ADVERTISEMENT

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್: ಚೆನ್ನೈಯಿನ್‌ಗೆ ಜೆಮ್ಶೆಡ್‌ಪುರ ಸವಾಲು

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಕೋಚ್ ಓವೆನ್ ಕೊಯ್ಲೆಗೆ ಸವಾಲಿನ ಪಂದ್ಯ

ಪಿಟಿಐ
Published 23 ನವೆಂಬರ್ 2020, 15:04 IST
Last Updated 23 ನವೆಂಬರ್ 2020, 15:04 IST
ಜಾಕಿಚಾಂದ್ ಸಿಂಗ್ –ಟ್ವಿಟರ್ ಚಿತ್ರ
ಜಾಕಿಚಾಂದ್ ಸಿಂಗ್ –ಟ್ವಿಟರ್ ಚಿತ್ರ   

ವಾಸ್ಕೊ, ಗೋವಾ: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯ ಕಳೆದ ಆವೃತ್ತಿಯ ಆರಂಭದಲ್ಲಿ ಚೆನ್ನೈಯಿನ್ ಎಫ್‌ಸಿ ತಂಡ ಕಳಪೆ ಪ್ರದರ್ಶನ ತೋರುತ್ತ ಸಾಗಿತ್ತು. ಲೀಗ್ ಅರ್ಧ ಹಾದಿ ಸವೆದಾಗ ತಂಡ ಪಾಯಿಂಟ್ ಪಟ್ಟಿಯ ಕೊನೆಯಲ್ಲಿತ್ತು. ಈ ಸಂದರ್ಭದಲ್ಲಿ ತಂಡದ ಆಡಳಿತ ಕೈಗೊಂಡ ನಿರ್ಧಾರ ಫಲ ನೀಡಿತು. ಕೋಚ್ ಬದಲಿಸಿ ಓವೆನ್ ಕೊಯ್ಲೆ ಅವರಿಗೆ ತರಬೇತಿಯ ಜವಾಬ್ದಾರಿ ನೀಡಿತು. ಅವರ ಮಾರ್ಗದರ್ಶನದಲ್ಲಿ ತಂಡ ಗೆಲುವಿನ ನಾಗಾಲೋಟ ಆರಂಭಿಸಿತು. ಕೊನೆಗೆ ಫೈನಲ್‌ಗೂ ಪ್ರವೇಶಿಸಿತು.

ಆದರೆ ಏಳನೇ ಆವೃತ್ತಿಯಲ್ಲಿ ತಂಡದೊಂದಿಗೆ ಓವೆನ್ ಕೊಯ್ಲೆ ಇಲ್ಲ. ಅವರು ಈಗ ಜೆಮ್ಶೆಡ್‌ಪುರ ಎಫ್‌ಸಿಯ ಜೊತೆ ಇದ್ದಾರೆ. ಅದೇ ತಂಡವನ್ನು ಚೆನ್ನೈಯಿನ್ ಎಫ್‌ಸಿ ಈ ಬಾರಿ ತನ್ನ ಮೊದಲ ಪಂದ್ಯದಲ್ಲಿ ಮಂಗಳವಾರ ಎದುರಿಸಲಿದೆ. ಇಲ್ಲಿನ ತಿಲಕ್ ಮೈದಾನ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ನೆರಿಜಸ್ ವಾಲ್‌ಸ್ಕಿ ಮತ್ತು ಮಿಜೋರಾಂ ಆಟಗಾರ ಲಾಲ್‌ಡಿಂಗ್ಲಿಯಾನ ರೆಂಗ್ತ್ಲಿ ಕೂಡ ಚೆನ್ನೈಯಿನ್‌ಗೆ ಸವಾಲಾಗಲಿದ್ದಾರೆ. ಈ ಇಬ್ಬರು ಆಟಗಾರರು ಕಳೆದ ಬಾರಿ ಚೆನ್ನೈ ಜೊತೆ ಇದ್ದರು.

ತಂಡವನ್ನು ಸೋಲಿನ ಪ್ರಪಾತದಿಂದ ಗೆಲುವಿನ ಶಿಖರಕ್ಕೆ ಏರಿಸಿದ ಕೊಯ್ಲೆ ಆರನೇ ಆವೃತ್ತಿ ಮುಗಿದ ನಂತರ ಜೆಮ್ಶೆಡ್‌ಪುರ ಎಫ್‌ಸಿ ಸೇರಿಕೊಂಡಿದ್ದರು. ಚೆನ್ನೈಯಿನ್ ಆಟಗಾರರ ಶೈಲಿಯನ್ನು ಚೆನ್ನಾಗಿ ಬಲ್ಲ ಕೊಯ್ಲೆ ಮಂಗಳವಾರ ಯಾವ ತಂತ್ರಗಳೊಂದಿಗೆ ಕಣಕ್ಕೆ ಇಳಿಯುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. ಇದೇ ವೇಳೆ ಚೆನ್ನೈಯಿನ್ ತಂಡದ ಹೊಸ ಕೋಚ್ ಹಂಗರಿ ದೇಶದ ಸಾಬಾ ಲಾಜಲೊ ಹೂಡುವ ಪ್ರತಿತಂತ್ರಗಳ ಬಗ್ಗೆಯೂ ಕುತೂಹಲ ಕೆರಳಿದೆ.‌

