ADVERTISEMENT

ಗೋವಾ ಸೋಲು ತಪ್ಪಿಸಿದ ಪಂಡಿತ್‌

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2021, 16:32 IST
Last Updated 13 ಫೆಬ್ರುವರಿ 2021, 16:32 IST
ಎಫ್‌ಸಿ ಗೋವಾ ತಂಡದ ಆದಿಲ್‌ ಖಾನ್‌ (ಎಡದಿಂದ ಎರಡನೆಯವರು) ಹಾಗೂ ಚೆನ್ನೈಯಿನ್ ಎಫ್‌ಸಿಯ ಜಾಕಬ್ ಸಿಲ್ವೆಸ್ಟರ್ (ನೀಲಿ ಪೋಷಾಕು) ಅವರು ಚೆಂಡಿಗಾಗಿ ಪೈಪೋಟಿ ನಡೆಸಿದರು–ಪಿಟಿಐ ಚಿತ್ರ
ಎಫ್‌ಸಿ ಗೋವಾ ತಂಡದ ಆದಿಲ್‌ ಖಾನ್‌ (ಎಡದಿಂದ ಎರಡನೆಯವರು) ಹಾಗೂ ಚೆನ್ನೈಯಿನ್ ಎಫ್‌ಸಿಯ ಜಾಕಬ್ ಸಿಲ್ವೆಸ್ಟರ್ (ನೀಲಿ ಪೋಷಾಕು) ಅವರು ಚೆಂಡಿಗಾಗಿ ಪೈಪೋಟಿ ನಡೆಸಿದರು–ಪಿಟಿಐ ಚಿತ್ರ   

ಬ್ಯಾಂಬೊಲಿಮ್: ಪಂದ್ಯದ ಇಂಜುರಿ ಅವಧಿಯಲ್ಲಿ ಕಾಲ್ಚಳಕ ತೋರಿದ ಇಶಾನ್ ಪಂಡಿತ್ ಆತಿಥೇಯ ಎಫ್‌ಸಿ ಗೋವಾ ತಂಡಕ್ಕೆ ಆಪತ್ಬಾಂಧವರಾದರು. ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್‌ ಟೂರ್ನಿಯಲ್ಲಿ ಶನಿವಾರ ಗೋವಾ ತಂಡವು ಚೆನ್ನೈಯಿನ್ ಎಫ್‌ಸಿ ತಂಡದೊಂದಿಗೆ 2–2ರ ಡ್ರಾ ಸಾಧಿಸಿತು.

ಪಂದ್ಯದ 13ನೇ ನಿಮಿಷದಲ್ಲೇ ಜಾಕಬ್ ಸಿಲ್ವೆಸ್ಟರ್‌ ಗೋಲಿನ ಖಾತೆ ತೆರೆಯುವುದರೊಂದಿಗೆ ಚೆನ್ನೈಯಿನ್ ಎಫ್‌ಸಿ ಮುನ್ನಡೆ ಸಾಧಿಸಿತು. 19ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಅವಕಾಶದಲ್ಲಿ ಮೋಡಿ ಮಾಡಿದ ಇಗೊರ್ ಅಂಗುಲೊ ಸಮಬಲದ ಗೋಲು ದಾಖಲಿಸಿದರು. ಆ ಬಳಿಕ ಮೊದಲಾರ್ಧದವರೆಗೆ ಉಭಯ ತಂಡಗಳು ಮುನ್ನಡೆ ಗಳಿಸಲು ಪ್ರಯತ್ನಿಸಿದರೂ ಯಶಸ್ಸು ಲಭಿಸಲಿಲ್ಲ.

60ನೇ ನಿಮಿಷದಲ್ಲಿ ರೇಗನ್ ಸಿಂಗ್ ನೆರವು ಪಡೆದ ಲಾಲಿಂಜುವಾಲ ಚಾಂಗ್ಟೆ ಸೊಗಸಾದ ಗೋಲು ದಾಖಲಿಸಿ ಚೆನ್ನೈ ತಂಡದ ಮುನ್ನಡೆಗೆ ಕಾರಣರಾದರು. ಪಂದ್ಯದ ಕೊನೆಯ ಕ್ಷಣದವರೆಗೆ ಇದನ್ನು ಉಳಿಸಿಕೊಂಡಿದ್ದ ತಂಡವು ಇಂಜುರಿ ಅವಧಿಯಲ್ಲಿ ‘ಗಾಯ‘ ಮಾಡಿಕೊಂಡಿತು.

ADVERTISEMENT

ಆಲ್ಬರ್ಟೊ ನೊಗ್ವೆರೊ ನೀಡಿದ ಪಾಸ್‌ನಲ್ಲಿ ಗೋಲು ಹೊಡೆದ ಇಶಾನ್ ಪಂಡಿತ್ ಚೆನ್ನೈನ ಗೆಲುವಿನ ಆಸೆಗೆ ತಣ್ಣೀರೆರಚಿದರು.

ಜಿದ್ದಾಜಿದ್ದಿನ ಪಂದ್ಯದಲ್ಲಿ ಉಭಯ ತಂಡಗಳ ಐದು ಮಂದಿ ಆಟಗಾರರು ಹಳದಿ ಕಾರ್ಡ್ ದರ್ಶನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.