ಬರ್ನ್(ಸ್ವಿಟ್ಜರ್ಲೆಂಡ್): ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವ ಅಂತರರಾಷ್ಟ್ರೀಯ ಫುಟ್‌ಬಾಲ್ ಫೆಡರೇಷನ್ (ಫಿಫಾ) ಅಧ್ಯಕ್ಷ ಜಿಯಾನಿ ಇನ್ಫಾಂಟಿನೊ ಅವರನ್ನು ಹುದ್ದೆಯಿಂದ ಅಮಾನತು ಮಾಡಬೇಕೆಂದು ಫಿಫಾದ ಮಾಜಿ ಅಧ್ಯಕ್ಷ ಸೆಪ್ ಬ್ಲಾಟರ್ ಆಗ್ರಹಿಸಿದ್ದಾರೆ.
ಮೊಕದ್ದಮೆಗೆ ಸಂಬಂಧಿಸಿದಂತೆ, ಇನ್ಫಾಂಟಿನೊ ಅವರು ಸ್ವಿಸ್ ಅಟಾರ್ನಿ ಜನರಲ್ ಮೈಕೆಲ್ ಲೂಬರ್ ಅವರೊಂದಿಗೆ ನಡೆಸಿದ ಮಾತುಕತೆಯ ವಿವರಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಆದರೆ ತಮ್ಮ ಮೇಲಿನ ಆರೋಪಗಳನ್ನು ಲೂಬರ್ ಹಾಗೂ ಇನ್ಫಾಂಟಿನೊ ಅಲ್ಲಗಳೆದಿದ್ದಾರೆ.
‘ಫಿಫಾದ ನೀತಿ ಆಯೋಗವು (ಎಥಿಕ್ಸ್ ಕಮಿಟಿ) ಇನ್ಫಾಂಟಿನೊ ವಿರುದ್ಧ ವಿಚಾರಣೆಯನ್ನು ಆರಂಭಿಸಿರುವುದು ಸ್ಪಷ್ಟವಾಗಿದೆ. ಹೀಗಾಗಿ ಅವರನ್ನು ಅಮಾನತು ಮಾಡಬೇಕು’ ಎಂದು 84 ವರ್ಷದ ಬ್ಲಾಟರ್ ಹೇಳಿದ್ದಾರೆ.
ಆದರೆ ಬ್ಲಾಟರ್ ಅವರ ಹೇಳಿಕೆ ಕುರಿತು ಫಿಫಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಬ್ಲಾಟರ್ ಅವರು 17 ವರ್ಷಗಳ ಕಾಲ ಫಿಫಾ ಅಧ್ಯಕ್ಷ ಹುದ್ದೆಯಲ್ಲಿದ್ದರು. 2015ರಲ್ಲಿ ಕ್ರಿಮಿನಲ್ ವಿಚಾರಣೆಗೆ ಸಂಬಂಧಿಸಿದಂತೆ ಫಿಫಾದ ನೀತಿ ಸಮಿತಿಯು ಅವರನ್ನು ಅಮಾನತು ಮಾಡಿತ್ತು. ಅಲ್ಲದೆ ಅವರ ಮೇಲೆ ನಿಷೇಧವನ್ನೂ ಹೇರಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.