ADVERTISEMENT

2021ರ ಫೆಬ್ರುವರಿ 17ರಿಂದ ಮಹಿಳಾ ಕಿರಿಯರ ಫಿಫಾ ವಿಶ್ವಕಪ್‌

ಪಿಟಿಐ
Published 12 ಮೇ 2020, 19:30 IST
Last Updated 12 ಮೇ 2020, 19:30 IST
ಫೂಟ್‌ಬಾಲ್‌
ಫೂಟ್‌ಬಾಲ್‌    

ನವದೆಹಲಿ: ಭಾರತ ಆತಿಥ್ಯ ವಹಿಸಲಿರುವ ಫಿಫಾ 17 ವರ್ಷದೊಳಗಿನ ಮಹಿಳೆಯರ ವಿಶ್ವಕಪ್‌ ಫುಟ್‌ಬಾಲ್ ಟೂರ್ನಿಯು 2021ರ ಫೆಬ್ರುವರಿ 17ರಿಂದ ಮಾರ್ಚ್‌ 7ರವರೆಗೆ ನಡೆಯಲಿದೆ. ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿದ್ದ ಈ ಟೂರ್ನಿಯ ಪರಿಷ್ಕೃತ ದಿನಾಂಕವನ್ನು ಮಂಗಳವಾರ ಪ್ರಕಟಿಸಲಾಗಿದೆ.

ಈ ಮೊದಲು ಟೂರ್ನಿಯು ಈ ವರ್ಷದ ನವಂಬರ್‌ 2ರಿಂದ 21ರವರೆಗೆ ನಿಗದಿಯಾಗಿತ್ತು. ಮಹಾಮಾರಿಯ ಕಾರಣ ಹೋದ ತಿಂಗಳು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು.

‘ಟೂರ್ನಿ 2021ಕ್ಕೆ ನಿಗದಿಯಾಗಿರುವುದರಿಂದ ವಯೋಮಾನದ ಅರ್ಹತಾ ಮಾನದಂಡವು ಬದಲಾಗುವುದಿಲ್ಲ. 2003, ಜನವರಿ 1ರ ನಂತರ ಮತ್ತು 2005ರ ಡಿಸೆಂಬರ್ 31ಕ್ಕಿಂತ ಮೊದಲು ಜನಿಸಿದವರು ಟೂರ್ನಿಗೆ ಅರ್ಹರು’ ಎಂದು ಫಿಫಾ ಹೇಳಿದೆ.

ADVERTISEMENT

‘ಕೋವಿಡ್‌–19 ಪಿಡುಗಿನಿಂದ ಉಂಟಾದ ಬಿಕ್ಕಟ್ಟಿನ ಪರಿಸ್ಥಿತಿಯ ಸಂಪೂರ್ಣ ಅವಲೋಕನ ಹಾಗೂ ಫಿಪಾ ಕಾನ್ಫಡರೇಷನ್ಸ್‌ನ ಶಿಫಾರಸುಗಳ ಬಳಿಕ ಮಂಡಳಿಯ ಬ್ಯೂರೋ ಸಮಿತಿಯು, ಟೂರ್ನಿಯ ಪ್ರಸ್ತಾವಿತ ದಿನಾಂಕವನ್ನು ಖಚಿತಪಡಿಸಿದೆ’ ಎಂದು ಫಿಫಾ ಹೇಳಿದೆ.

ಕೋಲ್ಕತ್ತ, ಗುವಾಹಟಿ, ಭುವನೇಶ್ವರ, ಅಹ್ಮದಾಬಾದ್‌ ಹಾಗೂ ನವೀ ಮುಂಬೈಗಳಲ್ಲಿ ಟೂರ್ನಿಯ ಪಂದ್ಯಗಳು ನಡೆಯಲಿವೆ. ವಿಶ್ವದಾದ್ಯಂತ 16 ತಂಡಗಳು ಪಾಲ್ಗೊಳ್ಳುತ್ತಿದ್ದು, ಆತಿಥೇಯ ಭಾರತ ಸ್ವಯಂ ಅರ್ಹತೆ ಗಳಿಸಿದೆ. ದೇಶದ ಕಿರಿಯ ಮಹಿಳೆಯರಿಗೆ ಇದು ವಿಶ್ವಕಪ್‌ನಲ್ಲಿ ದೊರೆಯುತ್ತಿರುವ ಮೊದಲ ಅವಕಾಶ.

ದಿನಾಂಕ ನಿಗದಿ ಕುರಿತು ಪ್ರತಿಕ್ರಿಯಿಸಿರುವ ಕ್ರೀಡಾ ಸಚಿವ ಕಿರಣ್‌ ರಿಜಿಜು, ಟೂರ್ನಿಯ ಯಶಸ್ಸಿಗೆ ಸಂ‍ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.

ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌) ಹಾಗೂ ಟೂರ್ನಿಯ ಸ್ಥಳೀಯ ಸಂಘಟನಾ ಸಮಿತಿಗಳು (ಎಲ್‌ಒಸಿ), ಫಿಫಾದ ನಿರ್ಧಾರವನ್ನು ಸ್ವಾಗತಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.