ಶಿಲ್ಲಾಂಗ್: ಹಾಲಿ ಚಾಂಪಿಯನ್ ನಾರ್ತ್‌ಈಸ್ಟ್ ಯುನೈಟೆಡ್ ಎಫ್‌ಸಿ ತಂಡವು 134ನೇ ಆವೃತ್ತಿಯ ಡುರಾಂಡ್ ಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಸತತ ಎರಡನೇ ಬಾರಿ ಫೈನಲ್‌ಗೆ ಲಗ್ಗೆ ಹಾಕಿತು.
ಇಲ್ಲಿನ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಮೊದಲ ಸೆಮಿಫೈನಲ್‌ನಲ್ಲಿ ನಾರ್ತ್‌ಈಸ್ಟ್ ತಂಡವು 1–0 ಗೋಲಿನಿಂದ ಆತಿಥೇಯ ಶಿಲ್ಲಾಂಗ್ ಲಾಜೊಂಗ್ ಎಫ್‌ಸಿ ತಂಡವನ್ನು ಸೋಲಿಸಿತು. ಕಳೆದ ಆವೃತ್ತಿದಲ್ಲೂ ನಾರ್ತ್‌ಈಸ್ಟ್ ತಂಡವು ಇದೇ ತಂಡವನ್ನು 3–0ಯಿಂದ ಮಣಿಸಿ ಪ್ರಶಸ್ತಿ ಸುತ್ತು ಪ್ರವೇಶಿಸಿತ್ತು.
ಪಂದ್ಯದ 36ನೇ ನಿಮಿಷದಲ್ಲಿ ರೆಡೀಮ್ ಟ್ಲಾಂಗ್ ಅವರು ನಾರ್ತ್‌ಈಸ್ಟ್ ಪರ ಗೆಲುವಿನ ಗೋಲು ದಾಖಲಿಸಿದರು.
ಈಸ್ಟ್ ಬೆಂಗಾಲ್‌ಗೆ ಡೈಮಂಡ್ ಸವಾಲು: 16 ಬಾರಿಯ ಚಾಂಪಿಯನ್ ಈಸ್ಟ್ ಬೆಂಗಾಲ್ ತಂಡವು ಬುಧವಾರ ಎರಡನೇ ಸೆಮಿಫೈನಲ್‌ನಲ್ಲಿ ಡೈಮಂಡ್ ಹಾರ್ಬರ್ ಎಫ್‌ಸಿ ತಂಡವನ್ನು ಎದುರಿಸಲಿದೆ.
ಕೋಲ್ಕತ್ತದ ವಿವೇಕಾನಂದ ಯುವ ಭಾರತಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ವಿಜೇತ ತಂಡವು ಶನಿವಾರ (ಆ.23) ಇದೇ ತಾಣದಲ್ಲಿ ನಡೆಯುವ ಫೈನಲ್‌ನಲ್ಲಿ ನಾರ್ತ್‌ಈಸ್ಟ್ ತಂಡವನ್ನು ಎದುರಿಸಲಿದೆ.
ಈಸ್ಟ್ ಬೆಂಗಾಲ್ ತಂಡವು ಕ್ವಾರ್ಟರ್ ಫೈನಲ್‌ನಲ್ಲಿ 2–1ರಿಂದ 17 ಬಾರಿಯ ಚಾಂಪಿಯನ್ ಮೋಹನ್ ಬಾಗನ್ ಸೂಪರ್ ಜೈಂಟ್ಸ್ ತಂಡವನ್ನು ಮಣಿಸಿತ್ತು.
ಡುರಾಂಡ್ ಕಪ್‌ನಲ್ಲಿ ಚೊಚ್ಚಲವಾಗಿ ಸ್ಪರ್ಧಿಸುತ್ತಿರುವ ಡೈಮಂಡ್ ತಂಡವು 2–0ಯಿಂದ ಜೆಮ್ಯೆಡ್‌ಪುರ ಎಫ್‌ಸಿ ತಂಡಕ್ಕೆ ಆಘಾತ ನೀಡಿ ಸೆಮಿಫೈನಲ್ ಪ್ರವೇಶಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.