ಫುಟ್‌ಬಾಲ್
ನವದೆಹಲಿ: ದಿಗ್ಗಜ ಆಟಗಾರ ಸುನಿಲ್ ಚೆಟ್ರಿ ಮತ್ತು ಅವರ ಬಿಎಫ್‌ಸಿ ತಂಡದ ಇನ್ನಿಬ್ಬರು ಸಹ ಆಟಗಾರರಾದ ರಾಹುಲ್ ಭೆಕೆ ಮತ್ತು ರೋಶನ್ ಸಿಂಗ್ ನವೊರೆಮ್ ಅವರು ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ತಂಡದ ಸಿದ್ಧತಾ ಶಿಬಿರವನ್ನು ಸೋಮವಾರ ಸೇರಿಕೊಂಡರು.
ಮುಂಬರುವ ಎಎಫ್‌ಸಿ ಏಷ್ಯನ್ ಕಪ್ ಕ್ವಾಲಿಫೈಯರ್ಸ್‌ನಲ್ಲಿ ಸಿಂಗಪುರ ವಿರುದ್ಧ ಪಂದ್ಯಗಳಿಗೆ ಸಜ್ಜಾಗಲು ಈ ಶಿಬಿರ ನಡೆಯುತ್ತಿದೆ.
ಈ ಮೂವರ ಸೇರ್ಪಡೆಯಿಂದ ಶಿಬಿರದಲ್ಲಿ ಭಾಗವಹಿಸಿರುವ ಆಟಗಾರರ ಸಂಖ್ಯೆ 28ಕ್ಕೆ ಏರಿದೆ. ಹೆಡ್ ಕೋಚ್ ಖಾಲಿದ್ ಜಮಿಲ್ ಅವರು 30 ಮಂದಿ ಸಂಭವನೀಯ ಆಟಗಾರರನ್ನು ಆಯ್ಕೆ ಮಾಡಿದ್ದರು. ಸಿಂಗಪುರ ವಿರುದ್ಧ ಭಾರತವು ಅ. 9ರಂದು (ತವರಿನಿಂದಾಚೆ) ಮತ್ತು ಅ. 14ರಂದು (ತವರಿನಲ್ಲಿ) ಪಂದ್ಯಗಳನ್ನು ಆಡಲಿದೆ.
ಸೆ. 20ರಂದು ಶಿಬಿರ ಆರಂಭವಾದಾಗ ಬರೇ 18 ಮಂದಿ ಭಾಗವಹಿಸಿದ್ದರು. ಚೆಟ್ರಿ ಸೇರಿದಂತೆ 14 ಮಂದಿಯನ್ನು ಆಯಾ ಆಟಗಾರರ ಕ್ಲಬ್‌ಗಳು ನಿಟ್ಟುಕೊಟ್ಟಿರಲಿಲ್ಲ.
‘ಸುನಿಲ್ ಚೆಟ್ರಿ, ರಾಹುಲ್ ಭೆಕೆ ಮತ್ತು ರೋಷನ್ ಸಿಂಗ್ ನವೊರೆಮ್ ಅವರು ಇಂದು ರಾಷ್ಟ್ರೀಯು ಶಿಬಿರ ಸೇರಿಕೊಂಡಿದ್ದಾರೆ’ ಎಂದು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ ಎಕ್ಸ್‌ನಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.