ADVERTISEMENT

FIFA World Cup: ಮನಗೆದ್ದ ಜಪಾನ್ ಅಭಿಮಾನಿಗಳು

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2022, 3:11 IST
Last Updated 25 ನವೆಂಬರ್ 2022, 3:11 IST
ಕ್ರೀಡಾಂಗಣದ ಗ್ಯಾಲರಿ ಸ್ವಚ್ಛಗೊಳಿಸಿದ ಜಪಾನ್ ಅಭಿಮಾನಿಗಳು –ಟ್ವಿಟರ್ ಚಿತ್ರ
ಕ್ರೀಡಾಂಗಣದ ಗ್ಯಾಲರಿ ಸ್ವಚ್ಛಗೊಳಿಸಿದ ಜಪಾನ್ ಅಭಿಮಾನಿಗಳು –ಟ್ವಿಟರ್ ಚಿತ್ರ   

ದೋಹಾ: ಬುಧವಾರ ರಾತ್ರಿ ಫಿಫಾ ವಿಶ್ವಕಪ್ ಇತಿಹಾಸದಲ್ಲಿಯೇ ಜಪಾನ್ ತಂಡವು ಐತಿಹಾಸಿಕ ಜಯ ದಾಖಲಿಸಿತು. ಬಲಿಷ್ಠ ಜರ್ಮನಿಗೆ ಸೋಲಿನ ಆಘಾತ ನೀಡಿದ ಜಪಾನ್ ತಂಡದ ಆಟಗಾರರಿಗೆ ಶ್ಲಾಘನೆಯ ಮಹಾಪೂರವೇ ಹರಿಯುತ್ತಿದೆ.

ಪಂದ್ಯ ಮುಗಿದ ನಂತರ ಇದೇ ಕ್ರೀಡಾಂಗಣದಲ್ಲಿ ಜಪಾನ್‌ ತಂಡದ ಅಭಿಮಾನಿಗಳು ಮಾಡಿದ ಸ್ವಚ್ಛತಾ ಕಾರ್ಯ ಈಗ ವಿಶ್ವದೆಲ್ಲೆಡೆ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಪಂದ್ಯ ಮುಗಿದು ಪ್ರೇಕ್ಷಕರೆಲ್ಲ ನಿರ್ಗಮಿಸಿದ ನಂತರ
ಜಪಾನ್ ದೇಶದ ಅಭಿಮಾನಿಗಳ ತಂಡವೊಂದು ಗ್ಯಾಲರಿಯಲ್ಲಿ ಬಿದ್ದ ಕಸವನ್ನು ಹೆಕ್ಕಿ ದೊಡ್ಡ ಚೀಲಗಳಲ್ಲಿ ತುಂಬಿಕೊಂಡು ಹೋದ ವಿಡಿಯೊಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಸ್ವತಃ ಫಿಫಾ ಕೂಡ ಜಪಾನಿಯರ ಕಾಳಜಿ ಹಾಗೂ ಶಿಸ್ತನ್ನು ಕೊಂಡಾಡಿದೆ. ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ವಿಡಿಯೊ ತುಣುಕು ಹಂಚಿಕೊಂಡಿದೆ.

ADVERTISEMENT

ಮೊರೊಕ್ಕೊ ಅಭಿಮಾನಿಯ ಆಕ್ಷೇಪ: ಇದಕ್ಕೆ ಪ್ರತಿಕ್ರಿಯಿಸಿರುವ ಅಭಿಮಾನಿ ಸಿಮೊ ಬೈನ್ ಎಂಬುವವರು, ‘ಜಪಾನ್‌ ಕಾರ್ಯ ಶ್ಲಾಘನೀಯ. ಕ್ರೊವೇಷ್ಯಾ ವಿರುದ್ಧದ ಪಂದ್ಯದಲ್ಲಿ ಆಡಿದ ಮೊರೊಕ್ಕೊ ತಂಡದ ಅಭಿಮಾನಿಗಳು ಇಂತಹದ್ದೇ ಕಾರ್ಯ ಮಾಡಿದ್ದಾರೆ. ಆದರೆ ಫಿಫಾ ಅವರ ಬಗ್ಗೆ ಉಲ್ಲೇಖಿಸಿಲ್ಲ. ನಿಗದಿತ ತಂಡವೊಂದನ್ನಷ್ಟೇ ಉಲ್ಲೇಖಿಸಬೇಕು ಎಂಬ ಪೂರ್ವಯೋಜನೆಯೆನಾದರೂ ಇದೆಯೇ’ ಎಂದು ಪ್ರಶ್ನಿಸಿದ್ದಾರೆ.

ಅವರು ಇದಕ್ಕೆ ಸಂಬಂಧಿಸಿದ ವಿಡಿಯೊ ತುಣುಕುಗಳನ್ನೂ ಹಂಚಿಕೊಂಡಿದ್ದಾರೆ.

ಡ್ರೆಸಿಂಗ್‌ ಕೊಠಡಿಯೂ ಸ್ವಚ್ಛ: ಪಂದ್ಯವನ್ನು ಗೆದ್ದ ಬಳಿಕ ಬಹುತೇಕ ತಂಡಗಳು ಸಂಭ್ರಮಾಚರಣೆ ಮಾಡಿ ಡ್ರೆಸಿಂಗ್‌ ಕೊಠಡಿಯನ್ನು ಅವ್ಯವಸ್ಥೆಯ ಸ್ಥಿತಿಯಲ್ಲಿ ಬಿಟ್ಟು ಹೋಗುತ್ತವೆ. ಆದರೆ ಜಪಾನ್‌ ಆಟಗಾರರು ತಮ್ಮ ಡ್ರೆಸಿಂಗ್‌ ಕೊಠಡಿಯನ್ನೂ ಸ್ವಚ್ಛಗೊಳಿಸಿ, ಎಲ್ಲವನ್ನು ಒಪ್ಪವಾಗಿಟ್ಟು ತೆರಳಿದ್ದಾರೆ. ಆ ಚಿತ್ರವೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.