ADVERTISEMENT

ಫುಟ್‌ಬಾಲ್: ಬಿಬಿ ಥಾಮಸ್ ಸಹಾಯಕ ಕೋಚ್

​ಪ್ರಜಾವಾಣಿ ವಾರ್ತೆ
Published 26 ಜುಲೈ 2023, 19:50 IST
Last Updated 26 ಜುಲೈ 2023, 19:50 IST
ಬಿಬಿ ಥಾಮಸ್
ಬಿಬಿ ಥಾಮಸ್   

ಮಂಗಳೂರು: ನೇಪಾಳದಲ್ಲಿ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ 19 ವರ್ಷದೊಳಗಿನವರ ಸ್ಯಾಫ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವ ಭಾರತ ತಂಡದ ಸಹಾಯಕ ಕೋಚ್ ಆಗಿ ನಗರದ ಯೆನೆಪೋಯ ವಿಶ್ವವಿದ್ಯಾಲಯದ ಪುಟ್‌ಬಾಲ್ ಕೋಚ್ ಬಿಬಿ ಥಾಮಸ್ ನೇಮಕ‌ಗೊಂಡಿದ್ದಾರೆ.

ಸಂತೋಷ್ ಟ್ರೋಫಿ ಟೂರ್ನಿಯ ರಾಜ್ಯ ತಂಡಕ್ಕೆ 2020ರಿಂದ ಎರಡು ವರ್ಷ ಕರ್ನಾಟಕ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದ ಬಿಬಿ ಥಾಮಸ್ 2010ರಲ್ಲಿ 23 ವರ್ಷದೊಳಗಿನ ಮತ್ತು 2011ರಲ್ಲಿ 17 ವರ್ಷದೊಳಗಿನ ಬಾಲಕರ ರಾಷ್ಟ್ರೀಯ ತಂಡಗಳ ಸಹಾಯಕ ಕೋಚ್ ಆಗಿದ್ದರು.‌ 2010ರಿಂದ ಯೆನೆಪೋಯ ವಿವಿಯಲ್ಲಿದ್ದು ಎಫ್‌ಸಿ ಮಂಗಳೂರಿನ ಯುವ ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಮತ್ತು ಮಂಗಳೂರು ಫುಟ್‌ಬಾಲ್ ಅಕಾಡೆಮಿಯ ತಾಂತ್ರಿಕ ಅಧಿಕಾರಿಯಾಗಿದ್ದಾರೆ.

'19 ವರ್ಷದೊಳಗಿನವರ ಸ್ಯಾಫ್ ಚಾಂಪಿಯನ್‌ಷಿಪ್‌ನ ಅಭ್ಯಾಸ ಶಿಬಿರ ಒಡಿಶಾದ ಭುವನೇಶ್ವರದಲ್ಲಿ 20 ದಿನಗಳಿಂದ ನಡೆಯುತ್ತಿದ್ದು ತಕ್ಷಣ ಶಿಬಿರವನ್ನು ಸೇರಿಕೊಳ್ಳುವಂತೆ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ ಸೂಚಿಸಿದೆ' ಎಂದು ಬಿಬಿ ಥಾಮಸ್ 'ಪ್ರಜಾವಾಣಿ'ಗೆ ತಿಳಿಸಿದರು.

ADVERTISEMENT

ಕಳೆದ ಬಾರಿಯ ಚಾಂಪಿಯನ್ ಭಾರತ ತಂಡ ಈ ಬಾರಿ 'ಬಿ' ಗುಂಪಿನಲ್ಲಿ ಸ್ಥಾನ ಗಳಿಸಿದೆ. ಬಾಂಗ್ಲಾದೇಶ ಮತ್ತು ಭೂತಾನ್ ಇದೇ ಗುಂಪಿನಲ್ಲಿರುವ ಇತರ ತಂಡಗಳು. ಚಾಂಪಿಯನ್‌ಷಿಪ್‌ನ ಮೊದಲ ದಿನವಾದ ಸೆಪ್ಟೆಂಬರ್ 21ರಂದು ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಭಾರತ ಎದುರಿಸಲಿದೆ. ಒಡಿಶಾದ ಸುವೇಂದು ಪಂಡಾ ಅವರು ತಂಡದ ಮುಖ್ಯ‌ ಕೋಚ್ ಆಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.