ADVERTISEMENT

ವಲ್‌ಸ್ಕಿಸ್‌ ಅವರ ಬರುವಿಕೆಯು ಜೆಮ್ಶೆಡ್‌ಪುರ ತಂಡದ ಫಾರ್ವರ್ಡ್ ವಿಭಾಗಕ್ಕೆ ಬಲ ತುಂಬಿದೆ. ಆದರೆ ರಕ್ಷಣಾ ವಿಭಾಗದ ದೌರ್ಬಲ್ಯದ ಮೇಲೆ ಹೆಚ್ಚು ಗಮನ ನೀಡಬೇಕಾದ ಅನಿ‌ವಾರ್ಯ ಸ್ಥಿತಿ ಇದೆ. ಕಳೆದ ಬಾರಿ ಅತಿ ಹೆಚ್ಚು ಗೋಲು ಬಿಟ್ಟುಕೊಟ್ಟ ತಂಡಗಳ ಪಟ್ಟಿಯಲ್ಲಿ ಜೆಮ್ಶೆಡ್‌ಪುರ ಎಫ್‌ಸಿ ಎರಡನೇ ಸ್ಥಾನದಲ್ಲಿತ್ತು. ಆ ತಂಡದ ವಿರುದ್ಧ ಎದುರಾಳಿಗಳು 35 ಗೋಲು ಗಳಿಸಿದ್ದರು‌. ಪೀಟರ್ ಹಾರ್ಟ್ಲಿ ಮತ್ತು ಸ್ಟೀಫನ್ ಎಜಿ ಅವರನ್ನು ಕರೆಸಿಕೊಂಡಿರುವ ತಂಡ ಯಶಸ್ಸು ಕಾಣುವುದೇ ಎಂಬುದನ್ನು ಕಾದುನೋಡಬೇಕು.

ಚೆನ್ನೈ ತಂಡದಲ್ಲಿ ವಿದೇಶಿ ಆಟಗಾರರ ಪೈಕಿ ಉಳಿದಿರುವ ಪ್ರಮುಖರೆಂದರೆ ನಾಯಕ ರಫೆಲ್ ಕ್ರಿವೆಲಾರೊ ಮತ್ತು ಡಿಫೆಂಡರ್ ಎಲಿ ಸಾಬಿಯಾ. ಹೊಸದಾಗಿ ತಂಡವನ್ನು ಸೇರಿಕೊಂಡಿರುವ ಸ್ಲೊವಾಕಿಯಾದ ಫಾರ್ವರ್ಡ್ ಆಟಗಾರ ಜಾಕುಬ್ ಸಿಲ್ವಸ್ಟರ್ ಮತ್ತು ಬೋಸ್ನಿಯಾದ ಡಿಫೆಂಡರ್ ಎನಿಸ್ ಸಿಪೊವಿಚ್, ಕಳೆದ ಬಾರಿ ತಂಡದಲ್ಲಿದ್ದ ಬ್ರೆಜಿಲ್‌ನ ಡಿಫೆಂಡರ್ ಮೆಮೊ ಮೌರಾ ಮೇಲೆ ನಿರೀಕ್ಷೆಯ ಭಾರವಿದೆ‌.

ಮಿಡ್‌ಫೀಲ್ಡ್‌ ವಿಭಾಗದಲ್ಲಿ ಚೆನ್ನೈಯಿನ್‌ಗೆ ಅನಿರುದ್ಧ ತಾಪಾ, ಎಡ್ವಿನ್ ವೌನ್ಸ್‌ಪಾಲ್, ಧನಪಾಲ್ ಗಣೇಶನ್ ಮತ್ತು ಥೊಯ್ ಸಿಂಗ್ ಆಸರೆ. ಜೆಮ್ಶೆಡ್‌ಪುರದ ಮಿಡ್‌ಫೀಲ್ಡ್‌ ವಿಭಾಗಕ್ಕೆ ಜಾಕಿಚಾಂದ್ ಸಿಂಗ್ ಬೆನ್ನೆಲುಬು ಆಗಿದ್ದು ಐಸಕ್ ವನ್‌ಮಲ್‌ಸೌಮಾ ಅವರ ಬಲವೂ ಇದೆ. ಡೇವಿಡ್ ಗ್ರ್ಯಾಂಡ್‌ ಅವರು ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಿದರೆ ಚೆನ್ನೈಯಿನ್ ತಂಡದ ಸಂಕಷ್ಟ ಹೆಚ್ಚಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.