋಚ್‌ಗಳು ಪ್ರತಿಭಟನೆ ನಡೆಸಿದ್ದರು. ಕ್ರೀಡಾಂಗಣದಲ್ಲಿ ಫುಟ್‌ಬಾಲ್‌ಗೆ ಅವಕಾಶ ನೀಡಬಾರದು ಎಂದು ಕೋರಿ ಕೋರ್ಟ್‌ ಮೆಟ್ಟಿಲೇರಿದ್ದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವಿರುದ್ಧ ಬಿಎಫ್‌ಸಿ ಆಡಳಿತ ಜೆಎಸ್‌ಡಬ್ಲ್ಯು ಕೂಡ ದಾವೆ ಹೂಡಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಷರತ್ತುಗಳನ್ನು ವಿಧಿಸಿ ಕ್ರೀಡಾಂಗಣವನ್ನು ಫುಟ್‌ಬಾಲ್‌ಗೆ ಒದಗಿಸುವಂತೆ ಕಳೆದ ತಿಂಗಳ 26ರಂದು ಸೂಚಿಸಿತ್ತು.

ಈ ನಡುವೆ ಬದಲಿ ವ್ಯವಸ್ಥೆ ಮಾಡಿಕೊಳ್ಳಲು ಸಜ್ಜಾದ ಜೆಎಸ್‌ಡಬ್ಲ್ಯು ಪುಣೆಯಲ್ಲಿ ತವರಿನ ಪಂದ್ಯಗಳನ್ನು ಆಡಲು ಸಿದ್ಧತೆ ಮಾಡಿಕೊಂಡಿತ್ತು. ಈಗ, ಎಲ್ಲ ಪಂದ್ಯಗಳನ್ನು ಬೆಂಗಳೂರಿನಲ್ಲೇ ಆಡಲು ಮುಂದಾಗಿದೆ. ಹಾಲಿ ಚಾಂಪಿಯನ್ ಬಿಎಫ್‌ಸಿ ಈ ಆವೃತ್ತಿಯ ಮೊದಲ ಪಂದ್ಯವನ್ನು ಇದೇ 21ರಂದು ನಾರ್ತ್ ಈಸ್ಟ್ ಯುನೈಟೆಡ್ ಎಫ್‌ಸಿ ವಿರುದ್ಧ ಆಡಲಿದೆ. ಈ ಪಂದ್ಯ ಬೆಂಗಳೂರಿನಲ್ಲೇ ನಡೆಯಲಿದೆ. ಅಕ್ಟೋಬರ್‌ನಲ್ಲಿ ಬಿಎಫ್‌ಸಿಗೆ ಎರಡು ಪಂದ್ಯಗಳಿದ್ದು 28ರಂದು ಗೋವಾ ಎದುರಿನ ಪಂದ್ಯ ಮಡಗಾಂವ್‌ನಲ್ಲಿ ನಡೆಯಲಿದೆ.

ADVERTISEMENT

ನವೆಂಬರ್‌ನಲ್ಲಿ 4 ಪಂದ್ಯಗಳಿದ್ದು ಇವುಗಳ ಪೈಕಿ ಸತತ ಎರಡು ಪಂದ್ಯಗಳು (ಚೆನ್ನೈ ಮತ್ತು ಕೇರಳ) ಬೆಂಗಳೂರಿನಲ್ಲಿ ನಡೆಯಲಿವೆ. ಡಿಸೆಂಬರ್‌ನಲ್ಲಿ 3 ಪಂದ್ಯಗಳ ಪೈಕಿ ಏಕೈಕ ಪಂದ್ಯ ತವರಿನಲ್ಲಿ ಇರುತ್ತದೆ. ಜನವರಿಯಲ್ಲಿ ಬಿಎಫ್‌ಸಿಗೆ ಅತ್ಯಧಿಕ 5 ಪಂದ್ಯಗಳಿವೆ. ಇವುಗಳಲ್ಲಿ 4 ಪಂದ್ಯಗಳನ್ನು ವೀಕ್ಷಿಸುವ ಅವಕಾಶ ಬೆಂಗಳೂರಿನ ಫುಟ್‌ಬಾಲ್ ಪ್ರಿಯರಿಗೆ ಲಭಿಸಲಿದೆ. ಫೆಬ್ರುವರಿ 22ರಂದು ಬಿಎಫ್‌ಸಿಯ ಲೀಗ್ ಹಂತದ ಕೊನೆಯ ಪಂದ್ಯ ನಡೆಯಲಿದೆ. ಅದಕ್ಕೆ ಬೆಂಗಳೂರು ಆತಿಥ್ಯ ವಹಿಸಿದ್ದು ಆ ತಿಂಗಳ ಇತರ 2 ಪಂದ್ಯಗಳು ತವರಿನಾಚೆ ನಡೆಯಲಿವೆ.

