ADVERTISEMENT

ಪೆಲೆ ನಿಧನಕ್ಕೆ ಫುಟ್‌ಬಾಲ್ ಜಗತ್ತು ಕಂಬನಿ: ಬ್ರೆಜಿಲ್‌ನಲ್ಲಿ ಮೂರು ದಿನ ಶೋಕಾಚರಣೆ

ಬ್ರೆಜಿಲ್‌ನಲ್ಲಿ ಮೂರು ದಿನ ಶೋಕಾಚರಣೆ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2022, 12:36 IST
Last Updated 30 ಡಿಸೆಂಬರ್ 2022, 12:36 IST
   

ಸಾವೊ ಪೌಲೊ: ಕಾಲ್ಚೆಂಡಾಟದ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಪೆಲೆ (82) ಅವರ ನಿಧನಕ್ಕೆ ಫುಟ್‌ಬಾಲ್‌ ಜಗತ್ತು ಕಂಬನಿ ಮಿಡಿದಿದೆ. ಬ್ರೆಜಿಲ್‌ನಲ್ಲಿ ಮೂರು ದಿನ ಶೋಕಾಚರಣೆ ಘೋಷಿಸಲಾಗಿದೆ.

ಇಲ್ಲಿನ ಅಲ್ಬರ್ಟ್‌ ಐನ್‌ಸ್ಟೈನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪೆಲೆ ಗುರುವಾರ ರಾತ್ರಿ ನಿಧನರಾಗಿದ್ದರು. ಕರುಳಿನ ಕ್ಯಾನ್ಸರ್ ಉಲ್ಬಣಿಸಿದ್ದರಿಂದ ಅವರನ್ನು ನ.29 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಬ್ರೆಜಿಲ್‌ನ ವಿವಿಧ ನಗರಗಳಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರನಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಪೆಲೆ ಅವರ ಗೌರವಾರ್ಥವಾಗಿ ರಿಯೊ ಡಿ ಜನೈರೊದ ಕ್ರೈಸ್ಟ್‌ ದಿ ರಿಡೀಮರ್ ಪ್ರತಿಮೆ ಮತ್ತು ಐತಿಹಾಸಿಕ ಮರಕಾನಾ ಕ್ರೀಡಾಂಗಣವನ್ನು ವಿದ್ಯುತ್‌ ದೀಪಗಳಿಂದ ಬೆಳಗಿಸಲಾಯಿತು.

ADVERTISEMENT

ಅಮೆರಿಕದ ಅಧ್ಯಕ್ಷ ಜೋ ಬೈಡನ್‌, ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಐಒಸಿ ಮುಖ್ಯಸ್ಥ ಥಾಮಸ್‌ ಬಾಕ್‌, ಫುಟ್‌ಬಾಲ್‌ ಜಗತ್ತಿನ ಮಾಜಿ ಹಾಗೂ ಹಾಲಿ ಆಟಗಾರರು ಒಳಗೊಂಡಂತೆ ಹಲವು ಗಣ್ಯರು ಪೆಲೆ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಮಂಗಳವಾರ ಅಂತ್ಯಕ್ರಿಯೆ: ಪೆಲೆ ಅಂತ್ಯಕ್ರಿಯೆ ಮಂಗಳವಾರ ಸ್ಯಾಂಟೋಸ್‌ ನಗರದಲ್ಲಿ ನಡೆಯಲಿದೆ ಎಂದು ಅವರು ಈ ಹಿಂದೆ ಆಡಿದ್ದ ಸ್ಯಾಂಟೋಸ್‌ ಕ್ಲಬ್‌ ಹೇಳಿದೆ. ಪೆಲೆ ತಮ್ಮ ವೃತ್ತಿಜೀವನದ ಬಹುಪಾಲು ಪಂದ್ಯಗಳನ್ನು ಸ್ಯಾಂಟೋಸ್‌ನಲ್ಲಿ ಆಡಿದ್ದರು.

ಸ್ಯಾಂಟೋಸ್‌ ಕ್ಲಬ್‌ನ ಕ್ರೀಡಾಂಗಣದಲ್ಲಿ ಇರಿಸಿರುವ ಅವರ ಭಾವಚಿತ್ರಕ್ಕೆ ಸಾವಿರಾರು ಅಭಿಮಾನಿಗಳು ಗೌರವ ಸಲ್ಲಿಸಿ ಕಂಬನಿಗರೆದರು. ಈ ನಗರದಲ್ಲಿ ಏಳು ದಿನ ಶೋಕಾಚರಣೆ ಘೋಷಿಸಲಾಗಿದೆ.

ಮೃತದೇಹವನ್ನು ಅಲ್ಬರ್ಟ್‌ ಐನ್‌ಸ್ಟೈನ್ ಆಸ್ಪತ್ರೆಯಿಂದ ಸೋಮವಾರ ಬೆಳಿಗ್ಗೆ ಸ್ಯಾಂಟೋಸ್‌ನಲ್ಲಿರುವ ಕ್ರೀಡಾಂಗಣಕ್ಕೆ ತರಲಾಗುವುದು. ಅಂದು ಬೆಳಿಗ್ಗೆ 10 ರಿಂದ ಮಂಗಳವಾರ ಬೆಳಿಗ್ಗೆ 10ರ ವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಕ್ಲಬ್‌ನ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.