ADVERTISEMENT

ಲಯ ಕಂಡುಕೊಂಡ ರೊನಾಲ್ಡೊ: ಯುವೆಂಟಸ್‌ ಜಯಭೇರಿ

ಏಜೆನ್ಸೀಸ್
Published 27 ಜೂನ್ 2020, 5:28 IST
Last Updated 27 ಜೂನ್ 2020, 5:28 IST
ಪಂದ್ಯದಲ್ಲಿ ಓವರ್‌ಹೆಡ್‌ ಕಿಕ್‌ ಮಾಡಿದ ಕ್ರಿಸ್ಟಿಯಾನೊ ರೊನಾಲ್ಡೊ (ಎಡ)–ರಾಯಿಟರ್ಸ್‌ ಚಿತ್ರ
ಪಂದ್ಯದಲ್ಲಿ ಓವರ್‌ಹೆಡ್‌ ಕಿಕ್‌ ಮಾಡಿದ ಕ್ರಿಸ್ಟಿಯಾನೊ ರೊನಾಲ್ಡೊ (ಎಡ)–ರಾಯಿಟರ್ಸ್‌ ಚಿತ್ರ   

ರೋಮ್‌: ಲಯಕ್ಕೆ ಮರಳಿದ ಕ್ರಿಸ್ಟಿಯಾನೊ ರೊನಾಲ್ಡೊ ಯುವೆಂಟಸ್‌ ತಂಡದ ಭರ್ಜರಿ ಗೆಲುವಿಗೆ ಕಾರಣರಾದರು. ಪೆನಾಲ್ಟಿ ಅವಕಾಶದಲ್ಲಿ ಒಂದು ಗೋಲು ದಾಖಲಿಸಿ, ಎರಡು ಗೋಲು ಗಳಿಸುವಲ್ಲಿ ನೆರವು ನೀಡಿದ ಅವರು ತಮ್ಮ ತಂಡ 4–0ಯಿಂದ ಲೆಚ್ಚೆ ತಂಡವನ್ನು ಮಣಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದರೊಂದಿಗೆ ಸತತ ಒಂಬತ್ತನೇ ಬಾರಿ ಯುವೆಂಟಸ್‌ ತಂಡ ಸೀರಿ ‘ಎ’ ಫುಟ್‌ಬಾಲ್‌ ಟ್ರೋಫಿ ಗೆಲುವಿನತ್ತ ದಾಪುಗಾಲಿಟ್ಟಿದೆ.

ಇಟಲಿಯಲ್ಲಿ ಫುಟ್‌ಬಾಲ್‌ ಪುನರಾರಂಭವಾದಾಗಿನಿಂದ ರೊನಾಲ್ಡೊ ಲಯ ಕಂಡುಕೊಳ್ಳಲು ಪರದಾಟ ನಡೆಸಿದ್ದರು. ಈ ಗೆಲುವಿನೊಂದಿಗೆ ಅಗ್ರಸ್ಥಾನಕ್ಕೇರಿದ ಯುವೆಂಟಸ್‌ ತಂಡ, ಎರಡನೇ ಸ್ಥಾನದಲ್ಲಿರುವ ಲಾಜಿಯೊ ತಂಡಕ್ಕಿಂತ ಏಳು ಪಾಯಿಂಟ್ಸ್‌ ಮುಂದಿದೆ.

ಲೆಚ್ಚೆ ತಂಡ ಪಂದ್ಯದ ಮೊದಲಾರ್ಧದಲ್ಲೇ ಉತ್ತಮ ಆಟವಾಡಲು ಪ್ರಾರಂಭಿಸಿತು. ಆದರೆ ಅನುಚಿತ ವರ್ತನೆ ತೋರಿದ ಆ ತಂಡದ ಡಿಫೆಂಡರ್‌ ಫ್ಯಾಬಿಯೊ ಲೂಸಿಯಾನಿ ರೆಡ್‌ ಕಾರ್ಡ್‌ ಪಡೆದು ಹೊರನಡೆದರು. ಇದರಿಂದ ಒಂದು ತಾಸಿಗೂ ಹೆಚ್ಚು ಕಾಲ ಆ ತಂಡ 10 ಆಟಗಾರರೊಂದಿಗೆ ಆಡಬೇಕಾಯಿತು.

ADVERTISEMENT

ಯುವೆಂಟಸ್‌ ಪರ ಪಾಲ್‌ ಡಿಬಾಲ (53ನೇ ನಿಮಿಷ) ಗೋಲಿನ ಖಾತೆ ತೆರೆದರು. ರೊನಾಲ್ಡೊ ನೀಡಿದ ಪಾಸ್‌ನಲ್ಲಿ ಈ ಗೋಲು ಸಾಧ್ಯವಾಯಿತು. 62ನೇ ನಿಮಿಷದಲ್ಲಿ ಪೆನಾಲ್ಟಿ ಅವಕಾಶವನ್ನು ಗೋಲಾಗಿಸಿದ ರೊನಾಲ್ಡೊ ತಂಡದ ಗೆಲುವಿನ ಅವಕಾಶ ಹೆಚ್ಚಿಸಿದರು.

83ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಕೆಗೆ ರೊನಾಲ್ಡೊ ನೆರವು ನೀಡಿದರು. ಅವರು ಹಿಂಗಾಲಿನಿಂದ ನೀಡಿದ ಪಾಸ್‌ನಲ್ಲಿ ಗೊಂಜಾಲೊ ಹಿಗ್ವಿನ್‌ ಚೆಂಡನ್ನು ಗೋಲು ಪೆಟ್ಟಿಗೆ ಸೇರಿಸಿದರು. ಇದಾದ ಎರಡು ನಿಮಿಷಗಳ ಬಳಿಕ ಡಗ್ಲಾಸ್‌ ಕೋಸ್ಟಾ ನಾಲ್ಕನೇ ಗೋಲು ದಾಖಲಿಸಿ ಯುವೆಂಟಸ್‌ ತಂಡದಲ್ಲಿ ಸಂಭ್ರಮದ ಅಲೆ ಚಿಮ್ಮುವಂತೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.