ಫುಟ್‌ಬಾಲ್
ಜಮ್‌ಶೆಡ್‌ಪುರ:ಡ್ಯುರಾಂಡ್ ಕಪ್ ಟೂರ್ನಿಯಲ್ಲಿ್ ಪದಾರ್ಪಣೆ ಮಾಡಿರುವ ಡೈಮಂಡ್ ಹಾರ್ಬರ್ ಎಫ್‌ಸಿ ತಂಡ ಭಾನುವಾರ ಅನಿರೀಕ್ಷಿತ ಫಲಿತಾಂಶವೊಂದರಲ್ಲಿ ಐಎಸ್‌ಎಲ್ ತಂಡವಾದ ಜಮ್‌ಶೆಡ್‌ಪುರ ಎಫ್‌ಸಿ ತಂಡಕ್ಕೆ ಸೋಲುಣಿಸಿತು. 2–0 ಗೋಲುಗಳಿಂದ ಗೆದ್ದ ಡೈಮಂಡ್ ಹಾರ್ಬರ್ ತಂಡ ಸೆಮಿಫೈನಲ್ ತಲುಪಿತು.
ಡೈಮಂಡ್ ಹಾರ್ಬರ್ ತಂಡ ಇದೇ 20ರಂದು ನಡೆಯಲಿರುವ ಸೆಮಿಫೈನಲ್‌ನಲ್ಲಿ ಕೋಲ್ಕತ್ತದ ಇನ್ನೊಂದು ತಂಡವಾದ ಈಸ್ಟ್ ಬೆಂಗಾಲ್ ವಿರುದ್ಧ ಆಡಲಿದೆ. ‘ಕೋಲ್ಕತ್ತ ಡರ್ಬಿ’ಯಾದ ದಿನದ ಎರಡನೇ ಕ್ವಾರ್ಟರ್‌ಫೈನಲ್‌ನಲ್ಲಿ ಇಮಾಮಿ ಈಸ್ಟ್ ಬೆಂಗಾಲ್ ತಂಡ 2–1 ಗೋಲುಗಳಿಂದ ಬದ್ಧ ಎದುರಾಳಿ ಮೋಹನ್ ಬಾಗನ್ ತಂಡವನ್ನು ಮಣಿಸಿತು.
ಜೆಆರ್‌ಡಿ ಟಾಟಾ ಕಾಂಪ್ಲೆಕ್ಸ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಕ್ವಾರ್ಟರ್‌ಫೈನಲ್‌ನಲ್ಲಿ ಡಿಫೆಂಡರ್ ಸಾಯಿರುವತ್ಕಿಮಾ ಅವರು ಡೈಮಂಡ್ ಹಾರ್ಬರ್ ತಂಡದ ಪರ ಮಿಂಚಿದರು. ಎರಡೂ ಗೋಲುಗಳನ್ನು ಅವರು ಮೊದಲಾರ್ಧದಲ್ಲಿ (3 ಮತ್ತು 41ನೇ ನಿಮಿಷ) ಗಳಿಸಿದರು. ಆ ಮೂಲಕ ಐಲೀಗ್ ತಂಡ ಮೊದಲ ಯತ್ನದಲ್ಲೇ ನಾಲ್ಕರ ಘಟ್ಟ ತಲುಪಿತು.
ವಿರಾಮದ ನಂತರ ಜಮ್‌ಶೆಡ್‌ಪುರ ಹೆಚ್ಚಿನ ಅವಧಿಯಲ್ಲಿ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿತು. ಆದರೆ ಗೋಲ್‌ಕೀಪರ್ ಮಿರ್ಶಾದ್ ಕೂಟ್ಟಪುನ್ನ ನೇತೃತ್ವದ ಡೈಮಂಡ್ ಹಾರ್ಬರ್ ತಂಡದ ‘ಬ್ಯಾಕ್ ಲೈನ್’ ರಕ್ಷಣೆ ಆತಿಥೇಯ ತಂಡವನ್ನು ಹತಾಶಗೊಳಿಸಿತು.
ಈಸ್ಟ್ ಬೆಂಗಾಲ್‌ಗೆ ಜಯ:
ಕೋಲ್ಕತ್ತದ ವಿವೇಕಾನಂದ ಯುವಭಾರತಿ ಕ್ರೀಡಾಂಗಣದಲ್ಲಿ ನಡೆದ ದಿನದ ಎರಡನೇ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಈಸ್ಟ್ ಬೆಂಗಾಲ್ ತೀವ್ರ ಹೋರಾಟದ ಬಳಿಕ ಮೋಹನ್ ಬಾಗನ್ ತಂಡಕ್ಕೆ ಆಘಾತ ನೀಡಿತು.
ಸಬ್‌ಸ್ಟಿಟ್ಯೂಟ್ ಆಗಿದ್ದ ಗ್ರೀಕ್ ಆಟಗಾರ ಡಿಮಿಟ್ರಿಯೋಸ್ ಡಯಾಮಂಟಕೊ ಅವರು ಎರಡೂ ಗೋಲುಗಳನ್ನು ಗಳಿಸಿದರು.
ಮೊದಲು 38ನೇ ನಿಮಿಷ ‘ಪೆನಾಲ್ಟಿ’ ಮೂಲಕ ಅವರು ಈಸ್ಟ್ ಬೆಂಗಾಲ್‌ಗೆ ಮುನ್ನಡೆ ಒದಗಿಸಿದರು. ವಿರಾಮ ಕಳೆದ ಏಳು ನಿಮಿಷಗಳ ನಂತರ 32 ವರ್ಷ ವಯಸ್ಸಿನ ಡಿಮಿಟ್ರಿಯೋಸ್ ಅಮೋಘ ರೀತಿಯಲ್ಲಿ ಗೋಲು ಗಳಿಸುವ ಮೂಲಕ ಐಎಸ್‌ಎಲ್ ಚಾಂಪಿಯನ್ ತಂಡಕ್ಕೆ ಆಘಾತ ನೀಡಿದರು.
ಬಾಗನ್ ತಂಡ 68ನೇ ನಿಮಿಷ ಅನಿರುದ್ಧ ಥಾಪಾ ಗಳಿಸಿದ ಗೋಲಿನಿಂದ ಸೋಲಿನ ಅಂತರ ಕಡಿಮೆ ಮಾಡಿತು.
ಇದು 18 ತಿಂಗಳಲ್ಲಿ ಬಾಗನ್ ವಿರುದ್ಧ ಈಸ್ಟ್ ಬೆಂಗಾಲ್ ಗಳಿಸಿದ ಮೊದಲ ಜಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.