ADVERTISEMENT

ಫುಟ್‌ಬಾಲ್ ಆಡಳಿತಗಾರ ಖಲೀಲ್ ಇನ್ನಿಲ್ಲ

ಕೆಎಸ್‌ಎಫ್‌ಎ ಅಧ್ಯಕ್ಷ, ಎಐಎಫ್‌ಎಫ್‌ ಖಜಾಂಜಿಯಾಗಿ ಸೇವೆ

​ಪ್ರಜಾವಾಣಿ ವಾರ್ತೆ
Published 10 ಮೇ 2023, 13:21 IST
Last Updated 10 ಮೇ 2023, 13:21 IST
ಎ.ಆರ್‌. ಖಲೀಲ್‌
ಎ.ಆರ್‌. ಖಲೀಲ್‌   

ಬೆಂಗಳೂರು: ರಾಷ್ಟ್ರೀಯ ಮತ್ತು ರಾಜ್ಯ ಫುಟ್‌ಬಾಲ್ ಸಂಸ್ಥೆಗಳ ಆಡಳಿತದಲ್ಲಿ ದೀರ್ಘಕಾಲ ಕಾರ್ಯನಿರ್ವಹಿಸಿದ್ದ ಕರ್ನಾಟಕದ ಎ.ಆರ್‌. ಖಲೀಲ್‌ (91) ಅವರು ಆರ್‌ವಿ ರಸ್ತೆಯ ತಮ್ಮ ನಿವಾಸದಲ್ಲಿ ಬುಧವಾರ ನಿಧನರಾದರು.

ಅಖಿಲ ಭಾರತ ಫುಟ್‌ಬಾಲ್ ಸಂಸ್ಥೆಯ(ಎಐಎಫ್‌ಎಫ್‌) ಖಜಾಂಚಿಯಾಗಿ, ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆಯಲ್ಲಿ (ಕೆಎಸ್‌ಎಫ್‌ಎ) ಅಧ್ಯಕ್ಷರಾಗಿಯೂ ಖಲೀಲ್‌ ಸೇವೆ ಸಲ್ಲಿಸಿದ್ದರು. ಇತ್ತೀಚೆಗೆ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.

ಕೆಎಸ್‌ಎಫ್‌ಎ ಅಧ್ಯಕ್ಷರಾಗಿ 28 ವರ್ಷಗಳ ಕಾರ್ಯನಿರ್ವಹಿಸಿದ್ದ ಅವರು, ಹಲವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪಂದ್ಯಗಳನ್ನು ರಾಜ್ಯದಲ್ಲಿ ಆಯೋಜಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣ ನಿರ್ಮಾಣದಲ್ಲಿಯೂ ಅವರ ಪಾತ್ರ ಗಣನೀಯವಾಗಿತ್ತು.

ADVERTISEMENT

ಆಡಳಿತದ ಹಾದಿ: 1932ರ ಮೇ 4ರಂದು ಜನಿಸಿದ್ದ ಖಲೀಲ್ ಅವರು, ಜವಾಹರ್ ಯೂನಿಯನ್‌ ‘ಎ’ ಡಿವಿಷನ್‌ ಕ್ಲಬ್‌ನ ಮುಖ್ಯಸ್ಥರಾಗುವ ಮೂಲಕ ತಮ್ಮ ಆಡಳಿತದ ಅಭಿಯಾನ ಆರಂಭಿಸಿದರು. 1953ರಲ್ಲಿ ಬೆಂಗಳೂರು ಜಿಲ್ಲಾ ಫುಟ್‌ಬಾಲ್‌ ಸಂಸ್ಥೆ (ಬಿಡಿಎಫ್‌ಎ) ಸದಸ್ಯರಾದರು. 1961–81ರ ಅವಧಿಯಲ್ಲಿ ಕೆಎಸ್‌ಎಫ್‌ಎ ಖಜಾಂಚಿ, 1981–89ರಲ್ಲಿ ಉಪಾಧ್ಯಕ್ಷರಾದರು. 1989ರಿಂದ 2018ರವರೆಗೆ ಕೆಎಸ್‌ಎಫ್‌ಎ ಅಧ್ಯಕ್ಷರಾಗಿದ್ದರು.

1990ರಲ್ಲಿ ಎಐಎಫ್‌ಎಫ್‌ ಖಜಾಂಚಿಯಾಗಿ ಮತ್ತು 2013ರಲ್ಲಿ ಐ– ಲೀಗ್‌ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಏಷ್ಯನ್ ಫುಟ್‌ಬಾಲ್‌ ಕಾನ್ಫಡರೇಷನ್‌ಗೆ 25 ವರ್ಷಗಳ ನಿರಂತರ ಸೇವೆ ಸಲ್ಲಿಸಿದ್ದ ಅವರಿಗೆ ಗೌರವ ಪೂರ್ವಕವಾಗಿ ಚಿನ್ನದ ಪದಕವನ್ನೂ ನೀಡಲಾಗಿತ್ತು.

ಖಲೀಲ್ ಅವರಿಗೆ ಪತ್ನಿ ನೂರ್‌ಜಹಾನ್ ಮತ್ತು ನಾಲ್ವರು ಪುತ್ರಿಯರಿದ್ದಾರೆ.

ಖಲೀಲ್‌ ಅವರ ಅಂತ್ಯಕ್ರಿಯೆ ಬುಧವಾರ ನೆರವೇರಿತು.

ಸಂತಾಪ: ಖಲೀಲ್ ಅವರ ನಿಧನಕ್ಕೆ ಎಐಎಫ್‌ಎಫ್‌ ಮತ್ತು ಕೆಎಸ್‌ಎಫ್‌ಎ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.