ADVERTISEMENT

ISL | ಬಿಎಫ್‌ಸಿಗೆ ನಾರ್ತ್‌ಈಸ್ಟ್‌ ಸವಾಲು

ಇಂಡಿಯನ್‌ ಸೂಪರ್‌ ಲೀಗ್‌

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2025, 16:19 IST
Last Updated 20 ಫೆಬ್ರುವರಿ 2025, 16:19 IST
ಬೆಂಗಳೂರು ತಂಡದ ನಾಯಕ ಸುನಿಲ್‌ ಚೆಟ್ರಿ
ಬೆಂಗಳೂರು ತಂಡದ ನಾಯಕ ಸುನಿಲ್‌ ಚೆಟ್ರಿ   

ಶಿಲ್ಲಾಂಗ್: ಬೆಂಗಳೂರು ಎಫ್‌ಸಿ ತಂಡವು ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಟೂರ್ನಿಯ ಪಂದ್ಯದಲ್ಲಿ ಶುಕ್ರವಾರ ನಾರ್ತ್ಈಸ್ಟ್‌ ಯುನೈಟೆಡ್‌ ಎಫ್‌ಸಿ ತಂಡದ ಸವಾಲನ್ನು ಎದುರಿಸಲಿದೆ.

ಕೊನೆಯ ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಸೋತು, ಒಂದು ಪಂದ್ಯ ಗೆದ್ದಿರುವ ಬೆಂಗಳೂರು ತಂಡವು ಗೆಲುವಿನ ಲಯಕ್ಕೆ ಮರಳುವ ಛಲದಲ್ಲಿದೆ. ಹ್ಯಾಟ್ರಿಕ್‌ ಸೋಲಿನ ನಂತರ ತವರಿನಲ್ಲಿ ನಡೆದ ಪಂದ್ಯದಲ್ಲಿ ಜೆಮ್‌ಶೆಡ್‌ಪುರ ವಿರುದ್ಧ 3–0ಯಿಂದ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.

ಪ್ರಸಕ್ತ ಋತುವಿನ ಪಂದ್ಯಗಳಲ್ಲಿ ಒಟ್ಟು 36 ಬಾರಿ ಚೆಂಡನ್ನು ಗುರಿ ಸೇರಿಸಿರುವ ಸುನಿಲ್‌ ಚೆಟ್ರಿ ಬಳಗವು, ಗೋಲು ಗಳಿಕೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಈ ಪೈಕಿ 11 ಗೋಲುಗಳು ಚೆಟ್ರಿ ಕಾಲ್ಚಳಕದಿಂದ ಬಂದಿದ್ದು, ಇದು ಐಎಸ್‌ಎಲ್‌ ಇತಿಹಾಸದಲ್ಲೇ ಎರಡನೇ ಗರಿಷ್ಠ ಸ್ಕೋರ್‌ ಆಗಿದೆ.

ADVERTISEMENT

ಕಳೆದ ಐದು ಮುಖಾಮುಖಿಯಲ್ಲಿ ನಾರ್ತ್‌ಈಸ್ಟ್ ಯುನೈಟೆಡ್ ತಂಡವು ಬೆಂಗಳೂರು ಎಫ್‌ಸಿ ವಿರುದ್ಧ ಗೆಲುವು ಸಾಧಿಸಿಲ್ಲ. ಉಭಯ ತಂಡಗಳು ಸತತವಾಗಿ ಮೂರು ಪಂದ್ಯಗಳನ್ನು ಡ್ರಾ ಮಾಡಿಕೊಂಡಿವೆ.

20 ಪಂದ್ಯಗಳನ್ನು ಆಡಿರುವ ಬೆಂಗಳೂರು ತಂಡವು ಆರು ಪಂದ್ಯಗಳಲ್ಲಿ ಗೆದ್ದು, ನಾಲ್ಕರಲ್ಲಿ ಡ್ರಾ ಸಾಧಿಸಿದೆ. ಉಳಿದ ಏಳರಲ್ಲಿ ಸೋತು ಒಟ್ಟು 31 ಪಾಯಿಂಟ್ಸ್‌ ಗಳಿಸಿದೆ. 

ನಾರ್ತ್‌ಈಸ್ಟ್‌ ತಂಡವು 21 ಪಂದ್ಯಗಳಿಂದ 32 ಅಂಕಗಳನ್ನು ಸಂಪಾದಿಸಿದೆ. ಎಂಟರಲ್ಲಿ ಗೆಲುವು ಸಾಧಿಸಿದ್ದರೆ, ಅಷ್ಟೇ ಪಂದ್ಯಗಳಲ್ಲಿ ಡ್ರಾ ಸಾಧಿಸಿ, ಐದರಲ್ಲಿ ಸೋಲು ಕಂಡಿದೆ.

ಮುಂಬೈ ಸಿಟಿ ಎಫ್‌ಸಿ ವಿರುದ್ಧ ಇಲ್ಲಿ ಕೊನೆಯ ಬಾರಿ 2–0 ಗೋಲುಗಳಿಂದ ಸೋತಿರುವ ನಾರ್ತ್‌ಈಸ್ಟ್‌ ತಂಡವು ತವರಿನಲ್ಲಿ ಗೆಲುವನ್ನು ಎದುರು ನೋಡುತ್ತಿದೆ. 

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟೋರ್ಟ್ಸ್‌ 18

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.