ADVERTISEMENT

ಬಿಎಫ್‌ಸಿಗೆ ಕಿರೀಟ ತೊಡಿಸುವರೇ ಚೆಟ್ರಿ?

ಡುರಾಂಡ್‌ ಕಪ್‌ ಫುಟ್‌ಬಾಲ್‌ ಟೂರ್ನಿ ಫೈನಲ್‌: ಮುಂಬೈ ಎದುರಾಳಿ

ಪಿಟಿಐ
Published 17 ಸೆಪ್ಟೆಂಬರ್ 2022, 13:06 IST
Last Updated 17 ಸೆಪ್ಟೆಂಬರ್ 2022, 13:06 IST
ಸುನಿಲ್ ಚೆಟ್ರಿ ಮತ್ತು ರಾಯ್‌ಕೃಷ್ಣ
ಸುನಿಲ್ ಚೆಟ್ರಿ ಮತ್ತು ರಾಯ್‌ಕೃಷ್ಣ   

ಕೋಲ್ಕತ್ತ: ಬೆಂಗಳೂರು ಫುಟ್‌ಬಾಲ್ ಕ್ಲಬ್‌ಗೆ ಮೊದಲ ಬಾರಿ ಡುರಾಂಡ್‌ ಕಪ್‌ ಟ್ರೋಫಿ ಗೆದ್ದುಕೊಡುವ ಅದಮ್ಯ ಆಸೆಯಲ್ಲಿ ಸುನಿಲ್ ಚೆಟ್ರಿ ಇದ್ದಾರೆ. ಭಾನುವಾರ ಇಲ್ಲಿ ನಡೆಯುವ ಟೂರ್ನಿಯ ಫೈನಲ್‌ ಹಣಾಹಣಿಯಲ್ಲಿ ಅವರ ನಾಯಕತ್ವದ ಬಿಎಫ್‌ಸಿ, ಪ್ರಬಲ ಮುಂಬೈ ಸಿಟಿ ಎಫ್‌ಸಿ ಎದುರು ಕಣಕ್ಕಿಳಿಯಲಿದೆ.

38 ವರ್ಷದ ಚೆಟ್ರಿ ಅವರ ಟ್ರೋಫಿಗಳ ಗುಚ್ಛದಲ್ಲಿ ಡುರಾಂಡ್‌ ಕಪ್‌ ಮಾತ್ರ ಇಲ್ಲ. ಬಿಎಫ್‌ಸಿಯದ್ದೂ ಇದೇ ಸ್ಥಿತಿ. 2013ರಲ್ಲಿ ಅಸ್ಥಿತ್ವಕ್ಕೆ ಬಂದ ತಂಡಕ್ಕೆ ಪ್ರಮುಖ ಪ್ರಶಸ್ತಿಗಳೂ ದಕ್ಕಿದ್ದರೂ ಡುರಾಂಡ್‌ ಕಪ್ ಮಾತ್ರ ಗೆಲ್ಲಲಾಗಿಲ್ಲ ಎಂಬ ಕೊರಗು ಇದೆ.

2018–19ರ ಸಾಲಿನ ಇಂಡಿಯನ್ ಸೂಪರ್‌ ಲೀಗ್ ಚಾಂಪಿಯನ್ ಆಗಿರುವ ಬಿಎಫ್‌ಸಿ, ದೇಶಿ ಫುಟ್‌ಬಾಲ್‌ನ ಪ್ರಮುಖ ಆರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.

ADVERTISEMENT

‘ಇದು ಅತ್ಯಂತ ಹಳೆಯ ಟೂರ್ನಿಯಾಗಿದ್ದು, ಹೆಚ್ಚು ವಿಶೇಷ ಮತ್ತು ಮಹತ್ವದ್ದಾಗಿದೆ. ನಾವು ಸಾಧ್ಯವಾದಷ್ಟು ಶ್ರೇಷ್ಠ ಸಾಮರ್ಥ್ಯ ತೋರುತ್ತೇವೆ‘ ಎಂದು ಚೆಟ್ರಿ ಹೇಳಿದ್ದಾರೆ.

ಗುರುವಾರ ನಡೆದ ಸೆಮಿಫೈನಲ್‌ನಲ್ಲಿ ಎದುರಾಳಿ ಹೈದರಾಬಾದ್ ಎಫ್‌ಸಿಯ ಒಡೆಯ್‌ ಒನೈಂದಿಯಾ ನೀಡಿದ ‘ಉಡುಗೊರೆ‘ ಗೋಲಿನಿಂದ ಗೆದ್ದ ಬಿಎಫ್‌ಸಿ ಫೈನಲ್‌ಗೇರಿತ್ತು. ನಾಲ್ಕರ ಘಟ್ಟದ ಮತ್ತೊಂದು ‍ಪಂದ್ಯದಲ್ಲಿ ಮುಂಬೈ ತಂಡವು ಮೊಹಮ್ಮಡನ್ ಸ್ಪೋರ್ಟಿಂಗ್ ತಂಡವನ್ನು ಪರಾಭವಗೊಳಿಸಿತ್ತು.

ಚೆಟ್ರಿ, ಜೇವಿಯರ್ ಹೆರ್ನಾಂಡೆಜ್‌, ರಾಯ್‌ಕೃಷ್ಣ ಬೆಂಗಳೂರು ತಂಡದ ಶಕ್ತಿಯಾಗಿದ್ದಾರೆ. ಸೆನೆಗಲ್‌ ಡಿಫೆಂಡರ್‌ ಮೌರ್ಟದಾ ಫಾಲ್‌ ಅವರಿಂದ ಮುಂಬೈ ತಂಡದ ಬಲ ವೃದ್ಧಿಸಿದೆ. ಟೂರ್ನಿಯಲ್ಲಿ ಅತಿ ಹೆಚ್ಚು ಗೋಲು ಗಳಿಸಿರುವ ಲಲ್ಲಿಯಾಂಜುವಾಲ ಚಾಂಗ್ಟೆ (ಏಳು) ಕೂಡ ತಂಡಕ್ಕೆ ಗೆಲುವಿನ ಉಡುಗೊರೆ ನೀಡಲು ಸಜ್ಜಾಗಿದ್ದಾರೆ. ಹೀಗಾಗಿ ಉಭಯ ತಂಡಗಳ ಮಧ್ಯೆ ಜಿದ್ದಾಜಿದ್ದಿ ಪೈಪೋಟಿ ನಿರೀಕ್ಷಿಸಲಾಗಿದೆ.

ಫೈನಲ್ ಪಂದ್ಯದ ಬಳಿಕ ನಡೆಯುವ ಟೂರ್ನಿಯ ಸಮಾರೋಪ ಸಮಾರಂಭದಲ್ಲಿ ಬಾಂಗ್ರಾ ನೃತ್ಯ, ಕಳರಿಪಟ್ಟು ಪ್ರದರ್ಶನ ಮತ್ತು ದೇಶಭಕ್ತಿಗೀತೆಗಳು ಕಳೆಗಟ್ಟಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.