ADVERTISEMENT

ಯುರೊ ಕಪ್‌ ಫೈನಲ್: ಪ‍್ರಶಸ್ತಿಗಾಗಿ ಸ್ಪೇನ್‌ – ಇಂಗ್ಲೆಂಡ್ ಹಣಾಹಣಿ

​ಪ್ರಜಾವಾಣಿ ವಾರ್ತೆ
Published 13 ಜುಲೈ 2024, 23:30 IST
Last Updated 13 ಜುಲೈ 2024, 23:30 IST
<div class="paragraphs"><p>ಫುಟ್‌ಬಾಲ್</p></div>

ಫುಟ್‌ಬಾಲ್

   

ಬರ್ಲಿನ್: ಸ್ಪೇನ್ ಮತ್ತು ಜರ್ಮನಿ ತಂಡಗಳು ಯುರೋಪಿಯನ್‌ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ಭಾನುವಾರ ಮುಖಾಮುಖಿ ಆಗಲಿವೆ. ಒಂದೆಡೆ, ಸ್ಪೇನ್‌ ತಂಡ ದಾಖಲೆ ನಾಲ್ಕನೇ ಬಾರಿ ಟ್ರೋಫಿ ಗೆಲ್ಲಲು ಪ್ರಯತ್ನ ನಡೆಸುತ್ತಿದ್ದರೆ, ಇನ್ನೊಂದೆಡೆ ಇಂಗ್ಲೆಂಡ್‌ 1966ರ ವಿಶ್ವಕಪ್‌ ಗೆದ್ದ ನಂತರ ಪುರುಷರ ವಿಭಾಗದ ಮೊದಲ ಪ್ರಮುಖ ಪ್ರಶಸ್ತಿ ಗೆಲ್ಲಲು ತುದಿಗಾಲಲ್ಲಿ ನಿಂತಿದೆ.

ಸ್ಪೇನ್‌ ಆಡಿರುವ ಆರೂ ಪಂದ್ಯಗಳಲ್ಲಿ ಜಯಗಳಿಸಿದ್ದು ಫೈನಲ್‌ನಲ್ಲೂ ಗೆಲ್ಲುವ ನೆಚ್ಚಿನ ತಂಡವೆನಿಸಿದೆ. ಟೂರ್ನಿಯ ಶ್ರೇಷ್ಠ ತಂಡವೆಂಬ ಪರಿಗಣನೆ ಹೊಂದಿದೆ. ಸ್ಪೇನ್‌ನ ಲಮಿನ್ ಯಮಾಲ್ ಟೂರ್ನಿಯ ನವತಾರೆಯಾಗಿ ಹೊಮ್ಮಿದ್ದಾರೆ. ಮೂರು ಗೋಲುಗಳಿಗೆ ನೆರವು ಕಲ್ಪಿಸಿದ 17 ವರ್ಷದ ಯಮಾಲ್ ಸೆಮಿಫೈನಲ್‌ನಲ್ಲಿ 40 ಗಜ ದೂರದಿಂದ ಗೋಲು ಗಳಿಸಿದ್ದರು. 2018ರ ವಿಶ್ವಕಪ್‌ನಲ್ಲಿ ಕೀಲಿಯನ್‌ ಎಂಬಾಪೆ ಮತ್ತು 1958ರ ವಿಶ್ವಕಪ್‌ನಲ್ಲಿ ಪೆಲೆ ಆಟ ನೆನಪಿಸುವಂತಿತ್ತು.

ADVERTISEMENT

1964 ಮತ್ತು 2008ರಲ್ಲಿ ಚಾಂಪಿಯನ್ ಆಗಿದ್ದ ಸ್ಪೇನ್‌ ಕೊನೆಯ ಬಾರಿ ಯುರೊ ಕೂಟ ಗೆದ್ದಿದ್ದು 2012ರಲ್ಲಿ. ಆ ಬಾರಿ ಇಟಲಿ ಮೇಲೆ ಜಯಗಳಿಸಿ ಮೂರನೇ ಬಾರಿ ಚಾಂಪಿಯನ್ ಆಗಿತ್ತು. ಇಂಗ್ಲೆಂಡ್‌ 2021ರಲ್ಲಿ (2020ರಲ್ಲಿ ನಿಗದಿಯಾಗಿತ್ತು) ನಡೆದ ಯುರೊ ಫೈನಲ್ ತಲುಪಿತ್ತು. ಆದರೆ ಶೂಟೌಟ್‌ನಲ್ಲಿ ಇಟಲಿಗೆ ಮಣಿಯಬೇಕಾಯಿತು.

ಈ ಬಾರಿಯು ಯುರೊ ಕೂಟದಲ್ಲಿ ಇಂಗ್ಲೆಂಡ್‌ ಅಮೋಘ ರೀತಿಯಲ್ಲಿ ಚೇತರಿಕೆಯ ಆಟವಾಡಿದೆ. ನಾಕೌಟ್‌ನ ಎಲ್ಲ ಮೂರೂ ಪಂದ್ಯಗಳಲ್ಲಿ ಹಿನ್ನಡೆಯಿಂದ ಚೇತರಿಸಿ ಜಯಗಳಿಸಿದೆ.

ಗರೆತ್‌ ಸೌತ್‌ಗೇಟ್‌ ಅವರು ತಂಡದ ನಿರ್ವಹಣೆ ವಿಷಯದಲ್ಲಿ ಟೀಕೆಗಳನ್ನೆದುರಿಸಿದರೂ, ಅವರು ತಂಡದೊಳಗಿನ ಶಿಸ್ತು ಮೂಡಿಸಿದ್ದಾರೆ. 2016ರಲ್ಲಿ ಕೋಚ್‌ ಆದ ನಂತರ ಇಂಗ್ಲೆಂಡ್‌ 2018ರ ವಿಶ್ವಕಪ್‌ ಸೆಮಿಫೈನಲ್ ತಲುಪಿತ್ತು. ಈಗ ಯುರೋಪಿಯನ್ ಚಾಂಪಿಯನ್‌ಷಿಪ್‌ನಲ್ಲಿ ಸತತ ಎರಡು ಬಾರಿ ಫೈನಲ್ ತಲುಪಿದೆ.‌

ಸ್ಪೇನ್‌ ನಾಯಕ ಅಲ್ವಾರೊ ಮೊರಾಟ ಆಡುವುದು ಖಚಿತವಾಗಿದೆ. ಸೆಮಿಫೈನಲ್ ಪಂದ್ಯದ ನಂತರ ಅವರು ಸಂಭ್ರಮಾಚರಣೆ ವೇಳೆ ಬಿದ್ದಿದ್ದರು. ದಾನಿ ಕರ್ವಜಾಲ್ ಅಮಾನತು ಶಿಕ್ಷೆ ಪೂರೈಸಿ ತಂಡಕ್ಕೆ ಮರಳುತ್ತಿರುವುದು ತಂಡದ ಪಾಲಿಗೆ ಹಿತಕರ ಸುದ್ದಿ.

ಇಂಗ್ಲೆಂಡ್ ಪರ ನಾಯಕ ಹ್ಯಾರಿ ಕೇನ್ ಮೂರು ಗೋಲುಗಳನ್ನು ಗಳಿಸಿದ್ದಾರೆ. ಸ್ಪೇನ್‌ನ ದಾನಿ ಒಲ್ಮೊ ಸಹ ಮೂರು ಗೋಲು ಗಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.