ADVERTISEMENT

ಚೆಟ್ರಿ–ಕೃಷ್ಣ ಮೋಡಿ; ಬಿಎಫ್‌ಸಿ ಜಯಭೇರಿ

ಡುರಾಂಡ್‌ ಕಪ್‌ ಫುಟ್‌ಬಾಲ್ ಟೂರ್ನಿ: ಜಮ್ಶೆಡ್‌ಪುರ ತಂಡಕ್ಕೆ ಸೋಲು

ಪಿಟಿಐ
Published 17 ಆಗಸ್ಟ್ 2022, 12:59 IST
Last Updated 17 ಆಗಸ್ಟ್ 2022, 12:59 IST
ರಾಯ್ ಕೃಷ್ಣ– ಸುನಿಲ್ ಚೆಟ್ರಿ ಸಂಭ್ರಮ– ಬಿಎಫ್‌ಸಿ ಟ್ವಿಟರ್‌ ಚಿತ್ರ
ರಾಯ್ ಕೃಷ್ಣ– ಸುನಿಲ್ ಚೆಟ್ರಿ ಸಂಭ್ರಮ– ಬಿಎಫ್‌ಸಿ ಟ್ವಿಟರ್‌ ಚಿತ್ರ   

ಕೋಲ್ಕತ್ತ: ನಾಯಕ ಸುನಿಲ್ ಚೆಟ್ರಿ ಹಾಗೂ ರಾಯ್ ಕೃಷ್ಣ ಜೋಡಿ ಮೋಡಿ ಮಾಡಿತು. ಇವರಿಬ್ಬರ ಸೊಗಸಾದ ಆಟದ ಬಲದಿಂದ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡವು ಡುರಾಂಡ್‌ ಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ಬುಧವಾರ ಇಲ್ಲಿ ನಡೆದ ಪಂದ್ಯದಲ್ಲಿ 2–1ರಿಂದ ಜಮ್ಶೆಡ್‌ಪುರ ಎಫ್‌ಸಿ ತಂಡಕ್ಕೆ ಸೋಲುಣಿಸಿತು.

ಹೊಸ ಆಟಗಾರರೊಂದಿಗೆ ಕಣಕ್ಕಿಳಿದ ಬಿಎಫ್‌ಸಿಗೆ ಸುನಿಲ್‌ 23ನೇ ನಿಮಿಷದಲ್ಲೇ ಗೋಲು ಗಳಿಸಿ ಮುನ್ನಡೆ ತಂದುಕೊಟ್ಟರು. ಪ್ರಬೀರ್ ದಾಸ್‌ ಅವರು ನೀಡಿದ ಪಾಸ್‌ನಲ್ಲಿ ನಾಯಕ ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಿದರು

ADVERTISEMENT

ರಾಯ್‌ ಕೃಷ್ಣ, 56ನೇ ನಿಮಿಷದಲ್ಲಿ ಕಾಲ್ಚಳಕ ತೋರಿದರು. ಪಂದ್ಯದ ಆರಂಭದಲ್ಲಿ ಬೆಂಚ್‌ನಲ್ಲಿದ್ದ ಫಿಜಿ ರಾಷ್ಟ್ರೀಯ ತಂಡದ ಆಟಗಾರ, ಕಣಕ್ಕಿಳಿದ 11ನೇ ನಿಮಿಷದಲ್ಲೇ ಗೋಲು ಹೊಡೆದು ಸಂಭ್ರಮಿಸಿದರು. ಚೆಟ್ರಿ ನೀಡಿದ ಬೆಂಬಲದೊಂದಿಗೆ ಚೆಂಡನ್ನು ಗುರಿ ಸೇರಿಸಿದರು.

59ನೇ ನಿಮಿಷದಲ್ಲಿ ಬಿಎಫ್‌ಸಿಯ ಹೀರಾ ಮಂಡಲ್‌ ಹಳದಿ ಕಾರ್ಡ್‌ ಪಡೆದರು. ಹೀಗಾಗಿ ತಂಡವು 10 ಆಟಗಾರರೊಂದಿಗೆ ಆಡಬೇಕಾಯಿತು. ಇದರ ಲಾಭ ಪಡೆದ ಜಮ್ಶೆಡ್‌ಪುರ ತಂಡದ ರಿಷಿ, 61ನೇ ನಿಮಿಷದಲ್ಲಿ ಫ್ರೀಕಿಕ್‌ನಲ್ಲಿ ಗೋಲು ಗಳಿಸಿ ಹಿನ್ನಡೆಯನ್ನು 1–2ಕ್ಕೆ ತಗ್ಗಿಸಿದರು.

ಈ ಗೋಲಿನೊಂದಿಗೆ ಜಮ್ಶೆಡ್‌ಪುರ ತಂಡವು ಎದುರಾಳಿಯ ಒತ್ತಡವನ್ನು ಹೆಚ್ಚಿಸಿತು. ಆದರೆ ಡಿಫೆನ್ಸ್‌ನಲ್ಲೂ ಉತ್ತಮ ಸಾಮರ್ಥ್ಯ ತೋರಿದ ಬಿಎಫ್‌ಸಿ ಆಟಗಾರರು ಜಮ್ಶೆಡ್‌ಪುರ ಆಟಗಾರರ ಅವಕಾಶಗಳನ್ನು ಹಾಳುಗೆಡವಿದರು. ಇದರ ಹೆಚ್ಚಿನ ಶ್ರೇಯ ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ಅವರಿಗೆ ಸಲ್ಲಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.