ಬೆಂಗಳೂರಿನ ಪಂದ್ಯಗಳು
ದಿನಾಂಕ: ಎದುರಾಳಿ ತಂಡ
ಅ. 21:
ನಾರ್ತ್ ಈಸ್ಟ್‌ ಯುನೈಟೆಡ್
ನ.10: ಚೆನ್ನೈಯಿನ್ ಎಫ್‌ಸಿ
ನ.23: ಕೇರಳ ಬ್ಲಾಸ್ಟರ್ಸ್‌ ಎಫ್‌ಸಿ
ಡಿ.15: ಮುಂಬೈ ಸಿಟಿ ಎಫ್‌ಸಿ
ಜ.3: ಎಫ್‌ಸಿ ಗೋವಾ
ಜ.9: ಜೆಮ್‌ಶೆಡ್‌ಪುರ್‌ ಎಫ್‌ಸಿ
ಜ.22: ಒಡಿಶಾ ಎಫ್‌ಸಿ
ಜ.30: ಹೈದರಾಬಾದ್ ಎಫ್‌ಸಿ
ಫೆ.22: ಎಟಿಕೆ

ಟಿಕೆಟ್ ದರ: ಗರಿಷ್ಠ ಮೊತ್ತ ಬೆಂಗಳೂರಿನಲ್ಲಿ
ದೇಶದ ಒಟ್ಟು 10 ನಗರಗಳಲ್ಲಿ ಪಂದ್ಯಗಳು ನಡೆಯಲಿವೆ. ತವರಿನ ಅಂಗಣ ಗಳ ಟಿಕೆಟ್ ದರವನ್ನು ಆಯಾ ತಂಡದ ಆಡಳಿತವೇ ನಿರ್ಧರಿಸುತ್ತದೆ. ಗರಿಷ್ಠ ಮೊತ್ತದಲ್ಲಿ ಕಂಠೀರವ ಕ್ರೀಡಾಂಗಣ ಉಳಿದೆಲ್ಲ ಅಂಗಣಗಳನ್ನು ಹಿಂದಿಕ್ಕಿದೆ.

ಕಂಠೀರವದಲ್ಲಿ ಒಟ್ಟು 15 ಸ್ಟ್ಯಾಂಡ್‌ಗಳಿದ್ದು ಕನಿಷ್ಠ ₹ 150 ಮೊತ್ತ ನಿಗದಿ ಮಾಡಲಾಗಿದೆ. ನಂತರ ₹ 400, ₹ 499, ₹ 700, ₹ 1000, ₹2000, ₹ 3000 ಇದ್ದು ಜೆಎಸ್‌ಡಬ್ಲ್ಯು ಬಾಕ್ಸ್‌ನ ಟಿಕೆಟ್ ದರ ₹ 7500.

ಕೆಲವು ಕ್ರೀಡಾಂಗಣಗಳಲ್ಲಿ ಹೆಚ್ಚು ಸ್ಟ್ಯಾಂಡ್‌ಗಳಿಲ್ಲ. ಕೊಚ್ಚಿಯ ಜವಾ ಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ‘ಎ’ಯಿಂದ ಇ ವರೆಗಿನ 5 ಬ್ಲಾಕ್‌ಗಳು ಮತ್ತು ವಿಐಪಿ ಗ್ಯಾಲರಿ ಮಾತ್ರ ಇದೆ. ಜೆಮ್‌ಶೆಡ್‌ಪುರದಲ್ಲಿ ವಿಐಪಿ ಒಳಗೊಂಡಂತೆ 9 ಸ್ಟ್ಯಾಂಡ್‌ಗಳಿವೆ. ಗೋವಾದಲ್ಲಿ ವಿಐಪಿ ಸ್ಟ್ಯಾಂಡ್ ಇಲ್ಲ. ಪೂರ್ವ–ಪಶ್ಚಿಮ, ಉತ್ತರ–ದಕ್ಷಿಣ ಒಳಗೊಂಡಂತೆ 9 ಸ್ಟ್ಯಾಂಡ್‌ಗಳಿವೆ.

ಮುಂಬೈಯಲ್ಲಿ ತವರಿನ ತಂಡದ ಅಭಿಮಾನಿಗಳ ಸ್ಟ್ಯಾಂಡ್, ಪ್ರವಾಸಿ ತಂಡದ ಅಭಿಮಾನಿಗಳ ಸ್ಟ್ಯಾಂಡ್, ಸಾಮಾನ್ಯ ಸ್ಟ್ಯಾಂಡ್ ಮತ್ತು 2 ವಿಐಪಿ ಸ್ಟ್ಯಾಂಡ್‌ಗಳಷ್ಟೇ ಇವೆ. ಹೊಸ ತಂಡ ಗಳಾದ ಒಡಿಶಾ ಎಫ್‌ಸಿ ಮತ್ತು ಹೈದರಾಬಾದ್ ಎಫ್‌ಸಿಗಳು ಇನ್ನೂ ಟಿಕೆಟ್ ದರದ ಮಾಹಿತಿ ಬಿಡುಗಡೆ ಮಾಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.